ಹುತ್ತರಿ ಆಚರಣೆ ಮೇಲೆ ಕಣ್ಣೀರಿನ ಕರಿಮೋಡ
ಕೊಡಗು

ಹುತ್ತರಿ ಆಚರಣೆ ಮೇಲೆ ಕಣ್ಣೀರಿನ ಕರಿಮೋಡ

November 23, 2018

ಮಡಿಕೇರಿ: ಧಾನ್ಯಲಕ್ಷ್ಮಿಯನ್ನು ಮನೆ ತುಂಬಿಕೊಳ್ಳುವ ಕೊಡಗಿನ ಸಾಂಪ್ರ ದಾಯಿಕ ಹುತ್ತರಿ ಹಬ್ಬಕ್ಕೆ ಜಿಲ್ಲೆ ಸಜ್ಜಾಗಿದೆ ಯಾದರೂ, ಹಿಂದಿನ ಸಂಭ್ರಮ ಕಂಡು ಬರುತ್ತಿಲ್ಲ. ಕೊಡವರು, ಗೌಡ ಸಮು ದಾಯ ಮಾತ್ರವಲ್ಲದೇ ಜಿಲ್ಲೆಯ ಬಹು ತೇಕ ಎಲ್ಲಾ ಸಮುದಾಯದವರು ಹುತ್ತರಿ ಹಬ್ಬವನ್ನು ತಲತಲಾಂತರದಿಂದ ಆಚರಿಸಿ ಕೊಂಡು ಬರುತ್ತಿದ್ದರು. ಆದರೆ, ಆಗಸ್ಟ್ ತಿಂಗಳಲ್ಲಿ ಪ್ರಕೃತಿ ವಿಕೋಪ ಘಟಿಸಿದ ಬಳಿಕ ಜಿಲ್ಲೆಯ ಸಾಂಪ್ರದಾಯಿಕ ಹಬ್ಬಗಳ ಮೇಲೆ ಕಣ್ಣೀರಿನ ಕರಿ ಮೋಡ ಕವಿದಿದೆ.

ಭೂ ಕುಸಿತ ಪ್ರವಾಹದಿಂದಾಗಿ ಭತ್ತದ ಗದ್ದೆಗಳೆಲ್ಲವೂ ಸರ್ವನಾಶಗೊಂಡಿದ್ದು, ಇದನ್ನೇ ನಂಬಿದ್ದ ಕೃಷಿಕರ ಬದುಕು ಬೀದಿಗೆ ಬಿದ್ದಿದೆ. ನೂರಾರು ಮಂದಿ ಮನೆ ಆಸ್ತಿಯನ್ನು ಕಳೆದುಕೊಂಡು ನಿರಾಶ್ರಿತ ರಾಗಿದ್ದು, ಭತ್ತದ ಕದಿರನ್ನು ಮನೆ ತುಂಬಿ ಕೊಳ್ಳಲು ಉಳಿದಿರುವುದಾದರೂ ಏನು ಎಂಬ ಪ್ರಶ್ನೆ ಅವರನ್ನು ಕಾಡುತ್ತಿದೆ. ಮುಕ್ಕೋಡ್ಲು, ಕಾಲೂರು, ತಂತಿಪಾಲ, ಮೊಣ್ಣಂ ಗೇರಿ, ಜೋಡುಪಾಲ, ಮದೆನಾಡು ಸೇರಿದಂತೆ ಪ್ರಕೃತಿ ವಿಕೋಪಕ್ಕೆ ಸಂಪೂ ರ್ಣವಾಗಿ ಮಂಡಿಯೂರಿದ ಗ್ರಾಮಗಳಲ್ಲಿ ಇಂದು ಗದ್ದೆಗಳೇ ಉಳಿದಿಲ್ಲ. ಮಾತ್ರವಲ್ಲ ಈ ಗದ್ದೆಗಳು ಮತ್ತೆಂದೂ ಭತ್ತದ ಪೈರು ಮೊಳಕೆ ಒಡೆಯಲು ಸಾಧ್ಯವಿಲ್ಲದಂತೆ 10 ರಿಂದ 20 ಅಡಿ ಮಣ್ಣು ಆವರಿಸಿದ್ದು, ಈ ಭಾಗದ ಭತ್ತದ ಕೃಷಿಕರಿಗೆ ಕಳೆದ ವರ್ಷದ ಹುತ್ತರಿಯೇ ತಮ್ಮ ಜೀವತಾ ಧಿಯ ಅಂತಿಮ ನೆನಪಾಗಿ ಉಳಿದುಕೊಳ್ಳ ಲಿದೆ. ಹೀಗಾಗಿ ಈ ವರ್ಷದ ಹುತ್ತರಿ ಹಬ್ಬ ಜಿಲ್ಲೆಯ ಬಹುತೇಕರ ಪಾಲಿಗೆ ಕಣ್ಣೀರನ್ನು ತರಿಸುತ್ತಿದೆ.

ಕೊಡವ, ಗೌಡ ಸಮಾಜ ಸೇರಿದಂತೆ ಗ್ರಾಮಗಳ ದೇವಾಲಯಗಳಲ್ಲಿ ಸಾಂಪ್ರ ದಾಯಿಕ ಪೂಜೆಯ ಬಳಿಕ ಕದಿರು ವಿತರಿ ಸುವ ಕಾರ್ಯಕ್ರಮಗಳು ಪ್ರತಿ ವರ್ಷ ದಂತೆ ಈ ಬಾರಿಯೂ ನಡೆಯಲಿದೆ. ತಮಿಳುನಾಡುವಿನಲ್ಲಿ ಎದುರಾದ ಗಜ ಚಂಡಮಾರುತದ ಅಡ್ಡ ಪರಿಣಾಮ ಕೊಡ ಗಿನ ಮೇಲೂ ಬೀರಿದೆ. ಜಿಲ್ಲೆಯ ಗ್ರಾಮೀಣ ಭಾಗಗಳಲ್ಲಿ ಇಂದಿಗೂ ತುಂತುರು ಮಳೆ ಯಾಗುತ್ತಿದ್ದು, ಮೋಡ ಕವಿದ ವಾತಾ ವರಣ ಕಂಡು ಬರುತ್ತಿದೆ. ಈ ಹವಾ ಮಾನ ಭತ್ತದ ಕೃಷಿಯ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದ್ದು, ಫಸಲು ಕೈಗೆ ಬರುವ ನಿರೀಕ್ಷೆ ಭತ್ತದ ಕೃಷಿಕರಿಗಿಲ್ಲ ಎನ್ನುವಂತಾಗಿದೆ. ಹೀಗಾಗಿ ಹುತ್ತರಿ ಹಬ್ಬದ ಸಂಭ್ರಮಕ್ಕೆ ಸೂತಕ ಛಾಯೆ ಜಿಲ್ಲೆ ಯಾದ್ಯಂತ ಆವರಿಸಿದ್ದು, ಸಂಪ್ರದಾಯಕ್ಕೆ ಸೀಮಿತವಾಗಿ ಸಾಂಕೇತಿಕವಾಗಿ ಹಬ್ಬ ಆಚರಿಸಲ್ಪಡುವ ಲಕ್ಷಣಗಳು ಕಂಡು ಬರುತ್ತಿದೆ. ಮಡಿಕೇರಿಯ ಗಾಂಧಿ ಮೈದಾನದಲ್ಲಿ ಬೆರಳೆಣಿಕೆಯ ಪಟಾಕಿ ಮಳಿಗೆಗಳು ತೆರೆಯಲ್ಪಟ್ಟಿದೆಯಾದರು ಹಬ್ಬದ ಗ್ರಾಹಕರ ಕೊರತೆ ಪಟಾಕಿ ಮಳಿಗೆಗಳಿಗೆ ತಟ್ಟಿದೆ.

ಕಕ್ಕಬ್ಬೆಯ ಶ್ರೀ ಪಾಡಿ ಇಗ್ಗುತ್ತಪ್ಪ ದೇವಾ ಲಯ ನಿಗಧಿ ಪಡಿಸಿರುವ ಹಬ್ಬಾಚರ ಣೆಯ ಮುಹೂರ್ತದಂತೆ ಸಂಪ್ರದಾಯ ಬದ್ಧವಾಗಿ ರಾತ್ರಿ 7.15ಕ್ಕೆ ನೆರೆ ಕಟ್ಟುವುದು, 8.15ಕ್ಕೆ ಕದಿರು ತೆಗೆಯುವುದು ಮತ್ತು 9.15ಕ್ಕೆ ಬೋಜನ ಸ್ವೀಕರಿಸಲು ಪ್ರಶಸ್ತ ಸಮಯ ಎಂದು ನಿಗದಿಗೊಳಿಸಲಾಗಿದೆ.

ಹುತ್ತರಿ ಆಚರಣೆ: ಕೊಡವರ ನಾಡಿನಲ್ಲಿ ಪ್ರತಿ ವರ್ಷ ಪುತ್ತರಿಯಂದು ಹರಡುವ ಬೆಳದಿಂಗಳಿಗೆ ವಿಶೇಷ ಸಡಗರವಿದೆ. ಕೊಡಗಿನ ಕೃಷಿಕರ ಪಾಲಿಗೆ ಪುತ್ತರಿ ಯೆಂಬುದು ಸುಗ್ಗಿ ಹಬ್ಬ, ಹಿಗ್ಗಿನ ಹಬ್ಬ. ತಾವು ಬೆವರು ಸುರಿಸಿ ಶ್ರಮದಿಂದ ಹೊಲ ದಲ್ಲಿ ಬೆಳೆದ ಭತ್ತದ ಪೈರನ್ನು ಭೂದೇವಿಗೆ ಪೂಜೆ ಸಲ್ಲಿಸಿ ಹೊಲದಿಂದ ಮನೆಗೆ ಸಾಂಪ್ರದಾಯಿಕವಾಗಿ ತರುವ ಹಬ್ಬವೇ ಪುತ್ತರಿ. ಕೊಡವ ಭಾಷೆಯಲ್ಲಿ ‘ಪುದಿಯ’ ಎಂದರೆ ಹೊಸ ಮತ್ತು ‘ಅರಿ’ ಎಂದರೆ ಅಕ್ಕಿ ಎಂಬ ಅರ್ಥವಿದೆ. ಪುದಿಯ ಅರಿ-ಹೊಸ ಅಕ್ಕಿ ಎಂಬುದೇ ಪುತ್ತರಿಯಾಗಿದ್ದು, ಕೊಡಗಿನ ಪ್ರತೀ ಹೊಲದಲ್ಲೂ ಪುತ್ತರಿ ಹಬ್ಬದಂದು ಪೂಜೆ ನಡೆಯುತ್ತದೆ. ಕುಟುಂಬಸ್ಥರೆಲ್ಲ ಸೇರಿ ಪುತ್ತರಿಯ ರಾತ್ರಿ ಬೆಳದಿಂಗಳ ಬೆಳಕಿನಲ್ಲಿ ಹಬ್ಬದೂಟ ಸೇವಿಸುತ್ತಾರೆ. ಕೊಡಗಿನಲ್ಲಿ ಕೈಲ್ ಮುಹೂರ್ತ, ಕಾವೇರಿ ಸಂಕ್ರಮಣ ಬಿಟ್ಟರೆ ಮೂರನೇ ಪ್ರಮುಖ ಹಬ್ಬವೇ ಪುತ್ತರಿ.

Translate »