ಸಂವಿಧಾನ ಒಂದು ಮಹಾಗ್ರಂಥ, ಒಂದಲ್ಲ ಹತ್ತು ಬಾರಿ ಅಭ್ಯಸಿಸಬೇಕು
ಮೈಸೂರು

ಸಂವಿಧಾನ ಒಂದು ಮಹಾಗ್ರಂಥ, ಒಂದಲ್ಲ ಹತ್ತು ಬಾರಿ ಅಭ್ಯಸಿಸಬೇಕು

August 23, 2019

ಮೈಸೂರು, ಆ.22(ಆರ್‍ಕೆಬಿ)- ಸಂವಿಧಾನ ಎಂಬುದು ಕಥೆ, ಕಾದಂಬರಿ, ಕಾವ್ಯವಲ್ಲ. ಅದೊಂದು ಮಹಾ ಗ್ರಂಥ. ಭಾರತೀಯರಾದ ನಾವು ಅದನ್ನು ಒಂದಲ್ಲ ಹತ್ತು ಬಾರಿಯಾದರೂ ಓದಿಕೊಳ್ಳಬೇಕು ಎಂದು   ಹೈಕೋರ್ಟ್‍ನ ನಿವೃತ್ತ ನ್ಯಾಯಮೂರ್ತಿ ನಾಗಮೋಹನದಾಸ್ ಇಂದಿಲ್ಲಿ ತಿಳಿಸಿದರು.

ಮೈಸೂರಿನ ಕುವೆಂಪುನಗರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕಾಲೇಜು ಶಿಕ್ಷಣ ಇಲಾಖೆ, ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಜಂಟಿಯಾಗಿ ಆಯೋಜಿಸಿದ್ದ ಯುವ ರೆಡ್‍ಕ್ರಾಸ್ ಘಟಕದ ಉದ್ಘಾಟನೆ ನೆರವೇರಿಸಿ, ಬಳಿಕ `ಸಂವಿಧಾನ ಓದು: ಸಂವಾದ’ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

70 ವರ್ಷದಲ್ಲಿ ನಿಜವಾದ ಭಾರತ ನಿರ್ಮಾಣ ವಾಗಿದೆ ಎಂದರೆ ಅದು ಸಂವಿಧಾನದಿಂದ ಮಾತ್ರ ಸಾಧ್ಯವಾಗಿದೆ. ಶಿಕ್ಷಣ, ಉದ್ಯೋಗ, ಆಹಾರ ಇನ್ನಿತರೆ ಕಾಯಿದೆಗಳು ಜನಸಾಮಾನ್ಯರಿಗೆ ಸಮಾನವಾಗಿ ಸಿಗುವಂತಾಗಿದೆ. ಜಗತ್ತಿನ ಹತ್ತು ಪ್ರಮುಖ ರಾಷ್ಟ್ರಗಳ ಪೈಕಿ ಭಾರತ ಒಂದು ಸ್ಥಾನ ಉಳಿಸಿಕೊಂಡಿದೆ ಎಂದರೆ ಅದು ಸಂವಿಧಾನದಿಂದ ಮಾತ್ರ ಸಾಧ್ಯವಾಗಿದೆ ಎಂದರು.

ಅತೀ ಹಿಂದುಳಿದ ಸಮುದಾಯದ ವ್ಯಕ್ತಿಯೊಬ್ಬರು ಇಂದು ದೇಶದ ಪ್ರಧಾನಮಂತ್ರಿಯಾಗಿ, ದಲಿತ ಕುಟುಂಬದಿಂದ ಬಂದ ವ್ಯಕ್ತಿಯೊಬ್ಬರು ದೇಶದ ರಾಷ್ಟ್ರಪತಿಯಾಗಿದ್ದಾರೆ ಎಂದರೆ ಅದು ಸಂವಿಧಾನದ ಕೊಡುಗೆಯಾಗಿದೆ ಎಂದು ಅಭಿಪ್ರಾಯಪಟ್ಟರು.

ಸ್ವಾತಂತ್ರ್ಯ ಪೂರ್ವದಲ್ಲಿ ಚಕ್ರವರ್ತಿಗಳು, ರಾಜ ಮಹಾರಾಜರು ಆಡಳಿತ ನಡೆಸುತ್ತಿದ್ದರು. ಕ್ರಮೇಣ ರಾಜ ಮಹಾರಾಜರು ಹೋಗಿ ಪ್ರಜಾಪ್ರಭುತ್ವ ವ್ಯವಸ್ಥೆ ನಮ್ಮ ದೇಶಕ್ಕೆ ಬಂದಿತು. ಕಾನೂನು ಮಾಡುವ ಅಧಿಕಾರ ಶಾಸಕಾಂಗಕ್ಕೆ ನೀಡಲಾಯಿತು. ಅದನ್ನು ಕಾರ್ಯ ರೂಪಕ್ಕೆ ತರುವುದನ್ನು ಕಾರ್ಯಾಂಗಕ್ಕೆ ವಹಿಸಲಾಯಿತು. ತಪ್ಪು ಮಾಡಿದವರಿಗೆ ದಂಡಿಸುವ ಅಧಿಕಾರವನ್ನು ನ್ಯಾಯಾಂಗಕ್ಕೆ ನೀಡಲಾಯಿತು. ಸಂವಿಧಾನದ ಆಶಯಗಳನ್ನು ಹೇಗೆ ಜಾರಿಗೊಳಿಸ ಬೇಕು ಎಂಬು ದನ್ನು ಈ ಸಂಸ್ಥೆಗಳು ನಿರ್ವಹಿಸಲಿವೆ. ಇದುವೇ ನಮ್ಮ ಪ್ರಜಾಪ್ರಭುತ್ವ ಎಂದು ತಿಳಿಸಿದರು.

ಇನ್ನೊಬ್ಬರಿಗೆ ನೆರವಾಗಿ: ಬದುಕಿಗೆ ಬೇಕಾದದ್ದು ಬರೀ ಕಾನೂನಿನ ಜ್ಞಾನವಲ್ಲ. ಬದುಕಿನ ಪಾಠವೂ ಅತೀ ಅಗತ್ಯ.  ನಾವೆಲ್ಲರೂ ಇನ್ನೊಬ್ಬರಿಗೆ ಸಹಾಯ ಮಾಡಲು ಸಾಧ್ಯವಿದೆ. ನಮ್ಮಿಂದ ಎಷ್ಟು ಸಾಧ್ಯವೋ ಅಷ್ಟು ಸಹಾಯ ಮಾಡುವ ಮೂಲಕ ಮಾನವೀಯ ಮೌಲ್ಯ ಪ್ರದರ್ಶಿಸಬೇಕಿದೆ. ಅಂತಹ ಕೆಲಸವನ್ನು ರೆಡ್ ಕ್ರಾಸ್ ಸಂಸ್ಥೆ ಮಾಡುತ್ತಾ ಬಂದಿದೆ. 1921ರಲ್ಲಿ ಪ್ರಾರಂಭ ವಾದ ಯುವ ರೆಡ್‍ಕ್ರಾಸ್ ಸಂಸ್ಥೆಯ ಸಾವಿರಾರು ಘಟಕ ಗಳು ವಿಶ್ವಾದ್ಯಂತ ಇವೆ. ಲಕ್ಷಾಂತರ ಸದಸ್ಯರಿ ದ್ದಾರೆ ಎಂದು ಹೇಳಿದರು. ಕಾಲೇಜು ಪ್ರಾಂಶುಪಾಲರಾದ ಡಾ.ಎನ್.ರಾಗಿಣಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಮೈಸೂರು ಜಿಲ್ಲಾ ಯುವ ರೆಡ್‍ಕ್ರಾಸ್ ಘಟಕದ ಕಾರ್ಯ ದರ್ಶಿ ಪ್ರೊ.ಎಂ.ಮಹದೇವಪ್ಪ ಉಪಸ್ಥಿತರಿದ್ದರು.

 

Translate »