ವೀರನಹೊಸಳ್ಳಿ,ಆ.22(ಎಂಟಿವೈ)- ಭಾರತದ ಮೇಲೆ ಡಚ್ಚರು, ಮೊಘಲರು, ಫ್ರೆಂಚರು, ಬ್ರಿಟಿಷರು ದಾಳಿ ನಡೆಸಿದರೂ ದಸರಾ ಸೇರಿದಂತೆ ನಮ್ಮ ಪರಂಪರೆ ಮತ್ತು ಆಚರಣೆಗಳಿಗೆ ಧಕ್ಕೆಯಾಗಿಲ್ಲ ಎಂದು ಸಚಿವ ಆರ್.ಅಶೋಕ್ ಹೇಳಿದರು.
ಹುಣಸೂರು ತಾಲೂಕಿನ ವೀರನಹೊಸಳ್ಳಿ ಗೇಟ್ ಬಳಿ ಗುರುವಾರ ದಸರಾ ಆನೆಗಳ `ಗಜಪಯಣ’ಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಭಾರತ ಸಾಂಸ್ಕøತಿಕ, ಧಾರ್ಮಿಕ ಸೇರಿದಂತೆ ಎಲ್ಲಾ ಕ್ಷೇತ್ರಗಳಲ್ಲೂ ಸಂಪದ್ಭರಿತವಾಗಿದೆ. ನಮ್ಮ ದೇಶದ ಮೇಲೆ ಈ ಹಿಂದೆ ಡಚ್ಚರು, ಮೊಘಲರು, ಫ್ರೆಂಚರು, ಬ್ರಿಟಿಷರು ಸೇರಿದಂತೆ ಹಲವರು ದಾಳಿ ನಡೆಸಿ, ನಮ್ಮಲ್ಲಿನ ಸಂಪತ್ತನ್ನು ಕೊಳ್ಳೆ ಹೊಡೆದರು. ವಿಶ್ವದ ಹಲವು ದೇಶಗಳ ಮೇಲೆ ದಾಳಿ ನಡೆದಿವೆ. ಆ ದೇಶಗಳು ಸಂಪೂರ್ಣವಾಗಿ ನೆಲಕಚ್ಚಿವೆ. ಆದರೆ ಹಲವು ದಾಳಿಗೆ ತುತ್ತಾದ ಭಾರತ ಮಾತ್ರ ಇಂದಿಗೂ ಸದೃಢವಾಗಿದೆ. ಸಾಂಸ್ಕøತಿಕವಾಗಿ ನಮ್ಮ ದೇಶ ಇನ್ನಷ್ಟು ಬಲಿಷ್ಠವಾಗಿದೆ. ವಿಜಯನಗರ ಸಾಮ್ರಾಜ್ಯದ ಅವಧಿಯಲ್ಲಿ ಆರಂಭವಾದ ದಸರಾ ಮಹೋತ್ಸವ ಇಂದಿಗೂ ಮುನ್ನಡೆಸಿಕೊಂಡು ಬರುತ್ತಿರುವುದು ಇದಕ್ಕೆ ಸಾಕ್ಷಿ ಎಂದು ಹೇಳಿದರು. ಮೈಸೂರು, ಕೊಡಗು, ಉತ್ತರ ಕರ್ನಾಟಕ ಸೇರಿದಂತೆ 17 ಜಿಲ್ಲೆಗಳಲ್ಲಿ ನೆರೆ ಹಾವಳಿಯಿಂದ ಸಾವಿರಾರು ಕುಟುಂಬ ಗಳು ಸಂತ್ರಸ್ತವಾಗಿವೆ. ಸಂತ್ರಸ್ತ ಕುಟುಂಬಕ್ಕೂ ಒಳಿತಾಗಲಿ ಎಂದು ನಾಡದೇವಿಯನ್ನು ಪ್ರಾರ್ಥಿಸುವುದಕ್ಕೆ ದಸರಾ ಮಹೋತ್ಸವ ಆಚರಿಸುತ್ತಿದ್ದೇವೆ. ನಾಡಿಗೆ ಒಳ್ಳೆಯದಾಗಲಿ ಎಂದು ಪ್ರತಿವರ್ಷ ಚಾಮುಂಡೇಶ್ವರಿ ದೇವಿಗೆ ಪೂಜೆ ಮಾಡಿ ವಿಶ್ವ ವಿಖ್ಯಾತ ಮೈಸೂರು ದಸರಾವನ್ನು ವಿಜೃಂಭಣೆಯಿಂದ ಮಾಡಲಾಗುತ್ತದೆ ಎಂದರು.
ಪ್ರಕೃತಿದತ್ತವಾದ ಗಾಳಿ, ಬೆಳಕು, ನೀರು ಯಾರ ಸ್ವತ್ತೂ ಅಲ್ಲ. ಅವುಗಳನ್ನು ಮುಂದಿನ ಜನಾಂಗಕ್ಕೆ ನೀಡುವಾಗ ಕಲುಷಿತವಾಗದಂತೆ ನೋಡಿಕೊಳ್ಳಬೇಕಾದ ಅಗತ್ಯವಿದೆ. ನಮ್ಮ ನಾಡಿನ ಸಂಪ್ರದಾಯ ಮತ್ತು ಸಂಸ್ಕøತಿಯ ಪ್ರತಿಬಿಂಬವಾದ ದಸರಾ ಹಬ್ಬದ ಪರಂಪರೆಯನ್ನೂ ಮುಂದಿನ ಪೀಳಿಗೆಗೆ ನೀಡಬೇಕು ಎಂದರು. ದಸರಾ ನೋಡಲು ದೇಶ ವಿದೇಶಗಳಿಂದ ಪ್ರವಾಸಿಗರು ಆಗಮಿಸಲಿದ್ದು, ಯಾವುದೇ ತೊಂದರೆಯಾಗದಂತೆ ಇರಲು ಹಾಗೂ ವಿಶ್ವವಿಖ್ಯಾತ ದಸರಾವನ್ನು ವಿಜೃಂಭsಣೆ ಯಿಂದ ಆಚರಿಸಲು ಮುಖ್ಯಮಂತ್ರಿಗಳು 20 ಕೋಟಿ ರೂ. ಅನುದಾನ ನೀಡಿದ್ದಾರೆ. ಅಡೆತಡೆಗಳು ಎದುರಾಗದಂತೆ ನೋಡಿಕೊಂಡು ದಸರಾವನ್ನು ಯಶಸ್ವಿಯಾಗಿ ಆಚರಿಸಿ ನಾಡಿನ ಪರಂಪರೆಯನ್ನು ಉಳಿಸಬೇಕು ಎಂದು ಸಲಹೆ ನೀಡಿದರು.
ಅಧಿಕಾರಿಗಳು ಲಂಚ ಪಡೆದರೆ ಕಠಿಣ ಕ್ರಮ: ನೆರೆ ಸಂತ್ರಸ್ತರು ಈಗಾಗಲೇ ನೊಂದಿದ್ದಾರೆ. ನೊಂದವರ ಜೀವನದಲ್ಲಿ ಮತ್ತೆ ನೋವನ್ನು ತರದಂತೆ ನೋಡಿಕೊಳ್ಳಬೇಕು. ನೆರೆ ಸಂತ್ರಸ್ತರಿಗೆ ಪರಿಹಾರ ನೀಡಲು ಅಧಿಕಾರಿಗಳು ಲಂಚ ಕೇಳಿದರೆ, ಮಧ್ಯವರ್ತಿಗಳನ್ನು ಮುಂದೆ ಬಿಟ್ಟರೆ, ನಿರ್ಲಕ್ಷ್ಯ ಮಾಡಿದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದರು. ಧರ್ಮಸ್ಥಳದ ಹೆಗಡೆಯವರು ನೆರೆ ಪರಿಹಾರ ಸಂತ್ರಸ್ತರ ಮನೆ ನಿರ್ಮಾಣಕ್ಕಾಗಿ 25 ಕೋಟಿ ರೂ. ನೀಡಿದ್ದಾರೆ. ಮಡಿಕೇರಿ ಭಾಗದ ಪ್ರವಾಹ ಪೀಡಿತರಿಗಾಗಿ ನಾಡಿನ ಹಲವು ಕಡೆಗಳಿಂದ ಅಗತ್ಯಕ್ಕಿಂತ ಹೆಚ್ಚಿನ ಸಾಮಗ್ರಿಗಳು ಲಭ್ಯವಾಗಿವೆ. ಪ್ರವಾಹದಿಂದ ಮನೆ ಕಳೆದುಕೊಂಡವರಿಗೆ ಮನೆ ಕಟ್ಟಲು 5 ಲಕ್ಷ ರೂ., ಮನೆ ದುರಸ್ತಿಗಾಗಿ 1 ಲಕ್ಷ ರೂ, ಪ್ರವಾಹಕ್ಕೆ ಸಿಲುಕಿ ಮೃತಪಟ್ಟವರಿಗೆ ಪರಿಹಾರವನ್ನೂ ಸರ್ಕಾರ ನೀಡುತ್ತಿದೆ ಎಂದರು.
ಶಾಸಕ ಎಸ್.ಎ.ರಾಮದಾಸ್ ಮಾತನಾಡಿ, ನಾಡಹಬ್ಬ ದಸರಾ ಮಹೋತ್ಸವ ನಾಡಿನ ದ್ಯೋತಕವಾಗಿದೆ. ನಾಡದೇವಿ ಚಾಮುಂಡೇಶ್ವರಿ ದೇವಿಯನ್ನು ಆರಾಧಿಸುವ ಮೂಲಕ ನಾಡಿಗೆ ಸಮೃದ್ಧಿಯಾಗಲೆಂದು ಪ್ರಾರ್ಥಿಸುವುದರೊಂದಿಗೆ ನೆರೆ ಸಂತ್ರಸ್ತರಿಗೆ ನೆಮ್ಮದಿ ಕರುಣಿಸಲೆಂದು ನಾಡಹಬ್ಬವನ್ನು ಅರ್ಥಪೂರ್ಣವಾಗಿ ಆಚರಿಸಲು ಮುಖ್ಯ ಮಂತ್ರಿ ಬಿ.ಎಸ್.ಯಡಿಯೂರಪ್ಪ ನಿರ್ಧರಿಸಿದ್ದು, ಈಗಾಗಲೇ 18.50 ಕೋಟಿ ರೂ. ಅನುದಾನ ಬಿಡುಗಡೆ ಮಾಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಭಾರತವನ್ನು ಪ್ರಪಂ ಚದ ಅತ್ಯುನ್ನತ ಸ್ಥಾನಕ್ಕೆ ಕೊಂಡೊಯ್ಯಲು ಶ್ರಮಿಸುತ್ತಿರುವ ಸಂದರ್ಭದಲ್ಲಿ ಕಾಶ್ಮೀರದ ಸಮಸ್ಯೆ ಸುಲಲಿತವಾಗಿ ಇತ್ಯರ್ಥವಾಗಿಸಲು ಶಕ್ತಿ ನೀಡಲೆಂದು ಚಾಮುಂಡೇಶ್ವರಿ ಮಾತೆಯನ್ನು ಪ್ರಾರ್ಥಿಸುವುದಾಗಿ ತಿಳಿಸಿದರು. ಇದೇ ವೇಳೆ ಮೊದಲ ತಂಡದಲ್ಲಿ ಆಗಮಿಸಿದ 6 ಆನೆಗಳ ಮಾವುತರನ್ನು ಸರ್ಕಾರದ ವತಿಯಿಂದ ಗೌರವಿಸಲಾಯಿತು.
ಮಾಜಿ ಮೇಯರ್ ಸಂದೇಶ್‍ಸ್ವಾಮಿ ಜೇಬಿಗೆ ಕತ್ತರಿ… 34 ಸಾವಿರ ನಗದು ಕಳವು
ಗಜಪಯಣ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಮಾಜಿ ಮೇಯರ್ ಸಂದೇಶ್ ಸ್ವಾಮಿ ಅವರ ಜೇಬಿಗೆ ಕತ್ತರಿ ಪ್ರಯೋಗಿಸಿ 34 ಸಾವಿರ ನಗದು ಎಗರಿಸಲಾಗಿದೆ. ಭಾರೀ ಜನ ಸಂದಣಿ ಲಾಭ ಪಡೆದು ದುಷ್ಕರ್ಮಿಗಳು ಕೈಚಳಕ ತೋರಿದ್ದಾರೆ.
ಸಚಿವ ಆರ್.ಅಶೋಕ್ ಬಂದ ಸಂದರ್ಭದಲ್ಲಿ ಉಂಟಾದ ನೂಕುನುಗ್ಗಲಿನಲ್ಲಿ ಸಂದೇಶ್ ಸ್ವಾಮಿ ಅವರ ಪ್ಯಾಂಟ್ ಜೇಬಿಗೆ ಕತ್ತರಿ ಹಾಕಿ ಹಣ ಕದಿಯಲಾಗಿದೆ. ಮನವರಿಕೆ ಆಗುತ್ತಿದ್ದಂತೆ ಸಂದೇಶ್ ಸ್ವಾಮಿ, ಸ್ಥಳದಲ್ಲಿದ್ದ ಪೊಲೀಸರ ಗಮನಕ್ಕೆ ತಂದಿ ದ್ದಾರೆ. ಈ ಸಂಬಂಧ ಕಾರ್ಯಪ್ರವೃತ್ತರಾದ ಹುಣಸೂರು ಗ್ರಾಮಾಂತರ ಪೊಲೀಸರು ಹುಣಸೂರಿನ ವಿಜಯನಗರ ಬಡಾವಣೆ ನಿವಾಸಿ ಅಹಮದ್ (38) ಎಂಬಾತನನ್ನು ಬಂಧಿಸಿ, ಆತನ ಬಳಿ ಇದ್ದ 34 ಸಾವಿರ ರೂ.ಗಳನ್ನು ವಶಪಡಿಸಿಕೊಂಡಿದ್ದಾರೆ.