ದ್ವಿಗುಣವಾದ ಮೇಕೆದಾಟು ಯೋಜನಾ ವೆಚ್ಚ
ಮೈಸೂರು

ದ್ವಿಗುಣವಾದ ಮೇಕೆದಾಟು ಯೋಜನಾ ವೆಚ್ಚ

June 4, 2019

ಬೆಂಗಳೂರು: ಕೃಷ್ಣರಾಜ ಸಾಗರ ಅಣೆಕಟ್ಟೆಗೆ ಸಮಾನಾಂತರ ವಾಗಿ ನಿರ್ಮಿಸಲು ಉದ್ದೇಶಿಸಿರುವ ಮೇಕೆದಾಟು ಜಲಾಶಯ ಯೋಜನಾ ವೆಚ್ಚ 5,460 ಕೋಟಿ ರೂ.ಯಿಂದ 9,000 ಕೋಟಿ ರೂ.ಗಳಿಗೆ ಏರಿಕೆಯಾಗಿದೆ.

ಮೇಕೆದಾಟು ಜಲಾಶಯ ಯೋಜನೆಯ ಪೂರ್ಣ ವಿವರವನ್ನು ರಾಜ್ಯ ಸರ್ಕಾರ ಇದುವರೆಗೂ ಕೇಂದ್ರಕ್ಕೆ ನೀಡಿಲ್ಲ ಎಂದು ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ಸಚಿವ ಡಿ.ವಿ. ಸದಾನಂದ ಗೌಡ, ನಗರದಲ್ಲಿಂದು ಸುದ್ದಿಗೋಷ್ಠಿಯಲ್ಲಿ ಆರೋಪ ಮಾಡಿದ ಬೆನ್ನಲ್ಲೇ ಸರ್ಕಾರದ ಉನ್ನತ ಮೂಲಗಳು ಈ ಮಾಹಿತಿಯನ್ನು ಬಹಿರಂಗಪಡಿಸಿವೆ. 2019ರ ಫೆಬ್ರವರಿಯಲ್ಲಿ ಕೇಂದ್ರ ಜಲಸಂಪನ್ಮೂಲ ಇಲಾಖೆಗೆ ವಿಸ್ತøತ ಯೋಜನಾ ವರದಿ ನೀಡಿದ್ದು, ಇದರಂತೆ ನಿರ್ಮಾಣದ ವೆಚ್ಚ 9,000 ಕೋಟಿ ರೂ.ಗಳಾಗಲಿದೆ ಎಂದು ಮೂಲಗಳು ತಿಳಿಸಿವೆ. ರಾಜ್ಯ ಸರ್ಕಾರದ ಮನವಿಗೆ ಅಂದಿನ ಕೇಂದ್ರ ಸಚಿವ ನಿತಿನ್ ಗಡ್ಕರಿ, ಅಣೆಕಟ್ಟು ಅಧ್ಯಯನಕ್ಕೆ ಕರ್ನಾಟಕ ಮತ್ತು ತಮಿಳು ನಾಡಿಗೆ ತಜ್ಞರ ತಂಡ ಕಳುಹಿಸುವುದಾಗಿ ತಿಳಿಸಿದ್ದರು.

ಆದರೆ, ಸಾರ್ವತ್ರಿಕ ಚುನಾವಣೆ ಎದುರಾದ ಹಿನ್ನೆಲೆಯಲ್ಲಿ ತಜ್ಞರ ತಂಡ ಇದುವರೆಗೂ ಭೇಟಿ ನೀಡಿಲ್ಲ ಎಂದು ಮೂಲಗಳು ಹೇಳಿವೆ. ಕುಡಿಯುವ ನೀರಿನ ಯೋಜನೆ ಹಾಗೂ ಸಂಕಷ್ಟ ಸಂದರ್ಭದಲ್ಲಿ ತಮಿಳುನಾಡಿಗೆ ನೀರು ಹರಿಸುವ ಉದ್ದೇಶದಿಂದ ಮೇಕೆದಾಟು ಸಮೀಪ 45 ಟಿಎಂಸಿ ನೀರು ಸಂಗ್ರಹ ಜಲಾಶಯ ನಿರ್ಮಾಣಕ್ಕೆ ಕರ್ನಾಟಕ ಸಚಿವ ಸಂಪುಟ ಸಮ್ಮತಿಸಿದ್ದಲ್ಲದೆ, ಇದರ ಅಂದಾಜು ವೆಚ್ಚ 5,460 ಕೋಟಿ ರೂ. ಎಂದು ನಿಗದಿಪಡಿಸಿ ಒಪ್ಪಿಗೆ ನೀಡಿತ್ತು.

ಆದರೆ, 2019ರ ಫೆಬ್ರವರಿಯಲ್ಲಿ ಕೇಂದ್ರ ಸರ್ಕಾರಕ್ಕೆ ಅಂತಿಮ ವರದಿ ಸಲ್ಲಿಸುವ ವೇಳೆಗೆ ಯೋಜನಾ ವೆಚ್ಚ ದ್ವಿಗುಣಗೊಂಡಿದೆ. ಮೇಕೆದಾಟು ಯೋಜನೆಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಇದುವರೆಗೆ ಸಮಗ್ರ ಯೋಜನಾ ವರದಿ (ಡಿ.ಪಿ.ಆರ್) ಕೇಂದ್ರಕ್ಕೆ ಸಲ್ಲಿಸಿಲ್ಲ ಎಂದು ಸದಾನಂದಗೌಡ ದೂರಿದ್ದಾರೆ.

ಇನ್ನಾದರೂ ರಾಜ್ಯ ಸರ್ಕಾರ ಸಮಗ್ರ ಯೋಜನಾ ವರದಿ ಸಿದ್ಧಪಡಿಸಿ ಕೇಂದ್ರಕ್ಕೆ ಕಳುಹಿಸಲಿ, ಈ ಸಂಬಂಧ ಮುಖ್ಯಮಂತ್ರಿಗಳಿಗೆ ತಾವೇ ಪತ್ರ ಬರೆಯಲಿದ್ದು, ರಾಜ್ಯ ಸರ್ಕಾರ ತಕ್ಷಣ ಕೇಂದ್ರಕ್ಕೆ ಯೋಜನಾ ವರದಿ ಸಲ್ಲಿಸಿದರೆ ಸಂಬಂಧಪಟ್ಟ ಸಚಿವರ ಜತೆ ಚರ್ಚಿಸಿ ಒಪ್ಪಿಗೆ ಕೊಡಿಸಲು ಯತ್ನಿಸುತ್ತೇನೆ. ಒಂದು ವೇಳೆ ಪ್ರಧಾನಮಂತ್ರಿಗಳ ಜತೆ ಮಾತುಕತೆ ಅನಿವಾರ್ಯತೆ ಬಂದರೂ ಮಾತನಾಡುವೆ, ಆದರೆ ಇದುವರೆಗೆ ಮೇಕೆದಾಟು ಯೋಜನೆಗೆ ಸಂಬಂಧಿಸಿದಂತೆ ಸಮಗ್ರ ಯೋಜನಾ ವರದಿ ಸಲ್ಲಿಕೆಯೇ ಆಗಿಲ್ಲ ಎಂದು ವಿಷಾದಿಸಿದರು. ಇದಕ್ಕೆ ಉತ್ತರಿಸಿರುವ ಮೂಲಗಳು, ಕೇಂದ್ರ ಸಚಿವರಿಗೆ ಮಾಹಿತಿಯ ಅರಿವಿಲ್ಲ, ರಾಜ್ಯ ಸರ್ಕರದಿಂದ ಮಾಹಿತಿ ಪಡೆದು ಕೇಂದ್ರದ ಮುಂದಿರುವ ನಮ್ಮ ಯೋಜನೆಗೆ ಅಂತಿಮ ಒಪ್ಪಿಗೆ ಕೊಡಿಸಲಿ ಎಂದಿವೆ.

Translate »