ಸಿಎಂ ಕುಮಾರಸ್ವಾಮಿ ಜನತಾದರ್ಶನ, ಪ್ರಗತಿ ಪರಿಶೀಲನೆ
ಮೈಸೂರು

ಸಿಎಂ ಕುಮಾರಸ್ವಾಮಿ ಜನತಾದರ್ಶನ, ಪ್ರಗತಿ ಪರಿಶೀಲನೆ

June 4, 2019

ಬೆಂಗಳೂರು: ಲೋಕಸಭಾ ಚುನಾವಣೆ ಫಲಿತಾಂಶ ಹಿನ್ನಡೆ ನಂತರ ಮುಖ್ಯ ಮಂತ್ರಿ ಹೆಚ್.ಡಿ. ಕುಮಾರಸ್ವಾಮಿ, ಆಡಳಿತ ಚುರುಕಿಗೆ ಚಾಲನೆ ನೀಡಿದ್ದಾರೆ.ಮುಖ್ಯಮಂತ್ರಿಗಳು ಇಂದು ಗೃಹ ಕಚೇರಿ ಕೃಷ್ಣಾ ದಲ್ಲಿ ಕುಳಿತು ಜನರ ಸಮಸ್ಯೆಗಳನ್ನು ಆಲಿಸಿದ್ದಲ್ಲದೆ, ವಿವಿಧ ಇಲಾಖೆಗಳ ಪ್ರಗತಿ ಪರಿಶೀಲಿಸಿದರು.

ಈ ಸಂದರ್ಭದಲ್ಲಿ ಸಾಲು ಮರದ ತಿಮ್ಮಕ್ಕ, ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ, ಬಾಗೇಪಲ್ಲಿ-ಹಲಗೂರು ಹೆದ್ದಾರಿ ಅಗಲೀಕರಣಕ್ಕಾಗಿ ಕುದೂರು ವ್ಯಾಪ್ತಿಯಲ್ಲಿ ತಾವು ನೆಟ್ಟು ಪೋಷಿಸಿದ ಮರ ಗಳನ್ನು ಕಡಿಯದಂತೆ ಮನವಿ ಮಾಡಿದರು. ತಕ್ಷಣವೇ ಇದಕ್ಕೆ ಸ್ಪಂದಿಸಿದ ಮುಖ್ಯಮಂತ್ರಿ ಅವರು, ಮರ ಗಳನ್ನು ಕಡಿಯದಂತೆ ಅಧಿಕಾರಿಗಳಿಗೆ ಆದೇಶ ನೀಡಿದ್ದಲ್ಲದೆ, ರಸ್ತೆಗೆ ಪರ್ಯಾಯ ಜಾಗ ಹುಡುಕಿ ಎಂದು ಸೂಚಿಸಿದರು. ಮುಖ್ಯಮಂತ್ರಿಗಳ ಗ್ರಾಮ ವಾಸ್ತವ್ಯದ ಬಗ್ಗೆಯೂ ಇದೇ ಸಂದರ್ಭದಲ್ಲಿ ಹಿರಿಯ ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಯಿತು. ಕಳೆದ ಬಾರಿಗಿಂತ ಈ ಬಾರಿ ಗ್ರಾಮ ವಾಸ್ತವ್ಯ ಭಿನ್ನ ವಾಗಿರಲಿದೆ, ಸರ್ಕಾರಿ ಶಾಲೆಯಲ್ಲಿಯೇ ವಾಸ್ತವ್ಯ ಹೂಡಲು ಮುಖ್ಯಮಂತ್ರಿ ಉದ್ದೇಶಿಸಿದ್ದಾರೆ. ವಾಸ್ತವ್ಯ ಸಂದರ್ಭದಲ್ಲಿ ಆಧುನಿಕ ಕೃಷಿ ಪದ್ಧತಿ, ಯಾಂತ್ರೀ ಕೃತ ಕೃಷಿಗೆ ನೆರವು, ರೈತರೊಂದಿಗೆ ಮಾಹಿತಿ ವಿನಿಮಯಕ್ಕೆ ಆದ್ಯತೆ ನೀಡಲು ತೀರ್ಮಾನಿಸ ಲಾಯಿತು. ಗ್ರಾಮ ವಾಸ್ತವ್ಯಕ್ಕೆ ಮೊದಲು ಹಿರಿಯ ಅಧಿಕಾರಿಗಳ ತಂಡ ಗ್ರಾಮಕ್ಕೆ ಭೇಟಿ ನೀಡಿ, ಸುತ್ತ ಮುತ್ತಲ ಗ್ರಾಮಗಳ ಜನರ ಸಮಸ್ಯೆ ಆಲಿಸಿ ನೆರವಿಗೆ ಪೂರಕವಾದ ಸಮಗ್ರ ವರದಿ ಸಿದ್ಧಪಡಿಸಲಿದೆ.

ಇದರಿಂದ ಮುಖ್ಯಮಂತ್ರಿಗಳು ಸ್ಥಳೀಯ ಜನರ ಸಮಸ್ಯೆ ಆಲಿಸಿ, ಸ್ಥಳದಲ್ಲೇ ಪರಿಹಾರ ಕ್ರಮ ಕೈಗೊಳ್ಳಲು ಸಹಕಾರಿಯಾಗುವುದಲ್ಲದೆ, ರಾಜ್ಯಮಟ್ಟದಲ್ಲಿ ನೀತಿ ನಿರೂಪಣೆಗೂ ಸಹಕಾರಿಯಾಗಲಿದೆ ಎಂಬುದು ಮುಖ್ಯಮಂತ್ರಿ ಅವರ ಆಶಯವಾಗಿದೆ. ವಾಸ್ತವ್ಯ ಹೂಡಲಿರುವ ಗ್ರಾಮ ಹಾಗೂ ಜಿಲ್ಲೆಗೆ ಯಾವ ಇಲಾಖೆ ಕೆಲಸಗಳು ಬಾಕಿ ಇವೆ ಎಂಬುದನ್ನು ಪತ್ತೆ ಮಾಡಿ, ಶಾಶ್ವತ ಪರಿಹಾರ ಕೈಗೊಳ್ಳಬೇಕೆಂಬ ಮಹತ್ವದ ಉದ್ದೇಶ ಮುಖ್ಯಮಂತ್ರಿ ಅವರದ್ದಾಗಿದೆ.

ಮುಖ್ಯಮಂತ್ರಿಗಳ ಆಡಳಿತ ಚುರುಕು ಕ್ರಮದ ಸಂದರ್ಭದಲ್ಲೇ, ಜೆಡಿಎಸ್‍ನ ಬಹುತೇಕ ಸಚಿವರು ಬಹುದಿನಗಳ ನಂತರ ಇಂದು ತಮ್ಮ ಕಚೇರಿಗಳಿಗೆ ಹಾಜರಾಗಿ ಕೆಲಸ ನಿರ್ವಹಿಸಿದರು. ಮುಖ್ಯಮಂತ್ರಿ ಅವರ ಸಲಹೆ ಮೇರೆಗೆ ತಮ್ಮ ಇಲಾಖಾ ಅಧಿಕಾರಿ ಗಳ ಜೊತೆ ಸುದೀರ್ಘ ಸಭೆಗಳನ್ನು ನಡೆಸಿ, ತಾವೂ ತಮ್ಮ ನಾಯಕರಂತೆ ಮುಂದಿನ ದಿನಗಳಲ್ಲಿ ಕಾರ್ಯರ್ವಹಿಸುವ ಮುನ್ಸೂಚನೆ ನೀಡಿದ್ದಾರೆ.

Translate »