ಯುವ ಪೀಳಿಗೆಗೆ ಗಾಂಧೀಜಿ ಬಗ್ಗೆ ಮನವರಿಕೆ ಮಾಡಿಕೊಡದಿದ್ದರೆ ದೇಶಕ್ಕೆ ಭವಿಷ್ಯವಿಲ್ಲ: ಮಾಜಿ ಸ್ಪೀಕರ್ ಕೆ.ಆರ್.ಪೇಟೆ ಕೃಷ್ಣ ಎಚ್ಚರಿಕೆ
ಮೈಸೂರು

ಯುವ ಪೀಳಿಗೆಗೆ ಗಾಂಧೀಜಿ ಬಗ್ಗೆ ಮನವರಿಕೆ ಮಾಡಿಕೊಡದಿದ್ದರೆ ದೇಶಕ್ಕೆ ಭವಿಷ್ಯವಿಲ್ಲ: ಮಾಜಿ ಸ್ಪೀಕರ್ ಕೆ.ಆರ್.ಪೇಟೆ ಕೃಷ್ಣ ಎಚ್ಚರಿಕೆ

October 3, 2018

ಮೈಸೂರು: ಯುವ ಪೀಳಿಗೆಗೆ ಮಹಾತ್ಮ ಗಾಂಧಿ ಅವರ ಬಗ್ಗೆ ಮನವರಿಕೆ ಮಾಡಿಕೊಡದಿದ್ದರೆ ಈ ದೇಶಕ್ಕೆ ಭವಿಷ್ಯವಿಲ್ಲ ಎಂದು ಮಾಜಿ ಸ್ಪೀಕರ್ ಕೆ.ಆರ್.ಪೇಟೆ ಕೃಷ್ಣ ಅವರು ಇಂದಿಲ್ಲಿ ಎಚ್ಚರಿಕೆ ನೀಡಿದರು.

ದೇಸಿರಂಗ ಸಾಂಸ್ಕøತಿಕ ಸಂಸ್ಥೆಯು ಮೈಸೂರಿನ ಕಲಾಮಂದಿರದ ಮನೆಯಂಗಳದಲ್ಲಿ ಏರ್ಪಡಿಸಿದ್ದ ‘ಗಾಂಧಿ ಮತ್ತು ಪ್ರಗತಿಪರ ಚಿಂತನೆ’ ಕುರಿತ ವಿಚಾರ ಸಂಕಿರಣ ಮತ್ತು ಸಂವಾದ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ದೇಶಕ್ಕೆ ಸ್ವಾತಂತ್ರ್ಯ ತಂದು ಕೊಟ್ಟು ಬ್ರಿಟೀಷರ ಗುಲಾಮಗಿರಿಯಿಂದ ಮುಕ್ತಿಗೊಳಿಸಿದ ಮಹಾತ್ಮನನ್ನು ಮರೆತಿರುವುದು ವಿಷಾದನೀಯ ಎಂದ ಅವರು, ಯುವ ಪೀಳಿಗೆಗೆ ತಿಳುವಳಿಕೆ ನೀಡದಿದ್ದರೆ ದೇಶಕ್ಕೆ ಭವಿಷ್ಯವಿಲ್ಲ ಎಂದು ನುಡಿದರು.
ಗಾಂಧೀಜಿ ಕಂಡಿದ್ದ ಗ್ರಾಮ ಸ್ವರಾಜ್ ಕಲ್ಪನೆಯಲ್ಲಿ ಅಧಿಕಾರ ವಿಕೇಂದ್ರೀಕರಣಗೊಳಿಸಿ ಜನರ ಕೆಲಸವನ್ನು ಜನರೇ ಮಾಡಿಕೊಳ್ಳಲು ಅವಕಾಶ ನೀಡಿದ್ದರು. ಈಗ ಗಾಂಧೀಜಿ ಆದರ್ಶ, ತ್ಯಾಗ, ಬಲಿದಾನಗಳನ್ನು ನಾವು ಸಂಪೂರ್ಣವಾಗಿ ಮರೆತಿದ್ದೇವೆ ಎಂದೂ ಕೃಷ್ಣ ಅವರು ತಿಳಿಸಿದರು.

ದೇವರು, ಸಮಾಜ ಹಾಗೂ ಕಾನೂನಿಗೂ ಹೆದರುತ್ತಿಲ್ಲ. ಪ್ರಜಾಪ್ರಭುತ್ವ ವರವಲ್ಲ, ಶಾಪವಾಗಿ ಪರಿಣಮಿಸಿದೆ. ಮತಗಳು ಮಾರಾಟವಾಗುತ್ತಿವೆ. ಕಳ್ಳ ಹಣವನ್ನು ರಾಜಕಾರಣಿಗಳು ಗೆಲುವಿನ ಅಸ್ತ್ರವನ್ನಾಗಿಸಿಕೊಂಡಿದ್ದಾರೆ ಎಂದ ಅವರು, ಚುನಾವಣೆಯಲ್ಲಿ ಹಣ ಇರುವವರಿಗೆ ಮಾತ್ರ ಟಿಕೆಟ್ ನೀಡುತ್ತಿರುವುದರಿಂದ ಒಳ್ಳೆಯವರು ಆರಿಸಿ ಬರಲು ಹೇಗೆ ಸಾಧ್ಯ ಎಂದರು.
ಇದೇ ಸಂದರ್ಭ ದೇಸಿರಂಗ ಸಾಂಸ್ಕøತಿಕ ಸಂಸ್ಥೆ ಮುಖ್ಯಸ್ಥ ಕೃಷ್ಣ ಜನಮನ ಅವರ ‘ಗಾಂಧಿ ಮತ್ತು ಪ್ರಗತಿಪರ ಚಿಂತನೆ’ ಪುಸ್ತಕವನ್ನು ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಪ್ರೊ.ಅರವಿಂದ ಮಾಲಗತ್ತಿ ಬಿಡುಗಡೆ ಮಾಡಿದರು. ಚಿಂತಕಿ ಪ್ರೊ.ಆರ್.ಇಂದಿರಾ ಅಧ್ಯಕ್ಷತೆ ವಹಿಸಿದ್ದರು.

Translate »