ಟ್ರ್ಯಾಕ್ಟರ್ ಅಡಿ ಸಿಲುಕಿ ನಿವೃತ್ತ ಡಿಸಿ ನಾಗರಾಜು ಸಾವು
ಮಂಡ್ಯ, ಮೈಸೂರು

ಟ್ರ್ಯಾಕ್ಟರ್ ಅಡಿ ಸಿಲುಕಿ ನಿವೃತ್ತ ಡಿಸಿ ನಾಗರಾಜು ಸಾವು

July 13, 2018

ಮಂಡ್ಯ: ಜಮೀನು ಉಳುಮೆ ಮಾಡುತ್ತಿದ್ದಾಗ ಟ್ರ್ಯಾಕ್ಟರ್ ಅಡಿ ಸಿಲುಕಿ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ) ಮಾಜಿ ಕಮೀಷ್ನರ್ ಆಗಿದ್ದ ನಿವೃತ್ತ ಜಿಲ್ಲಾಧಿಕಾರಿ ಎಸ್. ಎನ್.ನಾಗರಾಜು (62) ಅವರು ಇಂದು ಬೆಳಿಗ್ಗೆ ಪಾಂಡವಪುರ ತಾಲೂಕು ದೊಡ್ಡ ಬ್ಯಾಡರಹಳ್ಳಿಯಲ್ಲಿ ಸಾವನ್ನಪ್ಪಿದ್ದಾರೆ.

ಮೂಲತಃ ರೈತರ ಮಗನಾಗಿದ್ದ ನಾಗರಾಜು, ಹುಟ್ಟೂರಿಗೆ ತೆರಳಿ ತಮ್ಮ ಜಮೀನಿನಲ್ಲಿ ತಾವೇ ಬೇಸಾಯ ಮಾಡಿಕೊಂಡು ನಿವೃತ್ತಿ ಜೀವನ ನಡೆಸುತ್ತಿದ್ದರು. ಮಾವು, ಸಪೋಟ, ತೆಂಗು, ಪರಂಗಿ ಬೆಳೆಯನ್ನು ಸಮೃದ್ಧವಾಗಿ ಬೆಳೆದು `ಪ್ರಗತಿ ಪರ ರೈತ’ ಎನಿಸಿಕೊಂಡಿದ್ದರು. ತಾವೇ ಟ್ರ್ಯಾಕ್ಟರ್ ನಲ್ಲಿ ಜಮೀನು ಉಳುಮೆ ಮಾಡುತ್ತಿದ್ದ ಅವರು, ಎಂದಿನಂತೆ ಇಂದು ದೊಡ್ಡ ಬ್ಯಾಡರ ಹಳ್ಳಿ ಗ್ರಾಮದ ಬಳಿಯ ಜಮೀನು ಉಳುತ್ತಿದ್ದಾಗ ಒಂದು ಗದ್ದೆ ನಂತರ ಎತ್ತರ ವಿದ್ದ ಮತ್ತೊಂದು ಗದ್ದೆಗೆ ಟ್ರ್ಯಾಕ್ಟರ್ ಹತ್ತಿಸುತ್ತಿದ್ದಾಗ ಮಳೆಯಾಗಿದ್ದ ಕಾರಣ ಏರಲಾಗದೆ ಬೆಳಿಗ್ಗೆ 12.30ರ ವೇಳೆ ಟ್ರ್ಯಾಕ್ಟರ್ ಮಗುಚುವ ಮೊದಲೇ ನಾಗರಾಜು ಕೆಳಕ್ಕುರುಳಿದರು. ಅವರ ಮೇಲೆ ಟ್ರ್ಯಾಕ್ಟರ್ ಉರುಳಿ ಬಿದ್ದಿತು. ಸ್ಥಳದಲ್ಲೇ ಅವರು ಅಸುನೀಗಿದರು ಎಂದು ಜಮೀನಿನಲ್ಲಿ ಕೆಲಸ ಮಾಡುತ್ತಿದ್ದ ಇತರರು ತಿಳಿಸಿದ್ದಾರೆ.

ಮಂಡ್ಯ ಸಾರ್ವಜನಿಕ ಆಸ್ಪತ್ರೆ ಶವಾಗಾರದಲ್ಲಿ ಮರಣೋತ್ತರ ಪರೀಕ್ಷೆ ನಡೆಸಿದ ನಂತರ ಮೃತ ದೇಹವನ್ನು ಸಿದ್ದಯ್ಯನಕೊಪ್ಪಲಿಗೆ ತರಲಾಗಿದೆ. ಪ್ರಕರಣ ದಾಖಲಿಸಿ ಕೊಂಡಿರುವ ಪಾಂಡವಪುರ ಠಾಣೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಐಎಎಸ್ ಅಧಿಕಾರಿಯಾಗಿದ್ದ ನಾಗರಾಜು ಅವರು ರಾಯಚೂರು ಜಿಲ್ಲಾಧಿಕಾರಿ ಯಾಗಿ 2016ರಲ್ಲಿ ನಿವೃತ್ತರಾಗಿದ್ದರು. ಮೃತರು ಪತ್ನಿ ಶ್ರೀಮತಿ ಮಮತಾ, ಪುತ್ರ ಚಿರಾಗ್, ಪುತ್ರಿ ಚೈತ್ರಾ, ಸಹೋದರರು, ಸಹೋದರಿಯರು ಸೇರಿದಂತೆ ಅಪಾರ ಬಂಧು-ಬಳಗದವರನ್ನು ಅಗಲಿದ್ದಾರೆ. ಎಸ್.ಎನ್.ನಾಗರಾಜು ಅವರ ಅಂತ್ಯಕ್ರಿಯೆ ನಾಳೆ (ಶುಕ್ರವಾರ) ಮಧ್ಯಾಹ್ನ 12.30 ಗಂಟೆಗೆ ಅವರ ಸ್ವಗ್ರಾಮ ಮಂಡ್ಯ ತಾಲೂಕು ಸಿದ್ದಯ್ಯನಕೊಪ್ಪಲು ಗ್ರಾಮದ ಜಮೀನಿನಲ್ಲಿ ನೆರವೇರಲಿದೆ ಎಂದು ಸಹೋದರ ನಿವೃತ್ತ ಉಪ ಅರಣ್ಯ ಸಂರಕ್ಷಣಾಧಿಕಾರಿ ಎಸ್.ಎನ್. ದೇವರಾಜು ಅವರು ತಿಳಿಸಿದ್ದಾರೆ.

ಸಿದ್ದಯ್ಯನಕೊಪ್ಪಲಿನ ನಂಜಯ್ಯ ಮತ್ತು ಶ್ರೀಮತಿ ಕೆಂಪಮ್ಮ ದಂಪತಿಗಳ 6ನೇ ಮಗನಾಗಿ 1954ರ ಜೂನ್ 20ರಂದು ಜನಿಸಿದ ಎಸ್.ಎನ್.ನಾಗರಾಜು, ಹುಟ್ಟೂರಲ್ಲಿ ಪ್ರಾಥಮಿಕ, ಯಲಿಯೂರಿನಲ್ಲಿ ಮಾಧ್ಯಮಿಕ ಹಾಗೂ ಮೈಸೂರಿನ ಶಾರದಾ ವಿಲಾಸ ವಿದ್ಯಾ ಸಂಸ್ಥೆಯಲ್ಲಿ ಹೈಸ್ಕೂಲ್ ಮತ್ತು ಪಿಯುಸಿ ವ್ಯಾಸಂಗ ಮಾಡಿದ್ದರು.

ಬೆಂಗಳೂರಿನ ಸೆಂಟ್ರಲ್ ಕಾಲೇಜಿನಲ್ಲಿ ಬಿಎಸ್ಸಿ ಪದವಿ ಹಾಗೂ ಮೈಸೂರಿನ ಮಾನಸಗಂಗೋತ್ರಿಯಲ್ಲಿ ಎಂಎಸ್ಸಿ ಸ್ನಾತಕೋತ್ತರ ಪದವಿ ಪಡೆದ ನಂತರ 1986ರಲ್ಲಿ ಕೆಎಎಸ್ ಪರೀಕ್ಷೆ ಪಾಸು ಮಾಡಿದ್ದ ಎಸ್.ಎನ್.ನಾಗರಾಜು ದಾವಣಿಗೆರೆಯ ತುಂಗ ಭದ್ರಾ ಯೋಜನಾ ವಿಭಾಗದ ಭೂಸ್ವಾಧೀನಾಧಿಕಾರಿಯಾಗಿ ಮೊದಲು ಸರ್ಕಾರಿ ಸೇವೆಗೆ ಸೇರಿದ್ದರು. ನಂತರ ಮೈಸೂರು ಮಹಾನಗರಪಾಲಿಕೆ ಕಂದಾ ಯಾಧಿಕಾರಿಯಾಗಿ, ಕೊಡಗು ವಿಭಾಗಾಧಿಕಾರಿಯಾಗಿ, ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ)ದ ಕಮೀಷ್ನರ್ ಆಗಿ (2-8-1996 ರಿಂದ 24-7-1998), ಚಿಕ್ಕಮಗಳೂರು ಜಿಲ್ಲಾ ಪಂಚಾಯ್ತಿ ಉಪ ಕಾರ್ಯದರ್ಶಿಯಾಗಿ, ಬೆಂಗಳೂರು ವಿಶೇಷ ಜಿಲ್ಲಾಧಿಕಾರಿಯಾಗಿ, ಮುಡಾ ಕಮೀಷ್ನರ್ ಆಗಿ (19-10-2005ರಿಂದ 27-4-2006). ಮೈಸೂರು ವಿಶ್ವವಿದ್ಯಾ ನಿಲಯದ ಕುಲಸಚಿವರಾಗಿ ನಾಗರಾಜು ಅವರು ಸೇವೆ ಸಲ್ಲಿಸಿದ್ದರು. ಐಎಎಸ್ ಅಧಿಕಾರಿಯಾಗಿ ಬಡ್ತಿ ಹೊಂದಿದ ಅವರು, ಬಿಬಿಎಂಪಿ (ಉತ್ತರ) ಅಡಿಷನಲ್ ಕಮೀಷ್ನರ್ ಆಗಿದ್ದ ಅವರು, ನಂತರ ರಾಯಚೂರು ಜಿಲ್ಲಾಧಿಕಾರಿಯಾಗಿ ಸೇವೆ ಸಲ್ಲಿಸಿ 2016ರಲ್ಲಿ ನಿವೃತ್ತರಾಗಿದ್ದರು.

Translate »