ಹಬ್ಬಕ್ಕೆ ನಾನಾ ತಿಂಡಿ ಮಾಡುವಾಗ ಸಿಲಿಂಡರ್ ಸಿಡಿದು ಗಾಯಗೊಂಡಿದ್ದ ಸಹೋದರಿಯರ ಸಾವು
ಮೈಸೂರು

ಹಬ್ಬಕ್ಕೆ ನಾನಾ ತಿಂಡಿ ಮಾಡುವಾಗ ಸಿಲಿಂಡರ್ ಸಿಡಿದು ಗಾಯಗೊಂಡಿದ್ದ ಸಹೋದರಿಯರ ಸಾವು

November 13, 2018

ಮೈಸೂರು: ಹಬ್ಬಕ್ಕೆ ವಿಶೇಷ ತಿಂಡಿ-ತಿನಿಸು ಮಾಡುತ್ತಿದ್ದಾಗ ಅಡುಗೆ ಗ್ಯಾಸ್ ಸಿಲಿಂಡರ್ ಸಿಡಿದು ತೀವ್ರ ಸುಟ್ಟ ಗಾಯಗಳಾಗಿದ್ದ ಸಹೋದರಿಯರು ಸಾವನ್ನಪ್ಪಿರುವ ಘಟನೆ ಕೆ.ಆರ್.ಪೇಟೆ ತಾಲೂಕಿನ ಹರಿಹರಪುರ ಗ್ರಾಮದಲ್ಲಿ ಸಂಭವಿಸಿದೆ.

ಗ್ರಾಮದ ನಿವಾಸಿ ಹೆಚ್.ಸಿ. ಸುರೇಶ ಪತ್ನಿ ಶ್ರೀಮತಿ ಭಾನುಮತಿ (44) ಹಾಗೂ ಕಟ್ಟೆ ಕ್ಯಾತನಹಳ್ಳಿ ಗ್ರಾಮದ ನಿವಾಸಿ ತಾತೇಗೌಡರು ಪತ್ನಿ ಶಶಿಕಲಾ (46) ಸಾವನ್ನಪ್ಪಿದವರು. ಕೆ.ಆರ್. ಪೇಟೆ ತಾಲೂಕು ಜೈನಹಳ್ಳಿಯವರಾದ ಭಾನುಮತಿ ಅವರನ್ನು ಹರಿಹರಪುರದ ಹೆಚ್.ಸಿ.ಸುರೇಶ ಅವರಿಗೂ, ಶಶಿಕಲಾ ಅವರನ್ನು ಕಟ್ಟೆ ಕ್ಯಾತನಹಳ್ಳಿ ತಾತೇಗೌಡರಿಗೆ ಮದುವೆ ಮಾಡಿಕೊಡಲಾಗಿತ್ತು. ಇಬ್ಬರಿಗೂ ತಲಾ ಓರ್ವ ಪುತ್ರ ಹಾಗೂ ಓರ್ವ ಪುತ್ರಿ ಇದ್ದಾರೆ. ಮಹಾನವಮಿ (ಪಿತೃಪಕ್ಷ) ಹಬ್ಬಕ್ಕೆಂದು ಕಟ್ಟೆಕ್ಯಾತನಹಳ್ಳಿಯ ಸಹೋದರಿ ಶಶಿಕಲಾ ಅವರ ಮನೆಯಲ್ಲಿ ತಿಂಡಿ ಬೇಯಿಸುತ್ತಿದ್ದಾಗ ಅಕ್ಟೋಬರ್ 10ರಂದು ಅಡುಗೆ ಗ್ಯಾಸ್ ಸಿಲಿಂಡರ್ ಸ್ಪೋಟಗೊಂಡಿತ್ತು. ದುರಂತದಲ್ಲಿ ಭಾನುಮತಿ ಮತ್ತು ಶಶಿಕಲಾ ಸಹೋದರಿಯರಿಗೆ ತೀವ್ರ ಸುಟ್ಟ ಗಾಯಗಳಾಗಿದ್ದು, ಅವರನ್ನು ಮೈಸೂರಿನ ಜೆಎಸ್‍ಎಸ್ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. 8 ದಿನಗಳ ನಂತರ ಚಿಕಿತ್ಸೆ ಫಲಕಾರಿಯಾಗದೆ ಶಶಿಕಲಾ ಅವರು ಅಕ್ಟೋಬರ್ 18 ರಂದು ಸಾವನ್ನ ಪ್ಪಿದ್ದರು. ಇದೀಗ ಇಂದು ಮುಂಜಾನೆ ಭಾನುಮತಿ ಕೊನೆಯುಸಿರೆಳೆದರು.

ಇಂದು ಬೆಳಿಗ್ಗೆ ಮೈಸೂರು ಮೆಡಿಕಲ್ ಕಾಲೇಜು ಮತ್ತು ಸಂಶೋಧನಾ ಸಂಸ್ಥೆಯ ಶವಾಗಾರದಲ್ಲಿ ಮರಣೋತ್ತರ ಪರೀಕ್ಷೆ ನಡೆಸಿದ ನಂತರ ಭಾನುಮತಿ ಮೃತದೇಹ ವನ್ನು ವಾರಸುದಾರರಿಗೆ ಒಪ್ಪಿಸಲಾಯಿತು. ಪಿತೃಪಕ್ಷ ಹಬ್ಬವನ್ನು ಸಡಗರದಿಂದ ಆಚರಿಸಿ ಸಂಭ್ರಮಿಸಬೇಕಾಗಿದ್ದ ಕುಟುಂಬ ದುರಂತದಿಂದಾಗಿ ಶೋಕದಲ್ಲಿ ಮುಳುಗಿದ್ದು, ಎರಡೂ ಮನೆಗಳಲ್ಲಿ ನೀರವ ಮೌನ ಆವರಿಸಿದೆ. ಪ್ರಕರಣ ದಾಖಲಿಸಿಕೊಂಡಿದ್ಧ, ಕೆ.ಆರ್.ಪೇಟೆ ಗ್ರಾಮಾಂತರ ಠಾಣೆ ಪೊಲೀಸರು, ತನಿಖೆ ಕೈಗೊಂಡಿದ್ದಾರೆ.

Translate »