ಮೈಸೂರು: ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಕಾರ್ಮಿಕರ ಬೇಡಿಕೆಗಳನ್ನು ಎಲ್ಲಾ ರಾಜಕೀಯ ಪಕ್ಷಗಳ ಮುಂದಿರಿಸಿ, ಅವುಗಳ ನಿಲುವು ವ್ಯಕ್ತಪಡಿಸಲು ಒತ್ತಾಯಿಸಿ ಹಾಗೂ ದುಡಿಯುವ ವರ್ಗದಲ್ಲಿ ಜಾಗೃತಿ ಮೂಡಿಸಲು ಕೇಂದ್ರ ಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿ (ಜೆಸಿಟಿಯು) ಮುಂದಾಗಿದೆ.
ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಶನಿವಾರ ಜಾಗೃತಿ ಅಭಿಯಾನಕ್ಕಾಗಿ ಹೊರ ತಂದಿರುವ `ಕಾರ್ಮಿಕರ ಸನ್ನದು’ ಕಿರು ಪುಸ್ತಕ ಬಿಡುಗಡೆಗೊಳಿಸಿ ಮಾತ ನಾಡಿದ ಸಿಐಟಿಯು ಜಿಲ್ಲಾಧ್ಯಕ್ಷ ಬಾಲಾಜಿರಾವ್, ಕೇಂದ್ರದ ಎನ್‍ಡಿಎ ಸರ್ಕಾರ ದುಡಿಯುವ ವರ್ಗವನ್ನು ಸಂಕಷ್ಟಕ್ಕೆ ದೂಡಿದ್ದು, ಕಾರ್ಮಿಕರು, ರೈತರು ಸೇರಿದಂತೆ ಶ್ರಮ ಜೀವಿಗಳ ಜೀವನ ದುಸ್ತರವಾಗಿದೆ. ಕಾರ್ಮಿಕ ಹಾಗೂ ಜನ ವಿರೋಧಿ ಬಿಜೆಪಿಯನ್ನು ತಿರಸ್ಕರಿಸಲು ಕರೆ ನೀಡಲಾಗುವುದು ಎಂದು ಹೇಳಿದರು.
ರಾಷ್ಟ್ರದ ಕಾರ್ಮಿಕರ ಬೇಡಿಕೆಗಳ ಸನ್ನದ್ದನ್ನು ಕೇಂದ್ರ ಕಾರ್ಮಿಕ ಸಂಘಟನೆಗಳು ಜಂಟಿಯಾಗಿ ಬಿಡುಗಡೆ ಮಾಡಿವೆ. ಜಿಲ್ಲೆಯ ದುಡಿಯುವ ವರ್ಗದ ಬಳಿಗೆ ಹೋಗಿ ಕಾರ್ಮಿಕ ಸನ್ನದು ಕಿರು ಪುಸ್ತಕ ವಿತರಣೆ ಮಾಡಲಾಗುವುದು. ಸಭೆ, ಸಮಾವೇಶ ಹಾಗೂ ಜಾಥಾ ಸೇರಿದಂತೆ ನಾನಾ ಕಾರ್ಯಕ್ರಮಗಳ ಮೂಲಕ ಕಾರ್ಮಿಕರ ಹಕ್ಕುಗಳ ರಕ್ಷಣೆಗೆ ಜಾಗೃತಿ ಮೂಡಿಸಲಾಗುವುದು ಎಂದರು.
ಎನ್‍ಡಿಎ ಸರ್ಕಾರದಿಂದ ಕಾರ್ಮಿಕರ ಯಾವುದೇ ಬೇಡಿಕೆ ಈಡೇರಿಲ್ಲ. ಸಾರ್ವಜನಿಕ ಉದ್ದಿಮೆಗಳನ್ನು ಖಾಸಗಿಕರಣ ಮಾಡಲು ಈ ಸರ್ಕಾರ ಹವಣಿಸು ತ್ತಿದೆ. ಕೇಂದ್ರೀಯ ಸಂಸ್ಥೆಗಳಿಗೆ ಹಣಕಾಸು ನೆರವು ನೀಡದ ಪರಿಣಾಮ ಕಾರ್ಮಿಕ ರಿಗೆ ಸರಿಯಾಗಿ ವೇತನ ಕೂಡ ನೀಡಿಲ್ಲ. ಕಾರ್ಮಿಕರ ಹೋರಾಟಕ್ಕೆ ಸ್ಪಂದಿಸದ ಎನ್‍ಡಿಎ ಮತ್ತೆ ಅಧಿಕಾರಕ್ಕೆ ಬಂದರೆ ಶ್ರಮ ಜೀವಿಗಳಿಗೆ ಉಳಿಗಾಲವಿಲ್ಲ. ಇದಕ್ಕೆ ಪರ್ಯಾಯ ಕಾಂಗ್ರೆಸ್ ಕೂಡ ಅಲ್ಲ. ಹೀಗಾಗಿ ಉತ್ತಮ ಅಭ್ಯರ್ಥಿಗಳನ್ನು ಆಯ್ಕೆ ಮಾಡುವಂತೆ ಅರಿವು ಮೂಡಿಸಲಾಗುವುದು ಎಂದು ಹೇಳಿದರು. ಸಿಐಟಿಯು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜಯರಾಮ್, ವಿವಿಧ ಕಾರ್ಮಿಕ ಸಂಘಟನೆಗಳ ಮುಖಂಡರಾದ ಚಂದ್ರಶೇಖರ ಮೇಟಿ, ಯಶೋಧರ್ ಮತ್ತಿತರರು ಗೋಷ್ಠಿಯಲ್ಲಿದ್ದರು.