ಮೈಸೂರು,ಜೂ.24(ಎಂಟಿವೈ)- ಮುಜರಾಯಿ ಇಲಾಖೆಗೆ ಸೇರಿದ ಮೈಸೂರಿನ ನಂಜರಾಜ ಬಹದ್ದೂರ್ ಛತ್ರದ ಆಸ್ತಿ ನಿರ್ವಹಣೆ ಮಾಡಲು ಜಿಲ್ಲಾಡಳಿತ ವಿಫಲವಾಗಿದೆ ಎಂದು ನಂಜರಾಜ ಬಹ ದ್ದೂರ್ ಛತ್ರದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಸಿ.ಕೃಷ್ಣಪ್ಪ ಆರೋಪಿಸಿದ್ದಾರೆ.
ಮೈಸೂರಿನ ನಂಜರಾಜ ಬಹದ್ದೂರ್ ಛತ್ರದಲ್ಲಿ ಸೋಮವಾರ ಸುದ್ದಿಗೋಷ್ಠಿ ಯಲ್ಲಿ ಮಾತನಾಡಿದ ಅವರು, ಛತ್ರದ ಆಸ್ತಿಯನ್ನು ಸಮರ್ಪಕವಾಗಿ ಬಳಸಿ ಕೊಳ್ಳಲು ಸಾಧ್ಯವಾಗದಂತಹ ಸ್ಥಿತಿ ನಿರ್ಮಾಣ ವಾಗಿದೆ. ಸಾರ್ವಜನಿಕರ ಉಪಯೋಗ ಕ್ಕಾಗಿ ನಂಜರಾಜ ಬಹದ್ದೂರ್‍ರವರು ಈ ಆಸ್ತಿಯನ್ನು ದಾನ ನೀಡಿ, ಲಾಭ ದಾಯಕ ಅಂಶಕ್ಕೆ ಬಳಸಿಕೊಳ್ಳದಂತೆ ಸಲಹೆ ಯನ್ನೂ ನೀಡಿದ್ದಾರೆ. ಆದರೆ ಇತ್ತೀಚಿನ ದಿನಗಳಲ್ಲಿ ಸಾರ್ವಜನಿಕರ ಹಿತಾಸಕ್ತಿ ಬದಿಗೊತ್ತಲಾಗಿದೆ ಎಂದು ಆರೋಪಿಸಿದರು.
ಛತ್ರಕ್ಕೆ ಸೇರಿದ ಪಾಳು ಬಿದ್ದ ಸ್ಥಳದಲ್ಲಿ ಅಭಿವೃದ್ಧಿ ಕಾರ್ಯ ಕೈಗೊಳ್ಳುವ ಮೂಲಕ ಆದಾಯವನ್ನು ಪಡೆಯುವಂತೆ ಜಿಲ್ಲಾಧಿ ಕಾರಿಗಳಿಗೆ ಅನೇಕ ಬಾರಿ ಮನವಿ ಮಾಡ ಲಾಗಿದೆ. ಆದರೂ ಯಾವುದೇ ಪ್ರಯೋ ಜನವಾಗಿಲ್ಲ. ನಂಜರಾಜ ಬಹದ್ದೂರ್ ಛತ್ರದ ವ್ಯವಸ್ಥಾಪನಾ ಸಮಿತಿಗೆ ಜಿಲ್ಲಾಧಿ ಕಾರಿಗಳೇ ಆಡಳಿತಾಧಿಕಾರಿಯಾಗಿ ದ್ದಾರೆ. ಹಲವು ವರ್ಷಗಳಿಂದ ಜಿಲ್ಲಾಧಿಕಾರಿಗಳು ಕಲ್ಯಾಣಮಂಟಪದತ್ತ ಬಂದಿಲ್ಲ. ಈ ಹಿನ್ನೆಲೆಯಲ್ಲಿ ಅಪರ ಜಿಲ್ಲಾಧಿಕಾರಿಯ ನ್ನಾದರೂ ಆಡಳಿತಾಧಿಕಾರಿಯಾಗಿ ನಿಯೋಜಿಸುವಂತೆ ಸರ್ಕಾರವನ್ನು ಒತ್ತಾಯಿಸಲಾಗಿದೆ ಎಂದು ತಿಳಿಸಿದರು.
ಈ ಹಿನ್ನೆಲೆಯಲ್ಲಿ ಕಳೆದ ವಾರ ನಂಜ ರಾಜ ಬಹದ್ದೂರ್ ಛತ್ರದ ವ್ಯವಸ್ಥಾಪನಾ ಸಮಿತಿ ಸಭೆ ನಡೆಸಿ, ಛತ್ರದ ಖಾಲಿ ಜಾಗವನ್ನು ಸಾರ್ವಜನಿಕರ ಉಪ ಯೋಗಕ್ಕೆ ಬಳಸಿಕೊಳ್ಳುವುದಕ್ಕೆ ವಿವಿಧ ಕಾಮಗಾರಿ ನಡೆಸುವ ನಿಟ್ಟಿನಲ್ಲಿ ಕ್ರಿಯಾ ಯೋಜನೆ ತಯಾರಿಸುವುದರೊಂದಿಗೆ ಕೆಲವು ನಿರ್ಣಯ ಅಂಗೀಕರಿಸಲಾಗಿದೆ. ನಂಜರಾಜ ಬಹದ್ದೂರ್ ಛತ್ರಕ್ಕೆ ಸೇರಿದ 10 ಎಕರೆ ಪ್ರದೇಶದಲ್ಲಿ ಕಿಂಗ್ಸ್‍ಕೋರ್ಟ್ ಹೋಟೆಲ್, ಪೆಟ್ರೋಲ್ ಬಂಕ್, ವಾರ್ತಾ ಭವನ, ಪಶು ಆಸ್ಪತ್ರೆ, ಪ್ರವಾಸೋದ್ಯಮ ಇಲಾಖೆಯ ಕಚೇರಿ ಹಾಗೂ ಇನ್ನಿತರ ಕಟ್ಟಡಗಳನ್ನು ಕಟ್ಟಲಾಗಿದೆ. ಒಂದು ಎಕರೆ ಜಾಗವನ್ನು ಮಹಾರಾಣಿ ವಿಜ್ಞಾನ ಕಾಲೇಜು ಕಟ್ಟಡಕ್ಕಾಗಿ ನೀಡಲಾಗಿದೆ. ಇದ ನ್ನೆಲ್ಲಾ ಹೊರತು ಪಡಿಸಿ ಇನ್ನೂ 5-6 ಎಕರೆ ಖಾಲಿ ಜಾಗ ಪಾಳು ಬಿದ್ದ ಸ್ಥಿತಿಯಲ್ಲಿದ್ದು, ಇದನ್ನು ಯಾವುದೇ ಚಟುವಟಿಕೆಗಳಿಗೂ ಬಳಸಲು ಕ್ರಮ ಕೈಗೊಂಡಿಲ್ಲ ಎಂದರು.
ಈ ಜಾಗವನ್ನು ದೆಹಲಿ ಮಾದರಿ ಯಲ್ಲಿ ವಿಜ್ಞಾನಭವನ ಅಥವಾ ಪಾರ್ಕಿಂಗ್ ವ್ಯವಸ್ಥೆಗೆ ಬಳಸಿಕೊಳ್ಳಬಹುದಾಗಿದೆ. ಪಾರ್ಕಿಂಗ್‍ಗೆ ಬಳಸಿದರೆ ದೇವರಾಜ ಅರಸ್ ರಸ್ತೆ ಸೇರಿದಂತೆ ಸುತ್ತಮುತ್ತಲಿನ ರಸ್ತೆಗಳಲ್ಲಿ ಪಾರ್ಕಿಂಗ್ ಸಮಸ್ಯೆ ನಿವಾ ರಣೆಯಾಗಲಿದೆ. ಆದರೆ ಅಧಿಕಾರಿಗಳು ಇದುವರೆಗೂ ಇಚ್ಛಾಸಕ್ತಿ ಪ್ರದರ್ಶಿಸಿಲ್ಲ. ಈ ಜಾಗದಲ್ಲಿ ಅಭಿವೃದ್ಧಿ ಕಾಮಗಾರಿಗೆ ಸರ್ಕಾರ ಹಣ ನೀಡಲು ಹಿಂದೇಟು ಹಾಕಿದರೆ ಮುಜರಾಯಿ ಇಲಾಖೆಗೆ ಚಾಮುಂಡಿ ಬೆಟ್ಟ, ನಂಜನಗೂಡು, ಮಲೆ ಮಹಾದೇ ಶ್ವರ ಬೆಟ್ಟದ ದೇವಾಲಯಗಳಲ್ಲಿ ಸಂಗ್ರಹ ವಾದ ಹಣವನ್ನು ವಿನಿಯೋಗಿಸಬಹುದಾಗಿದೆ. ಕಾಮಗಾರಿ ಪೂರ್ಣಗೊಂಡ ನಂತರ ಬಂದ ಆದಾಯದಿಂದ ಹಣ ಹಿಂದಿರುಗಿಸ ಬಹುದು ಎಂದು ಅವರು ಅಭಿಪ್ರಾಯಪಟ್ಟರು.
ಮದುವೆಗೆ ದರ ಪರಿಷ್ಕರಣೆ: ನಂಜ ರಾಜ ಬಹದ್ದೂರ್ ಛತ್ರದಲ್ಲಿ ಮದುವೆ ಮಾಡುವುದಕ್ಕೆ ಕೆಲ ವರ್ಷದಿಂದ 40 ಸಾವಿರ ರೂ. ದರ ನಿಗದಿ ಮಾಡ ಲಾಗಿತ್ತು. ಇದರಿಂದ ಹಲವು ವರ್ಷ ಗಳಿಂದ ಯಾವುದೇ ವಿವಾಹ ಕಾರ್ಯ ಕ್ರಮ ಈ ಛತ್ರದಲ್ಲಿ ನಡೆದಿಲ್ಲ. ಇಷ್ಟು ಮೊತ್ತವನ್ನು ಕಟ್ಟಲು ಬಡವರಿಗೆ ಸಾದ್ಯ ವಾಗುವುದಿಲ್ಲ. ಇದನ್ನು ಮನಗಂಡು ವ್ಯವಸ್ಥಾಪನ ಸಮಿತಿ ಸಭೆಯಲ್ಲಿ ಮದುವೆಗೆ 10 ಸಾವಿರ ರೂ. ದರ ನಿಗದಿ ಮಾಡಿ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಹೇಳಿದರು.
ದುರಸ್ತಿ ಮಾಡದೆ ಹಣ ನೀಡಲಾಗಿದೆ: ನಂಜರಾಜ ಬಹದ್ದೂರ್ ಛತ್ರಕ್ಕೆ ಬಣ್ಣ ಬಳಿದು, ವಿವಿಧ ದುರಸ್ತಿ ಮಾಡಲು 25 ಲಕ್ಷ ರೂ. ಮೊತ್ತದ ಕಾಮಗಾರಿಯನ್ನು ನಿರ್ಮಿತಿ ಕೇಂದ್ರಕ್ಕೆ ಈ ಹಿಂದೆ ನೀಡ ಲಾಗಿತ್ತು. ಅದರಲ್ಲಿ 15 ಲಕ್ಷ ರೂ. ಹಣ ಪಾವತಿಸಲಾಗಿದೆ. ಆದರೆ ದುರಸ್ತಿ ಕಾಮ ಗಾರಿ ಪೂರ್ಣಗೊಳಿಸದೆ ಕೆಲಸ ಸ್ಥಗಿತ ಗೊಳಿಸಲಾಗಿದೆ ಎಂದು ಆರೋಪಿಸಿದರು.
ಸುದ್ದಿಗೋಷ್ಠಿಯಲ್ಲಿ ಸಮಿತಿಯ ಸದಸ್ಯ ರಾದ ಚಂದ್ರಕಲಾ, ಕೆ.ರಮೇಶ್, ರಾಮ ಪ್ರಸಾದ್, ವರದರಾಜ್, ಮಾಜಿ ಉಪ ಮೇಯರ್ ಪುಷ್ಪವಲ್ಲಿ ಇತರರುಇದ್ದರು.