ಗುಂಡ್ಲುಪೇಟೆ: ದೇವಸ್ಥಾನದ ಬಾಗಿಲು ಮುರಿದು ಲಕ್ಷಾಂತರ ರೂಪಾಯಿ ನಗ ನಾಣ್ಯ ಕಳುವು ಮಾಡಿರುವ ಘಟನೆ ತಾಲೂಕಿನ ತ್ರಿಯಂಭಕಪುರ ಗ್ರಾಮದ ತ್ರಿಯಂಭಕೇಶ್ವರ ದೇವಸ್ಥಾನದಲ್ಲಿ ಶುಕ್ರವಾರ ಬೆಳಿಗ್ಗೆ ನಡೆದಿದೆ.
ಗುರುವಾರ ತಡ ರಾತ್ರಿಯಲ್ಲಿ ಶ್ರೀ ತ್ರಿಯಂಭಕೇಶ್ವರ, ಅಮ್ಮನವರ ದೇವಸ್ಥಾನದ ಬೀಗ ಹಾಗೂ ಸಪ್ತಮಾತೃಕೆಯರ ದೇವಸ್ಥಾನದ ಬಾಗಿಲು ಮುರಿದು ಕಳ್ಳರು ಪ್ರವೇಶಿಸಿ ಮೂರು ಗೋಲಕಗಳನ್ನು ಒಡೆದು ಲಕ್ಷಾಂತರ ರೂಪಾಯಿ ಕಳವು ಮಾಡಿದ್ದಾರೆ. ಎಂದಿನಂತೆ ಶುಕ್ರವಾರ ಬೆಳಿಗ್ಗೆ ದೇವಸ್ಥಾನಕ್ಕೆ ಅರ್ಚಕ ನಾಗೇಂದ್ರ ಬಂದಾಗ ಪ್ರಕರಣ ಬೆಳಕಿಗೆ ಬಂದಿದ್ದು, ಕೂಡಲೇ ಅವರು ಕಂದಾಯ ಅಧಿಕಾರಿಗಳು ಹಾಗೂ ಪೆÇಲೀಸರಿಗೆ ಮಾಹಿತಿ ನೀಡಿದರು.
ಸ್ಥಳಕ್ಕೆ ತಹಶೀಲ್ದಾರ್ ಸಿ.ಭಾರತಿ, ತೆರಕಣಾಂಬಿ ನಾಡಕಚೇರಿಯ ಕಂದಾಯಾಧಿಕಾರಿ ನಾಗೇಗೌಡ, ಗ್ರಾಮಲೆಕ್ಕಾಧಿಕಾರಿ ರಂಗಸ್ವಾಮಿ ಹಾಗೂ ಪೆÇಲೀಸರು ಭೇಟಿ ನೀಡಿ ಪರಿಶೀಲಿಸಿದರು. ಜಿಲ್ಲಾ ಬೆರಳಚ್ಚು ಭಾಗದ ಪೆÇಲೀಸರು ಆಗಮಿಸಿ ಬೆರಳಚ್ಚುಗಳನ್ನು ಸಂಗ್ರಹಿಸಿದ್ದಾರೆ.2016ರಲ್ಲಿ ಈ ಮೂರು ಗೋಲಕಗಳಲ್ಲಿ 86 ಸಾವಿರ ರೂಪಾಯಿ ಸಂಗ್ರಹವಾಗಿತ್ತು. ಬಳಿಕ ಇವುಗಳನ್ನು ತೆರೆದಿರಲಿಲ್ಲ. ಸುಮಾರು 1.5 ಲಕ್ಷಕ್ಕೂ ಹೆಚ್ಚಿನ ಹಣ ಸಂಗ್ರಹವಾಗಿತ್ತು ಎಂದು ಅಂದಾಜು ಮಾಡಲಾಗಿದೆ.