ಮಕ್ಕಳಿಂದ ತಿರಸ್ಕರಿಸಲ್ಪಟ್ಟು ವೃದ್ಧಾಶ್ರಮ ಸೇರಿರುವ ಹಿರಿಯ ಮಹಿಳೆಯರಿಗೆ ಸನ್ಮಾನ
ಮೈಸೂರು

ಮಕ್ಕಳಿಂದ ತಿರಸ್ಕರಿಸಲ್ಪಟ್ಟು ವೃದ್ಧಾಶ್ರಮ ಸೇರಿರುವ ಹಿರಿಯ ಮಹಿಳೆಯರಿಗೆ ಸನ್ಮಾನ

May 16, 2019

ಮೈಸೂರು: ಮಕ್ಕಳಿಂದ ತಿರಸ್ಕರಿಸಲ್ಪಟ್ಟು ವೃದ್ಧಾಶ್ರಮದಲ್ಲಿ ಕಾಲ ದೂಡುತ್ತಿರುವ ವೃದ್ಧರನ್ನು ಸನ್ಮಾನಿಸುವ ಮೂಲಕ ಪಾತಿ ಫೌಂಡೇಷನ್ ವಿಶ್ವ ತಾಯಂದಿರ ದಿನವನ್ನು ವಿಶಿಷ್ಟವಾಗಿ ಆಚರಿಸಿತು.

`ಜನನಿ ಜನ್ಮಭೂಮಿ’ ಕಾರ್ಯಕ್ರಮದಡಿ ಮೈಸೂರಿನ ಕನಕ ಗಿರಿಯಲ್ಲಿರುವ ಭಾರತಿ ಸೇವಾ ವೃದ್ಧಾಶ್ರಮದ ಏಳು ಮಂದಿ ಹಿರಿಯ ಮಹಿಳೆಯರಿಗೆ ಸನ್ಮಾನಿಸಿ, ಅವರಿಗೆ ಮಕ್ಕಳ ಪ್ರೀತಿ ತೋರಿದರು.

ವೃದ್ಧ ಮಹಿಳೆಯರನ್ನು ಸನ್ಮಾನಿಸಿದ ಮೇಯರ್ ಪುಷ್ಪಲತಾ ಜಗನ್ನಾಥ್ ಅವರು, ನಮ್ಮ ಯಾವುದೇ ಸಾಧನೆ, ಕೀರ್ತಿಯ ಹಿಂದೆ ತಾಯಂದಿರು ಇದ್ದಾರೆ. ಅಂಬೆಗಾಲಿಡುವುದನ್ನು ಕಲಿಸಿ, ಇಂದಿನ ನಮ್ಮ ಶ್ರೇಯಸ್ಸಿಗೆ ತಾಯಿಯೇ ಮೂಲ. ಇಂತಹ ತಾಯಂದಿರನ್ನು ವೃದ್ಧಾಶ್ರಮಕ್ಕೆ ಸೇರಿಸುವ ಮಕ್ಕಳೇ ಹೆಚ್ಚಾಗುತ್ತಿದ್ದಾರೆ. ನಮ್ಮ ಶ್ರೇಯೋಭಿವೃದ್ಧಿ ಬಯಸಿ, ನಮಗಾಗಿ ತಮ್ಮ ಇಡೀ ಜೀವ ಮಾನವನ್ನೇ ಮುಡಿಪಾಗಿಟ್ಟ ತಾಯಿಯನ್ನು ನಮ್ಮ ಬಳಿಯೇ ಇರಿಸಿಕೊಂಡು ಪ್ರೀತಿ ತೋರಿಸುವುದನ್ನು ಬಿಟ್ಟು ಅವರನ್ನು ವೃದ್ಧಾಶ್ರಮಗಳಿಗೆ ತಳ್ಳುವುದು ಸರಿಯಲ್ಲ ಎಂದು ಅಭಿಪ್ರಾಯಪಟ್ಟರು.

ಮೈಸೂರು ಜಿಲ್ಲಾ ಬ್ರಾಹ್ಮಣ ಸಂಘದ ಅಧ್ಯಕ್ಷ ಡಿ.ಟಿ.ಪ್ರಕಾಶ್ ಮಾತನಾಡಿ, ವಿಶ್ವದಲ್ಲಿ ಕೆಟ್ಟ ತಂದೆ ಇರಬಹುದು. ಆದರೆ ಕೆಟ್ಟ ತಾಯಿ ಇರಲು ಸಾಧ್ಯವಿಲ್ಲ. ಮಗುವಿನ ಉಜ್ವಲ ಭವಿಷ್ಯ ನಿರ್ಮಾಣದಲ್ಲಿ ತಾಯಿ ನೀಡುವ ಸಂಸ್ಕಾರ ಮಹತ್ವದ್ದು. ಹಾಗಾಗಿ ಮಕ್ಕಳು ತಂದೆ, ತಾಯಿಯನ್ನು ವೃದ್ಧಾಶ್ರಮಗಳಿಗೆ ತಳ್ಳದೇ ಅವರನ್ನು ಕೊನೆಗಾಲದವರೆಗೂ ನೋಡಿಕೊಳ್ಳಬೇಕು. ಅದುವೇ ತಮಗೆ ಜನ್ಮ ನೀಡಿದ ತಾಯಿ-ತಂದೆಗೆ ಮಕ್ಕಳು ತೀರಿಸುವ ಋಣ ಎಂದು ಹೇಳಿದರು.

ನಗರಪಾಲಿಕೆ ಮಾಜಿ ಸದಸ್ಯ ಎಂ.ಡಿ ಪಾರ್ಥಸಾರಥಿ ಮಾತ ನಾಡಿ, ದೇಶ ಕಾಯುವ ಯೋಧ, ಅನ್ನ ನೀಡುವ ಅನ್ನದಾತ, ಜನ್ಮ ನೀಡಿದ ತಾಯಿ ಈ ಮೂರು ಬಹಳ ಮುಖ್ಯವಾದದ್ದು ಎಂದರು.

ಕಾರ್ಯಕ್ರಮದಲ್ಲಿ ವೆಂಗಿಪುರ ಮಠದ ಇಳೈ ಆಳ್ವಾರ್ ಸ್ವಾಮೀಜಿ, ಭಾರತೀ ಸೇವಾ ವೃದ್ದಾಶ್ರಮದ ವ್ಯವಸ್ಥಾಪಕ ಕೃಷ್ಣ ಮೂರ್ತಿ, ಮಹರ್ಷಿ ವಿದ್ಯಾಸಂಸ್ಥೆ ಕಾರ್ಯದರ್ಶಿ ತೇಜಸ್ ಶಂಕರ್, ಮುಖಂಡರಾದ ವಿಕ್ರಂ ಅಯ್ಯಂಗಾರ್, ಚಕ್ರಪಾಣಿ, ಅಜಯ್ ಶಾಸ್ತ್ರಿ, ವಿನಯ್ ಕಣಗಾಲ್, ಕಡಕೊಳ ಜಗದೀಶ್, ಜಯಸಿಂಹ ಶ್ರೀಧರ್, ಶ್ರೀಕಾಂತ್ ಕಶ್ಯಪ್, ರಂಗನಾಥ್, ಹರೀಶ್ ನಾಯ್ಡು ಇನ್ನಿತರರು ಉಪಸ್ಥಿತರಿದ್ದರು.

Translate »