ಮೈಸೂರು: ರಾಜ್ಯವಷ್ಟೇ ಅಲ್ಲದೆ ಇಡೀ ದೇಶವೇ ಎದುರು ನೋಡು ತ್ತಿರುವ ಮೈಸೂರಿನ ಚಾಮುಂಡೇಶ್ವರಿ ಹೈವೋಲ್ಟೇಜ್ ಕ್ಷೇತ್ರದಲ್ಲಿ ದಿನೇ ದಿನೆ ಚುನಾವಣಾ ಕಣ ರಂಗೇರುತ್ತಿದೆ.
ಕಾಂಗ್ರೆಸ್‍ನಿಂದ ಸ್ವತಃ ಮುಖ್ಯಮಂತ್ರಿ ಸಿದ್ದ ರಾಮಯ್ಯ, ಅವರ ಪ್ರತಿಸ್ಪರ್ಧಿಯಾಗಿ ಜೆಡಿಎಸ್ ಅಭ್ಯರ್ಥಿ, ಹಾಲಿ ಶಾಸಕ ಜಿ.ಟಿ. ದೇವೇಗೌಡ ಅವರು ಸ್ಪರ್ಧಿಸಿರುವುದೇ ಚಾಮುಂಡೇಶ್ವರಿ ಕ್ಷೇತ್ರ ಹೈವೋಲ್ಟೇಜ್ ಕಣವಾಗಲು ಪ್ರಮುಖ ಕಾರಣ. ಹಿಂದೊಮ್ಮೆ ಉಪ ಚುನಾವಣೆ ಅನಿ ವಾರ್ಯವಾಗಿ ಜೆಡಿಎಸ್‍ನ ಶಿವಬಸಪ್ಪ ವಿರುದ್ಧ ಕಣಕ್ಕಿಳಿ ದಿದ್ದ ಸಿದ್ದರಾಮಯ್ಯ, ಬಲು ತ್ರಾಸದಾಯಕವಾಗಿ ಅತ್ಯಲ್ಪ ಮತಗಳಿಂದ ಗೆಲುವು ಸಾಧಿಸಿದ ವೇಳೆ ಸೃಷ್ಟಿಯಾಗಿದ್ದ ಹೈವೋಲ್ಟೆಜ್ ಹವಾ ಮತ್ತೆ ಮರುಕಳಿಸಿರುವುದರಿಂದ ಇದು ಜಿದ್ದಾಜಿದ್ದಿ ಕಣವಾಗಿ ಪರಿಣಮಿಸಿದೆ.
ಉಪ ಚುನಾವಣೆ ಸಂದರ್ಭ ಎರಡೂ ಪಕ್ಷಗಳ ಪ್ರಮುಖ ಮುಖಂಡರು ಕ್ಷೇತ್ರದಲ್ಲೇ ಠಿಕಾಣ ಹೂಡಿ, ಭರ್ಜರಿ ಪ್ರಚಾರ ರಣತಂತ್ರವನ್ನೇ ರೂಪಿಸಿದ್ದರು. ಆಗಲೂ ಅರೆಸೇನಾ ಪಡೆ, ಕೇಂದ್ರ ಸರ್ಕಾರದ ಹಿರಿಯ ಐಎಎಸ್ ಅಧಿಕಾರಿ ಗಳನ್ನೇ ಕೇಂದ್ರ ಚುನಾವಣಾ ಆಯೋಗವು ಚಾಮುಂಡೇ ಶ್ವರಿ ಉಪ ಚುನಾವಣೆಗೆ ನಿಯೋಜಿಸಿಕೊಂಡು, ಕಟ್ಟೆಚ್ಚರ ವಹಿಸಿತ್ತು. ಈಗಲೂ ಅಂತಹುದೇ ವಾತಾವರಣ ನಿರ್ಮಾಣವಾಗಿದ್ದು, ರಾಜ್ಯದಲ್ಲೇ ಚಾಮುಂಡೇಶ್ವರಿ ಕ್ಷೇತ್ರ ಪ್ರಮುಖ ಬಲಾ-ಬಲದ ಕಣವಾಗಿದ್ದು, ಹೈಪರ್ ಸೆನ್ಸಿಟಿವ್ ಜೊತೆಗೆ ಎಕ್ಸ್‍ಪೆಂಡೀಚರ್ ಸೆನ್ಸಿಟಿವ್ ಕ್ಷೇತ್ರ ಎಂದೇ ಚುನಾವಣಾ ಆಯೋಗ ಗುರುತಿಸಿದೆ.
ತಮ್ಮ ನೇತೃತ್ವದಲ್ಲೇ ಚುನಾವಣೆ ಎದುರಿಸುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, ತಾವು ಸ್ಪರ್ಧಿಸಿರುವ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಗೆಲ್ಲಲೇಬೇಕೆಂದು ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ರಾಹುಲ್ ಗಾಂಧಿ ಅವರನ್ನೂ ಕರೆತಂದು ರೋಡ್ ಶೋ ಮೂಲಕ ಭರ್ಜರಿ ಪ್ರಚಾರ ನಡೆಸಿದ್ದಾರೆ. ತಾವೂ ಸಹ ಮೂರು ಹಂತದಲ್ಲಿ ಕ್ಷೇತ್ರದ ಪ್ರತೀ ಹಳ್ಳಿಗೂ ಹೋಗಿ ಪ್ರಚಾರ ಮಾಡಿ, ಮತ ಯಾಚಿಸಿದ್ದಾರೆ. ತಮ್ಮ 5 ವರ್ಷದ ಅವಧಿಯಲ್ಲಿ ಕೊಟ್ಟ ಹಲವು ಕಾರ್ಯಕ್ರಮಗಳನ್ನು ಮುಂದಿಟ್ಟು ಮತದಾರನ ಸೆಳೆಯಲು ಮುಂದಾಗಿರುವ ಸಿದ್ದರಾಮಯ್ಯ, ಮತ್ತೊಮ್ಮೆ ನಾನೇ ಮುಖ್ಯಮಂತ್ರಿಯಾಗುತ್ತೇನೆಂದು ಹೇಳಿ ಗೆಲುವಿಗೆ ಇನ್ನಿಲ್ಲದ ಕಸರತ್ತು ನಡೆಸುತ್ತಿದ್ದಾರೆ.
ಈಗಾಗಲೇ 5 ವರ್ಷಗಳ ಕಾಲ ಶಾಸಕನಾಗಿ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಕೆಲಸ ಮಾಡಿರುವ ಜಿ.ಟಿ. ದೇವೇಗೌಡರು ಈ ಬಾರಿ ಜನರು ತಮ್ಮ ಮೇಲಿಟ್ಟಿರುವ ವಿಶ್ವಾಸ ಹಾಗೂ ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿಯವರ ಬೆಂಬಲದೊಂದಿಗೆ ಅದೇ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸಿಎಂ ಸಿದ್ದರಾಮಯ್ಯ ವಿರುದ್ಧ ಸೆಣಸಾಡುತ್ತಿರುವುದರಿಂದ ಇಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್‍ಗಿಂತ ಜಿ.ಟಿ.ದೇವೇಗೌಡ ಮತ್ತು ಸಿದ್ದರಾಮಯ್ಯರ ಪ್ರತಿಷ್ಠೆ ಜಿದ್ದಾಜಿದ್ದಿಗೆ ಕಾರಣವಾಗಿದೆ.
ಮುಖ್ಯಮಂತ್ರಿಯಾದ ನಂತರ ಈ ಕ್ಷೇತ್ರ ಮರೆತಿರುವ ಸಿದ್ದರಾಮಯ್ಯ, ಇಲ್ಲಿ ಅಭಿವೃದ್ಧಿಗೆ ಅನುದಾನ ನೀಡ ದಿರುವುದನ್ನೇ ದಾಳವಾಗಿಸಿಕೊಂಡು ಕುಮಾರ ಪರ್ವದ ಮೂಲಕ ಹೆಚ್.ಡಿ.ಕುಮಾರಸ್ವಾಮಿ ಅವರು ಸೃಷ್ಟಿಸಿರುವ ಜೆಡಿಎಸ್ ಹವಾ ಬಳಸಿಕೊಂಡು ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಜಿ.ಟಿ.ದೇವೇಗೌಡರು ಪ್ರಚಾರದಲ್ಲಿ ತೊಡಗಿ ದ್ದಾರೆ. ಈಗಾಗಲೇ ಕುಮಾರಸ್ವಾಮಿ ಅವರು ಎರಡು ಹಂತಗಳಲ್ಲಿ ಕ್ಷೇತ್ರದಾದ್ಯಂತ ರೋಡ್ ಶೋ ಮಾಡಿ ತಾವು ಮುಖ್ಯಮಂತ್ರಿಯಾಗಿದ್ದಾಗ ನೀಡಿದ ಜನಪರ ಕಾರ್ಯಕ್ರಮಗಳು, ಮುಂದೆ ಕಾರ್ಯರೂಪಕ್ಕೆ ತರುವ ರೈತರ ಸಾಲ ಮನ್ನಾ, ಶ್ರೀಸಾಮಾನ್ಯ, ಯುವಕರು, ಮಹಿಳೆಯರು ಹಾಗೂ ವೃದ್ಧರ ಕಲ್ಯಾಣ ಕಾರ್ಯ ಕ್ರಮಗಳನ್ನೇ ಹೇಳುವ ಮೂಲಕ ಜಿಟಿಡಿ ಪರ ಮತ ಯಾಚನೆ ನಡೆಸಿದ್ದಾರೆ.
ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು, ಜಿಟಿಡಿ ಪತ್ನಿ ಶ್ರೀಮತಿ ಲಲಿತಾ, ಪುತ್ರ ಜಿ.ಡಿ.ಹರೀಶ್‍ಗೌಡ, ಪುತ್ರಿಯರು, ಸಾವಿರಾರು ಜೆಡಿಎಸ್ ಮುಖಂಡರು ಹಾಗೂ ಕಾರ್ಯಕರ್ತರು ಜಿ.ಟಿ.ದೇವೇಗೌಡರ ಪರ ನಿತ್ಯ ಕ್ಷೇತ್ರದಲ್ಲಿ ಬಿರುಸಿನ ಚುನಾವಣಾ ಪ್ರಚಾರ ನಡೆಸುವ ಮೂಲಕ ಮತ್ತೆ ಕ್ಷೇತ್ರದ ಅಧಿಕಾರ ಹಿಡಿಯಬೇಕು, ಕುಮಾರಸ್ವಾಮಿ ಅವರ ಕೈಬಲಪಡಿಸಿ, ಅವರನ್ನು ಮತ್ತೆ ಮುಖ್ಯಮಂತ್ರಿ ಮಾಡಬೇಕೆಂಬ ಪಣ ತೊಟ್ಟಂತಿದೆ.
ಐದು ವರ್ಷದ ಅವಧಿಯಲ್ಲಿ ಕ್ಷೇತ್ರದ ಜನರೊಟ್ಟಿಗಿದ್ದು, ಕಷ್ಟ-ಸುಖಗಳಲ್ಲಿ ಭಾಗಿಯಾಗುತ್ತಾ ಕುಡಿಯುವ ನೀರು, ರಸ್ತೆ, ಚರಂಡಿ, ಮನೆ, ದನ-ಕರುಗಳಿಗೆ ಮೇವು, ರೈತರಿಗೆ ಬರ ಪರಿಹಾರ ಸೇರಿದಂತೆ ಮೂಲ ಸೌಕರ್ಯ ಒದಗಿಸುತ್ತಾ ಬಂದಿರುವುದರಿಂದ ಜಿ.ಟಿ.ದೇವೇಗೌಡರು ಮತದಾರರಿಗೆ ಸುಲಭವಾಗಿ ಸಿಗಬಲ್ಲ ಶಾಸಕರು ಎಂಬುದು ಕ್ಷೇತ್ರದ ಬಹುತೇಕ ಗ್ರಾಮಗಳಿಗೆ ಭೇಟಿ ನೀಡಿದ `ಮೈಸೂರು ಮಿತ್ರ’ನಿಗೆ ಕಂಡುಬಂದ ವಾತಾವರಣ.
ಬಹು ಗ್ರಾಮ ಕುಡಿಯುವ ನೀರಿನ ಯೋಜನೆ, ಮೈಸೂರು ನಗರಕ್ಕೆ ಹೊಂದಿಕೊಂಡಂತಿರುವ ಹಲವು ಗ್ರಾಮಗಳಿಗೆ ಮುಡಾದಿಂದ ಅಭಿವೃದ್ಧಿ ಯೋಜನೆ ಜಾರಿ, `ಸಮಸ್ಯೆ’ ಎಂದಾಗ ತಕ್ಷಣ ಗ್ರಾಮಗಳಿಗೆ ಧಾವಿಸಿ ಸ್ಪಂದನೆ, ಜನರು ಜಿಟಿಡಿ ಪರ ಒಲವು ತೋರಲು ಪ್ರಮುಖ ಕಾರಣ ಎಂಬುದು ಜೆಡಿಎಸ್ ಮುಖಂಡರ ಅಭಿಮತವೂ ಆಗಿದೆ. ಚುನಾವಣೆಗೆ ದಿನಗಣನೆ ಆರಂಭವಾಗಿದ್ದು, ಮತದಾರ ಪ್ರಭು ಯಾರಿಗೆ ಒಲಿಯುತ್ತಾನೆಂಬುದನ್ನು ಕಾದು ನೋಡ ಬೇಕಾಗಿದೆ. ಅಚ್ಚರಿ ಎಂದರೆ ಕ್ಷೇತ್ರದಾದ್ಯಂತ ಬಿಜೆಪಿ ನಡೆ ನಿಗೂಢ. ಗೋಪಾಲರಾವ್ ಅವರನ್ನು ಪಕ್ಷ ಕಣಕ್ಕಿಳಿಸಿದೆ ಯಾದರೂ, ಜನ ಮಾತ್ರ ಕಾಂಗ್ರೆಸ್-ಜೆಡಿಎಸ್ ಅಭ್ಯರ್ಥಿ ಗಳ ಬಗ್ಗೆಯೇ ತಲೆಕೆಡಿಸಿಕೊಂಡಿದ್ದಾರೆ.