ಬೆಂಬಲ ಬೆಲೆಯಿಂದ ಅತೀರಾ ತಳಿ ಹೊರಕ್ಕೆ ಅತೀರಾ ಭತ್ತ ಬೆಳೆದ ರೈತರ ಕಂಗಾಲು
ಕೊಡಗು

ಬೆಂಬಲ ಬೆಲೆಯಿಂದ ಅತೀರಾ ತಳಿ ಹೊರಕ್ಕೆ ಅತೀರಾ ಭತ್ತ ಬೆಳೆದ ರೈತರ ಕಂಗಾಲು

December 21, 2018

ಮಡಿಕೇರಿ:  ಸರ್ಕಾರವೇ ಬಿತ್ತನೆ ಗಾಗಿ ಅತೀರಾ ತಳಿ ಭತ್ತವನ್ನು ವಿತರಿ ಸಿದ್ದು, ಇದೀಗ ಅದೇ ಅತೀರಾ ಎಂಬ ಕೆಂಪು ಅಕ್ಕಿಯ ಭತ್ತವನ್ನು ಬೆಂಬಲ ಬೆಲೆಯಿಂದ ಹೊರಗಿಟ್ಟಿರುವುದು ಅತೀರಾ ಭತ್ತ ಬೆಳೆದಿ ರುವ ರೈತರನ್ನು ಕಂಗಲಾಗಿಸಿದೆ. ಕೊಡ ಗಿನ ವಿರಾಜಪೇಟೆ ತಾಲೂಕಿನಲ್ಲಿ ಅತೀ ಹೆಚ್ಚು ರೈತರು ಅತೀರಾ ಭತ್ತದ ಬೆಳೆ ಬೆಳೆ ದಿದ್ದು, ಇದೀಗ ಬೆಲೆಯಿಲ್ಲದೆ ತತ್ತರಿಸು ತ್ತಿದ್ದಾರೆ. ಅತೀರಾ ಬೆಳೆಯ ಕಟಾವು ಕಾರ್ಯ ಮುಕ್ತಾಯವಾಗಿದ್ದು, ಭತ್ತ ರೈತರ ಕಣಜ ಗಳಲ್ಲೇ ಉಳಿದುಕೊಂಡಿದೆ. ಅತೀವೃಷ್ಠಿ ಯಿಂದ ತೋಟಗಾರಿಕಾ ಬೆಳೆಗಳು ಕೂಡ ನೆಲಕಚ್ಚಿದ್ದು, ರೈತರು ಮತ್ತು ಬೆಳೆಗಾರರು ಆರ್ಥಿಕ ಮುಗ್ಗಟ್ಟಿಗೆ ಸಿಲುಕಿಕೊಂಡಿದ್ದಾರೆ. ಅತೀರಾ ಭತ್ತಕ್ಕೆ ಉತ್ತಮ ಬೆಲೆ ದೊರಕಿ ದರೆ ತೋಟಗಾರಿಕೆ ಬೆಳೆಗಳಲ್ಲಾದ ನಷ್ಟ ವನ್ನು ಭರಿಸಿಕೊಳ್ಳಬಹುದೆಂಬ ನಿರೀಕ್ಷೆ ಹೊಂದಿದ್ದ ರೈತಾಪಿ ವರ್ಗ ಇದೀಗ ಕಂಗಾ ಲಾಗಿದೆ. ಮಾತ್ರವಲ್ಲದೇ, ರಾಜ್ಯ ಸರಕಾರ ಕೂಡ ಬೆಂಬಲ ಬೆಲೆಯಿಂದ ಅತೀರಾ ಭತ್ತ ವನ್ನು ಕೈ ಬಿಟ್ಟಿರುವುದು ರೈತರಿಗೆ ನುಂಗ ಲಾರದ ತುತ್ತಾಗಿ ಪರಿಣಮಿಸಿದೆ.

ಕುಸಿದ ಬೇಡಿಕೆ: ಅತೀರಾ ಭತ್ತಕ್ಕೆ ದಕ್ಷಿಣ ಕನ್ನಡ, ಮಂಗಳೂರು, ಉಡುಪಿ ಸೇರಿ ದಂತೆ ನೆರೆಯ ಕೇರಳ ರಾಜ್ಯದಿಂದ ಭಾರೀ ಬೇಡಿಕೆ ಈ ಹಿಂದಿನಿಂದಲೂ ಇತ್ತು. ಆದರೆ ಈ ಬಾರಿ ಬೇಡಿಕೆ ಕಂಡು ಬರುತ್ತಿಲ್ಲ. ಹಾಗಾಗಿ ದರವೂ ಕುಸಿತವಾಗಿದೆ. ಇನ್ನು, ಅತೀರಾ ಭತ್ತ ಖರೀದಿಗೆ ಮುಂದಾಗುವ ವರ್ತಕರು 1 ಕ್ವಿಂಟಾಲ್ ಭತ್ತಕ್ಕೆ 1 ಸಾವಿ ರದಿಂದ 1300 ರೂ. ಮಾತ್ರ ದರ ನೀಡು ತ್ತಿರುವುದು ರೈತರನ್ನು ಮತ್ತಷ್ಟು ಸಂಕಷ್ಟಕ್ಕೆ ತಳ್ಳಿದೆ. ವರ್ತಕರು ಖರೀದಿಸುವ ದರಕ್ಕೆ ಭತ್ತ ಮಾರಿದರೆ ಭತ್ತ ಬೆಳೆಯಲು ಖರ್ಚು ಮಾಡಿದ ಅಸಲು ಹಣವೇ ರೈತರಿಗೆ ದೊರಕುವುದಿಲ್ಲ ಎಂಬುವುದು ರೈತರ ಅಳಲು. ಅತ್ತ ಕೈಯಲ್ಲಿದ್ದ ಹಣದೊಂದಿಗೆ ಸಾಲಮಾಡಿ ಭತ್ತ ಬೆಳೆದ ರೈತರಿಗೆ ಇದೀಗ ದಿಕ್ಕೇ ತೋಚದ ಸ್ಥಿತಿ ಎದುರಾಗಿದೆ.

ಬೇಡಿಕೆಯಂತೆ ಪೂರೈಕೆ: ಅತೀರಾ ಭತ್ತಕ್ಕೆ ವಿರಾಜಪೇಟೆ ತಾಲೂಕಿನಿಂದ ಅತೀ ಹೆಚ್ಚು ಬೇಡಿಕೆ ಬಂದ ಹಿನ್ನೆಲೆಯಲ್ಲಿ ಕೃಷಿ ಇಲಾಖೆ ಮೂಲಕ 908 ಕ್ಟಿಂಟಾಲ್ ಅತೀರಾ ತಳಿಯ ಭತ್ತದ ಭಿತ್ತನೆ ಬೀಜ ಪೂರೈಕೆ ಮಾಡಲಾ ಗಿತ್ತು. 1 ಎಕರೆಗೆ 25 ಕೆ.ಜಿ.ಯಂತೆ ಬಿತ್ತ ಲಾದ ಭತ್ತದಿಂದ ಒಟ್ಟು 3650 ಎಕರೆ ಯಲ್ಲಿ ಫಸಲು ಬಂದಿದೆ. ಅದರೊಂದಿಗೆ ಕೆಲವು ರೈತರು ಖಾಸಗಿಯಾಗಿ ಅತೀರಾ ತಳಿಯ ಭತ್ತದ ಬಿತ್ತನೆ ಮಾಡಿದ್ದು, ಭತ್ತವನ್ನು ಕೇಳುವವರೇ ಇಲ್ಲದೇ ತ್ರಿಶಂಕು ಸ್ಥಿತಿ ಎದುರಿಸುತ್ತಿದ್ದಾರೆ.

ಪ್ರಕೃತಿ ವಿಕೋಪದಿಂದ ಅತೀ ಹೆಚ್ಚು ಹಾನಿ ಅನುಭವಿಸಿದ ಮಡಿಕೇರಿ ತಾಲೂ ಕಿನಲ್ಲಿ ಭೂ ಕುಸಿತದಿಂದ ಭತ್ತದ ಗದ್ದೆಗಳೇ ಮಾಯವಾಗಿದೆ. ಮಣ್ಣು ಮುಚ್ಚಿ ಭೂ ಗರ್ಭ ಸೇರಿರುವ ಭತ್ತದ ಗದ್ದೆಗಳಲ್ಲಿ ಮುಂದೆ ಎಂದಿಗೂ ಭತ್ತದ ಕೃಷಿ ಮಾಡಲಾಗದ, ಮತ್ತೊಂದು ಕಡೆ ತೋಟಗಾರಿಕೆ ಬೆಳೆಗ ಳನ್ನೂ ಬೆಳೆಯಲಾಗದ ಸ್ಥಿತಿಯೂ ತಲೆ ದೋರಿದೆ. ದಕ್ಷಿಣ ಕೊಡಗಿನ ಕದನೂರು, ಬೇತ್ರಿ, ಲಕ್ಷಣತೀರ್ಥ, ಕೊಂಗಣ ಹೊಳೆ ಸೇರಿದಂತೆ ನದಿ ತೊರೆಗಳಲ್ಲಿ ಉಕ್ಕೇರಿದ ಪ್ರವಾಹದಿಂದ ಭತ್ತದ ಬೆಳೆಗೆ ಭಾರಿ ಹಾನಿಯಾಗಿದೆ. ಹೀಗಾಗಿ ಜಿಲ್ಲೆಯಲ್ಲಿ ಈ ಬಾರಿ ಭತ್ತದ ಉತ್ಪಾದನೆಯಲ್ಲಿ ತೀವ್ರ ಕುಸಿತವಾಗುವ ಎಲ್ಲಾ ಸಾಧ್ಯತೆಯೂ ಇದೆ. ಭತ್ತ ಕಟಾವಿನ ಬಳಿಕ ಉಳಿಯುವ ಹುಲ್ಲನ್ನು ಕೂಡ ನೆರೆ ರಾಜ್ಯಕ್ಕೆ ಸಾಗಿಸಲು ನಿರ್ಬಂಧ ಹೇರಿರುವುದು ರೈತರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ. ಹೀಗಾಗಿ ಹುಲ್ಲು ಕೂಡ ಗದ್ದೆಗಳಲ್ಲೇ ಉಳಿದುಕೊಂಡಿದೆ.

ಒಟ್ಟಿನಲ್ಲಿ ಉತ್ತಮ ದರ ದೊರೆಯುವ ನಿರೀಕ್ಷೆಯೊಂದಿಗೆ ಅತೀರಾ ಭತ್ತ ಬೆಳೆದ ರೈತರ ಸ್ಥಿತಿ ತತ್ತರವಾಗಿದ್ದು, ಬೇಡಿ ಕೆಯೂ ಇಲ್ಲದೆ ಬೆಂಬಲ ಬೆಲೆಯೂ ದೊರೆಯದೆ ಪರಿತಪಿಸುವಂತಾಗಿದೆ. ರಾಜ್ಯ ಸರಕಾರ ಪ್ರಕೃತಿ ವಿಕೋಪಕ್ಕೆ ಸಿಲುಕಿರುವ ಕೊಡಗು ಜಿಲ್ಲೆಯ ರೈತರನ್ನು ವಿಶೇಷವಾಗಿ ಪರಿಗಣಿಸಿ ಅತೀರಾ ಭತ್ತಕ್ಕೂ ಬೆಂಬಲ ಬೆಲೆ ನೀಡ ಬೇಕೆಂದು ರೈತರು ಆಗ್ರಹಿಸಿದ್ದಾರೆ.

Translate »