ಉಗ್ರರ ವಿರುದ್ಧ ಹೋರಾಟ: ಬಿಜೆಪಿಯಿಂದ ತಪ್ಪು ಸಂದೇಶ ರವಾನೆ
ಕೊಡಗು

ಉಗ್ರರ ವಿರುದ್ಧ ಹೋರಾಟ: ಬಿಜೆಪಿಯಿಂದ ತಪ್ಪು ಸಂದೇಶ ರವಾನೆ

March 1, 2019

ಮಡಿಕೇರಿ: ಉಗ್ರರ ವಿರುದ್ಧ ಭಾರತೀಯ ಯೋಧರು ನಡೆಸಿರುವ ಕಾರ್ಯಾಚರಣೆಯ ಬಗ್ಗೆ ಬಿಜೆಪಿ ರಾಜ್ಯಾಧ್ಯಕ್ಷರು ನೀಡಿರುವ ಹೇಳಿಕೆ, ಆ ಪಕ್ಷದ ಭಾವನೆ ಏನು ಎನ್ನುವುದನ್ನು ಸಾಬೀತುಪಡಿಸಿದೆ ಎಂದು ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಟೀಕಿಸಿದ್ದಾರೆ.

ಕುಶಾಲನಗರದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಲು ಆಗಮಿಸಿದ್ದ ಅವರು, ಹಾರಂಗಿ ಹೆಲಿ ಪ್ಯಾಡ್‍ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು.

ದೇಶ ರಕ್ಷಣೆ ಮಾಡುತ್ತಿರುವ ಯೋಧರ ವಿಚಾರದಲ್ಲಿ ಯಾರೂ ಚೆಲ್ಲಾಟವಾಡಬಾರದು, ಇದರಿಂದ ದೇಶಕ್ಕೆ ಮತ್ತು ದೇಶದ ಜನಕ್ಕೆ ಯಾವುದೇ ಲಾಭವಿಲ್ಲವೆಂದು ಅಭಿಪ್ರಾಯಪಟ್ಟ ಮುಖ್ಯಮಂತ್ರಿಗಳು, ವಾಸ್ತವಾಂಶಗಳನ್ನು ಮರೆಮಾಚಿ ಜನರಿಗೆ ತಪ್ಪು ಅಂಶಗಳನ್ನು ಬಿಜೆಪಿ ನೀಡುತ್ತಿದೆಯೆಂದು ಆರೋಪಿಸಿದರು.

ಪುಲ್ವಾಮದಲ್ಲಿ ಹುತಾತ್ಮರಾದ ಮಂಡ್ಯದ ಯೋಧ ಗುರು ಕುಟುಂಬದ ಸದಸ್ಯರೊಬ್ಬರಿಗೆ ಸರ್ಕಾರಿ ಉದ್ಯೋಗ ನೀಡುವ ಕುರಿತು ಅವರು ಇದೇ ಸಂದರ್ಭ ಭರವಸೆ ನೀಡಿದರು.
ಕೊಡಗಿನಲ್ಲಿ ಅತಿವೃಷ್ಟಿ ಹಾನಿಯಿಂದ ಮನೆ ಕಳೆದುಕೊಂಡ ವರಿಗೆ ಪುನರ್ವಸತಿ ಕಲ್ಪಿಸುವ ಕಾರ್ಯಕ್ಕೆ ಚುರುಕು ಮುಟ್ಟಿಸ ಲಾಗುವುದು. ಎನ್‍ಡಿಆರ್‍ಎಫ್ ನಿಯಮಗಳನ್ನು ಬದಿಗಿಟ್ಟು, ಈಗಾಗಲೆ ಬೆಳೆ ಪರಿಹಾರ ವಿತರಣೆÀಗೆ ಕ್ರಮ ಕೈಗೊಳ್ಳಲಾಗಿದೆ. ಕೊಡಗಿನ ಜನರ ಹಲವು ವರ್ಷಗಳ ಬೇಡಿಕೆಯಾಗಿದ್ದ ಕುಶಾಲನಗರ ಮತ್ತು ಪೊನ್ನಂಪೇಟೆಯನ್ನು ಪ್ರತ್ಯೇಕ ತಾಲೂಕುಗಳೆಂದು ಪರಿಗಣಿಸಲು ಸರ್ಕಾರ ಕ್ರಮ ಕೈಗೊಂಡಿದೆ ಎಂದು ಇದೇ ಸಂದರ್ಭ ತಿಳಿಸಿದರು.

Translate »