ಮೇಲುಕೋಟೆ: ಶತಮಾನದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಜಮೀನಿನಲ್ಲಿ ಬೆಳೆದಿದ್ದ ನೀಲಗಿರಿ ಮರಗಳನ್ನು ಅಕ್ರಮವಾಗಿ ಕಡಿದು ಸಾಗಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಲಾಖೆಯ ಕಾನೂನಿ ನಂತೆ ಕಠಿಣ ಕ್ರಮ ಜರುಗಿಸಲಾಗುವುದು ಎಂದು ಮೇಲುಕೋಟೆ ಉಪವಲಯ ಅರಣ್ಯಾಧಿಕಾರಿ ಜೀತ್ ಭರವಸೆ ನೀಡಿದರು.
ಯದುಶೈಲಾ ಪ್ರೌಢಶಾಲೆಯ ಆಡಳಿತ ಮಂಡಳಿ ಕಾರ್ಯದರ್ಶಿ ಕೆ.ಬಿ.ನರಸಿಂಹೇಗೌಡ ಅವರು ಸರ್ಕಾರಿ ಶಾಲಾ ಜಮೀನಿಗೆ ಅತಿಕ್ರಮ ಪ್ರವೇಶ ಮಾಡಿ ನೀಲಗಿರಿ ಮರಗಳನ್ನು ಅಕ್ರಮವಾಗಿ ಕಡಿದು ಸಾಗಾಟ ಮಾಡಿದ್ದಾರೆ ಎಂದು ಮುಖ್ಯ ಶಿಕ್ಷಕ ಜವರೇಗೌಡ ನೀಡಿದ ದೂರಿನ ಸಂಬಂಧ ಪಾಂಡವಪುರ ಬಿಇಓ ಮಲ್ಲೇಶ್ವರಿ, ಕಂದಾಯ ವೃತ್ತ ನಿರೀಕ್ಷಕ ದಿನೇಶ್, ಎಸ್‍ಐ ಸೋಮೇಗೌಡ ಗುರುವಾರ ಸ್ಥಳ ಪರಿಶೀಲನೆ ನಡೆಸಿ ಮಾತನಾಡಿದರು.
ಮುಖ್ಯ ಶಿಕ್ಷಕರು ಪೊಲೀಸರಿಗೆ ಹಾಗೂ ಅರಣ್ಯ ಇಲಾಖೆಗೂ ದೂರು ನೀಡಿದಲ್ಲಿ ಸರ್ವೇ ಇಲಾಖೆ ಮತ್ತು ತಹಶೀಲ್ದಾರ್‍ಗೆ ಪತ್ರ ಬರೆಯುತ್ತೇವೆ. ಸರ್ಕಾರಿ ಜಮೀನಿನಲ್ಲಿ ಮರಗಳನ್ನು ಅನುಮತಿ ಇಲ್ಲದೆ ಕಡಿ ಯುವುದು ಅಪರಾಧ. ಹೀಗಾಗಿ ಸರ್ವೇ ಆದ ತಕ್ಷಣ ಬಾಲಕರ ಶಾಲೆಯ ಜಮೀನಿನ ಆವರಣದಲ್ಲಿ ಕಡಿದಿರುವ ಮರಗಳ ಸ್ಥಳಗಳನ್ನು ಮಹಜರ್ ಮಾಡಿ ಸಾಗಿಸಿರುವ ಮರಗಳ ಅಂದಾಜು ಮೌಲ್ಯ ಸಿದ್ಧಪಡಿಸಿ ಆರೋಪಿಗಳ ವಿರುದ್ಧ ಅರಣ್ಯಕಾಯ್ದೆಯಂತೆ ಕ್ರಿಮಿನಲ್ ಪ್ರಕರಣ ದಾಖಲಿಸಿ ಶಾಲಾ ಆಸ್ತಿ ರಕ್ಷಣೆÉ ಮಾಡಲಾಗುತ್ತದೆ. ಈ ಪ್ರಕರಣದ ಸಂಬಂಧ ಪೊಲೀಸ್ ಠಾಣೆಯಲ್ಲೂ ಪ್ರಾಥಮಿಕ ತನಿಖೆ ಮಾಡಿ ವರದಿ ನೀಡಲಿ ಮೊಕದ್ದಮೆಯನ್ನು ಅರಣ್ಯ ಇಲಾಖೆ ದಾಖಲಿಸುತ್ತದೆ ಎಂದರು
ಈ ವೇಳೆ ಅಧಿಕಾರಿಗಳಿಗೆ ಮಾಹಿತಿ ನೀಡಿದ ಆರ್‍ಐ ದಿನೇಶ್ ಸರ್ಕಾರಿ ಬಾಲಕರ ಶಾಲೆಗೆ 2 ಎಕರೆ ಜಮೀನು ಇದ್ದು, ಸರ್ಕಾರಿ ಆಸ್ತಿಯಾಗಿದೆ. ಆದರೆ ಜಮೀನಿನ ಹದ್ದುಬಸ್ತು ಮಾಡಿ ಗಡಿ ಗುರುತಿಸಬೇಕಿದೆ. ಸರ್ವೇ ಇಲಾಖೆಗೆ ಉಪವಿಭಾಗಾಧಿಕಾರಿಗಳು ಹಲವು ಬಾರಿ ಆದೇಶಿಸಿದ್ದರೂ, ಸರ್ವೇ ಮಾಡುವ ಕಾರ್ಯ ಆಗಿಲ್ಲ. ಯದುಶೈಲಾ ಪ್ರೌಢಶಾಲೆಯ ಜಮೀನಿಗೂ ಗಡಿ ಗುರ್ತಿಸುವ ಕೆಲಸ ಆಗಿಲ್ಲ. ತಕ್ಷಣವೇ ಪಾಂಡವ ಪುರ ತಹಶೀಲ್ದಾರ್ ಹನುಮಂತರಾಯಪ್ಪ ಸೂಚನೆಯಂತೆ ಸ್ಥಳ ಪರಿಶೀಲಿಸಿ ಈ ಸಂಬಂಧ ವರದಿ ನೀಡಲಾಗುತ್ತದೆ ಎಂದರು.
ಎಸ್‍ಐ ಸೋಮೇಗೌಡ ಮಾತನಾಡಿ, ಮುಖ್ಯಶಿಕ್ಷಕರ ದೂರಿನ ಮೇರೆಗೆ ಕ್ರಮಕೈಗೊಂಡು ಮೇಲುಕೋಟೆ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತಕ್ಷಣ ಸರ್ವೇ ಮಾಡಿಸಿ ವರದಿಯನ್ನು ಅರಣ್ಯ ಇಲಾಖೆಗೆ ವರ್ಗಾವಣೆ ಮಾಡಲಾಗುತ್ತದೆ. ಪ್ರಕರಣದ ಸಂಬಂಧ ಅರಣ್ಯ ಇಲಾಖೆ ಅಧಿಕಾರಿಗಳು ಕೈಗೊಳ್ಳುವ ಎಲ್ಲಾ ಕ್ರಮಗಳಿಗೆ ಪೊಲೀಸ್ ಇಲಾಖೆ ಸಹಕಾರ ನೀಡಲಿದೆ ಎಂದರು. ಈ ವೇಳೆ ಹಾಜರಿದ್ದ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಎಂ.ಬಿ ಚೆಲುವೇಗೌಡ ಘಟನೆಯ ಸಂಬಂಧ ಜಿಲ್ಲಾಧಿಕಾರಿ ಕಚೇರಿಗೂ ಮಾಹಿತಿ ನೀಡಿ ದೂರು ಸಲ್ಲಿಸಲಾಗಿದೆ. ಅಧಿಕಾರಿಗಳು ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸಬೇಕು ಎಂದರು. ಈ ವೇಳೆ ಪ್ರೌಢಶಾಲಾ ವಿಭಾಗದ ಶಿಕ್ಷಣ ಸಂಯೋಜಕ ಶಂಕರಾಚಾರಿ ಹಾಜರಿದ್ದರು.