ಕಾರಿನ ಕಿಟಕಿ ಗಾಜು ಒಡೆದು  2 ಲಕ್ಷ ರೂ. ನಗದು ಕಳವು
ಮೈಸೂರು

ಕಾರಿನ ಕಿಟಕಿ ಗಾಜು ಒಡೆದು 2 ಲಕ್ಷ ರೂ. ನಗದು ಕಳವು

January 29, 2019

ಮೈಸೂರು: ಎರಡು ತಿಂಗಳ ಹಿಂದಷ್ಟೇ ಹೋಂಡಾ ಆಕ್ಟೀವಾದ ಡಿಕ್ಕಿಯಲ್ಲಿ 2.4 ಲಕ್ಷ ರೂ ಎಗರಿಸಿದ್ದ ಸ್ಥಳದಲ್ಲೇ ಮಾರುತಿ ಸ್ವಿಫ್ಟ್ ಕಾರಿನ ಕಿಟಕಿ ಗಾಜು ಒಡೆದು 2 ಲಕ್ಷ ರೂ. ನಗದು ಕಳವು ಮಾಡಿರುವ ಘಟನೆ ಮೈಸೂರಿನ ವಿಜಯನಗರ ವಾಟರ್ ಟ್ಯಾಂಕ್ ಬಳಿ ಎಸ್‍ಬಿಐ ಎದುರು ಇಂದು ಮಧ್ಯಾಹ್ನ ನಡೆದಿದೆ. ಮೈಸೂರು ತಾಲೂಕು, ಮನುಗನಹಳ್ಳಿ ನಿವಾಸಿಯಾದ ಸೌದೆ ವ್ಯಾಪಾರಿ ರಾಜು ಹಣ ಕಳೆದುಕೊಂಡವರು. ಸ್ನೇಹಿತರಿಗೆ ಹಣ ಕೊಡುವ ಸಲುವಾಗಿ ತಮ್ಮ ಮಾರುತಿ ಸ್ವಿಫ್ಟ್ (ಕೆಎ09, ಎಂಬಿ5747) ಕಾರಿನಲ್ಲಿ ವಿಜಯನಗರ ವಾಟರ್ ಟ್ಯಾಂಕ್ ಬಳಿಯ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾಗೆ ಬಂದು 2 ಲಕ್ಷ ರೂ. ಡ್ರಾ ಮಾಡಿ ನಗದನ್ನು ಕೆಂಪು ಬಣ್ಣದ ಕವರಿನಲ್ಲಿ ಸುತ್ತಿ ಕಾರಿನ ಮುಂದೆ ಡ್ರೈವರ್ ಪಕ್ಕದ ಸೀಟಿನಲ್ಲಿಟ್ಟು ಕೊಂಡು ಹೋಗುತ್ತಿದ್ದಾಗ ಸದ್ವಿದ್ಯಾ ಸೆಮಿ ರೆಸಿಡೆನ್ಷಿಯಲ್ ಕಾಲೇಜು ಬಳಿ ಮತ್ತೊಬ್ಬ ಸ್ನೇಹಿತರು ಫೋನ್ ಮಾಡಿ 35 ಸಾವಿರ ರೂ ಹಣ ಕೇಳಿದ್ದರಿಂದ, ಮತ್ತೆ ವಾಪಸ್ ಬಂದು ಬ್ಯಾಂಕ್ ಮುಂದೆ ಮಧ್ಯಾಹ್ನ 12 ಗಂಟೆಗೆ ಕಾರು ನಿಲ್ಲಿಸಿ ಖಾತೆಯಿಂದ ಆರ್‍ಟಿ ಜಿಎಸ್ ಮೂಲಕ ಹಣ ವರ್ಗಾಯಿಸಿ 12.15 ಗಂಟೆ ವೇಳೆ ಹೊರ ಬಂದಾಗ ಕಾರಿನ ಗಾಜು ಒಡೆದು 2 ಲಕ್ಷ ಹಣ ಕಳವು ಮಾಡಿರುವುದು ಬೆಳಕಿಗೆ ಬಂತು ಎಂದು ರಾಜು ತಿಳಿಸಿದರು.

ವಿಷಯ ತಿಳಿಯುತ್ತಿದ್ದಂತೆಯೇ ವಿಜಯನಗರ ಠಾಣೆ ಇನ್ ಸ್ಪೆಕ್ಟರ್ ಬಿ.ಜಿ.ಕುಮಾರ್, ಸಿಸಿಬಿ ಇನ್‍ಸ್ಪೆಕ್ಟರ್ ಸಿ.ಕಿರಣ್‍ಕುಮಾರ್ ಹಾಗೂ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಮಹಜರು ನಡೆಸಿದರು. ಶ್ವಾನ ದಳ ಹಾಗೂ ಬೆರಳಚ್ಚು ಮುದ್ರೆ ಘಟಕದ ಸಿಬ್ಬಂದಿ ಘಟನಾ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದರು.

ಬೆಚ್ಚಿದ ಜನ: ಬೆಳಿಗ್ಗೆಯಿಂದ ರಾತ್ರಿವರೆಗೂ ಜನ ಮತ್ತು ವಾಹನ ಸಂಚಾರ ದಟ್ಟವಾಗಿ ರುವ ಎಸ್‍ಬಿಐ ಎದುರು ಹಾಡಹಗಲೇ ಕಾರಿನ ಗಾಜು ಒಡೆದು ಹಣ ಎಗರಿಸಿರುವುದು ಜನತೆ ಬೆಚ್ಚಿದ್ದಾರೆ. ಸುತ್ತಲೂ ಅಂಗಡಿ ಮುಂಗಟ್ಟು ಗಳಿವೆ. ಸೋಮವಾರವಾದ್ದರಿಂದ ಇಂದು ಬ್ಯಾಂಕಿಗೂ ಗ್ರಾಹಕರು ಹೆಚ್ಚಾಗಿ ಬಂದು ಹೋಗು ತ್ತಿದ್ದರು. ಸಮೀಪದಲ್ಲೇ ಆಟೋ ನಿಲ್ದಾಣ, ಹೋಟೆಲ್, ಔÀಷಧಿ ಅಂಗಡಿಗಳಿವೆ. ಇಂತಹ ಸದಾ ಜನದಟ್ಟಣೆ ಇರುವ ಜಾಗದಲ್ಲಿ ಕೃತ್ಯವೆಸ ಗಿರುವುದು ಅಚ್ಚರಿ ಮೂಡಿಸಿದೆ. ದುರದೃಷ್ಟ ಸಂಗತಿ ಎಂದರೆ ಎಸ್‍ಬಿಐ ಬ್ಯಾಂಕಿನ ಮುಂದೆ ಸಿಸಿ ಕ್ಯಾಮರಾ ಅಳವಡಿಸಿಲ್ಲ. ಎದುರಿನ ಬೇಕರಿಯೊಂದರಲ್ಲಿನ ಕ್ಯಾಮರಾ ಕೆಲಸ ಮಾಡುತ್ತಿಲ್ಲ. ಇದೆಲ್ಲ ವನ್ನೂ ಗಮನಿಸಿಯೇ ದುಷ್ಕರ್ಮಿಗಳು ಕೃತ್ಯವೆಸಗಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ವಿಜಯನಗರ ಠಾಣೆ ಪೊಲೀಸರು, ತನಿಖೆ ಕೈಗೊಂಡಿದ್ದಾರೆ. ಎನ್.ಆರ್. ಉಪವಿಭಾಗದ ಎಸಿಪಿ ಸಿ.ಗೋಪಾಲ್, ಸಿಸಿಬಿ ಎಸಿಪಿ ಬಿ.ಆರ್.ಲಿಂಗಪ್ಪ ಅವರು ಕೃತ್ಯ ನಡೆದ ಸ್ಥಳಕ್ಕೆ ಭೇಟಿ ನೀಡಿದ್ದರು. ಕಳೆದ 2 ತಿಂಗಳ ಹಿಂದೆ ವಿಜಯನಗರ 2ನೇ ಹಂತದ ಮಹಿಳೆಯೊಬ್ಬರು ತನ್ನ ಸ್ಕೂಟರ್ ಡಿಕ್ಕಿಯಲ್ಲಿ 2.4 ಲಕ್ಷ ರೂ. ಹಣ ಇರಿಸಿ ಎಸ್‍ಬಿಐ ಸರ್ಕಲ್ ಸಮೀಪ ಹೈಟೆನ್ಷನ್ ರಸ್ತೆಯ ಟೈಲರ್ ಅಂಗಡಿಗೆ ಹೋಗಿ ಬರುವಷ್ಟರಲ್ಲಿ ಹಣ ಎಗರಿಸಿದ್ದನ್ನು ಇಲ್ಲಿ ಸ್ಮರಿಸಬಹುದು.

Translate »