ರೌಡಿಗಳ ಚಲನ-ವಲನದ ಮೇಲೆ ನಿಗಾ ಇಡಿ
ಮೈಸೂರು

ರೌಡಿಗಳ ಚಲನ-ವಲನದ ಮೇಲೆ ನಿಗಾ ಇಡಿ

January 29, 2019

ಮೈಸೂರು: ಲೋಕ ಸಭಾ ಚುನಾವಣೆ ಸಮೀಪಿಸುತ್ತಿದೆ. ರೌಡಿ ಗಳ ಚಲನವಲನಗಳ ಮೇಲೆ ನಿಗಾ ಇರಿಸಿ ಕಾನೂನು-ಸುವ್ಯವಸ್ಥೆ ಕಾಪಾಡುವಂತೆ ಮೈಸೂರು ನಗರ ನೂತನ ಪೊಲೀಸ್ ಕಮಿಷ್ನರ್ ಕೆ.ಟಿ.ಬಾಲಕೃಷ್ಣ ಅಧಿಕಾರಿ ಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.

ಪೊಲೀಸ್ ಕಮಿಷ್ನರ್ ಆಗಿ ಅಧಿಕಾರ ವಹಿಸಿಕೊಂಡ ನಂತರ ಮೊದಲ ಬಾರಿಗೆ ನಜರ್‍ಬಾದ್‍ನಲ್ಲಿರುವ ತಮ್ಮ ಕಚೇರಿ ಸಭಾಂ ಗಣದಲ್ಲಿ ಇಂದು ಬೆಳಿಗ್ಗೆ 10.30ರಿಂದ ಮಧ್ಯಾಹ್ನ 1 ಗಂಟೆವರೆಗೆ ಕಾನೂನು-ಸುವ್ಯ ವಸ್ಥೆ ಮತ್ತು ಅಪರಾಧ ಕುರಿತಂತೆ ಮೊದಲ ಸಭೆ ನಡೆಸಿದ ಅವರು, ಶ್ರದ್ಧೆಯಿಂದ ಕರ್ತವ್ಯ ನಿರ್ವಹಿಸುವ ಮೂಲಕ ಸಮಾಜದ ಸ್ವಾಸ್ಥ್ಯ ಕಾಪಾಡುವಂತೆ ಸಲಹೆ ನೀಡಿದರು.

ಚುನಾವಣೆ ಹಿನ್ನೆಲೆಯಲ್ಲಿ ಉಪ ವಿಭಾಗ ವಾರು ಎಲ್ಲಾ ಠಾಣೆಗಳಿಂದ ಐದಾರು ಜನ ರೌಡಿಶೀಟರ್‍ಗಳನ್ನು ಕರೆಸಿ ಪರೇಡ್ ಮಾಡಬೇಕು. ಗಲಾಟೆ, ದೊಂಬಿ, ರಿಯಲ್ ಎಸ್ಟೇಟ್ ದಂಧೆ, ಅಹಿತಕರ ಕೃತ್ಯಗಳಲ್ಲಿ ಭಾಗಿಯಾಗದಂತೆ ಎಚ್ಚರಿಕೆ ನೀಡಬೇಕು. ಅವರ ಚಲನ-ವಲನಗಳ ಮೇಲೆ ನಿರಂತರ ನಿಗಾ ವಹಿಸಿ ಕಾನೂನು-ಸುವ್ಯವಸ್ಥೆ ಕಾಪಾಡುವ ಹೊಣೆಗಾರಿಕೆ ನಿಮ್ಮದು ಎಂದು ಸಭೆಯಲ್ಲಿ ಹಾಜರಿದ್ದ ಇನ್ಸ್‍ಪೆಕ್ಟರ್ ಮೇಲ್ಪಟ್ಟ ಅಧಿಕಾರಿಗಳಿಗೆ ಕಮಿಷ್ನರ್ ಕಟ್ಟುನಿಟ್ಟಿನ ನಿರ್ದೇಶನ ನೀಡಿದರು.

ಅಪರಾಧ ತಡೆ ಮತ್ತು ಪತ್ತೆ ಕಾರ್ಯಕ್ಕೆ ಹೆಚ್ಚು ಒತ್ತು ನೀಡಿ, ತನಿಖಾ ಹಂತದಲ್ಲಿ ರುವ ಬಾಕಿ ಪ್ರಕರಣಗಳನ್ನು ಇತ್ಯರ್ಥ ಗೊಳಿಸಿ ನಿರೀಕ್ಷಿತ ಪ್ರಗತಿ ಸಾಧಿಸಿದಲ್ಲಿ ಶೀಘ್ರ ಕಡತಗಳನ್ನು ವಿಲೇವಾರಿ ಮಾಡಬೇಕು ಎಂದು ಬಾಲಕೃಷ್ಣ ಅವರು ಇದೇ ವೇಳೆ ತಾಕೀತು ಮಾಡಿದರು.

ಮನೆ ಕಳ್ಳತನ, ಮಹಿಳೆಯರ ಸರ ಅಪ ಹರಣದಂತಹ ಕೃತ್ಯಗಳ ಆಸಾಮಿಗಳು (ಎಂಓ) ಅಪರಾಧ ಎಸಗದಂತೆ ಎಚ್ಚರ ವಹಿಸಿ ಹಳೇ ಎಂಓಗಳನ್ನು ವಿಚಾರಣೆ ನಡೆಸಿ ಎಂದ ಅವರು, ರಾತ್ರಿ ಗಸ್ತು (ನೈಟ್ ಬೀಟ್) ಅನ್ನು ಚುರುಕುಗೊಳಿಸಿ ಜನರಿಗೆ ಶಾಂತಿ-ನೆಮ್ಮದಿಯಿಂದಿರಲು ಪ್ರಯತ್ನಿಸಿ ಎಂದು ಅವರು ಸಲಹೆ ನೀಡಿದರು.

ಸಂಜೆ ಮತ್ತು ರಾತ್ರಿ ವೇಳೆ ತಮ್ಮ ವ್ಯಾಪ್ತಿ ಯಲ್ಲಿ ಗಸ್ತು ತಿರುಗಿ ಜನರಿಗೆ ಪೊಲೀಸರು ಗೋಚರಿಸಬೇಕು (Police Visibility), ಅಗತ್ಯ ಬಿದ್ದಾಗ ಹಗಲು-ರಾತ್ರಿ ಕರ್ತವ್ಯ ನಿರ್ವಹಿಸಿ ಉಳಿದಂತೆ ವಿಶ್ರಾಂತಿ, ವೈಯಕ್ತಿಕ ಕೆಲಸಕ್ಕೆ ಗಮನ ನೀಡಲು ಅಭ್ಯಂತರವಿಲ್ಲ. ತಮ್ಮ ಆರೋಗ್ಯದ ಕಡೆಯೂ ಗಮನಹರಿಸಿ ಎಂದು ಬಾಲಕೃಷ್ಣ ಅವರು ಇದೇ ವೇಳೆ ನುಡಿದರು.

ಪೊಲೀಸರು ತಮ್ಮ ಮೂಲ ಕರ್ತವ್ಯ ವನ್ನು ನಿಷ್ಠೆಯಿಂದ ಮಾಡಿದಲ್ಲಿ ಮೈಸೂರು ನಗರದಲ್ಲಿ ಪೊಲೀಸ್ ವ್ಯವಸ್ಥೆ ಬಲಪಡಿಸಲು ಸಾಧ್ಯ ಎಂದು ಅವರು ನೀತಿಪಾಠ ಹೇಳಿದರು. ಡಿಸಿಪಿಗಳಾದ ಎನ್.ವಿಷ್ಣುವರ್ಧನ್, ಡಾ.ವಿಕ್ರಂ ವಿ. ಅಮಟೆ, ಎಸಿಪಿಗಳಾದ ಗಜೇಂದ್ರ ಪ್ರಸಾದ್, ಧರ್ಮಪ್ಪ, ಸಿ.ಗೋಪಾಲ್, ಬಿ.ಆರ್. ಲಿಂಗಪ್ಪ ಸೇರಿದಂತೆ ಸಿವಿಲ್ ಪೊಲೀಸ್ ಠಾಣೆ ಮತ್ತು ಸಿಸಿಬಿ ಇನ್ಸ್‍ಪೆಕ್ಟರ್‍ಗಳು ಸಭೆಯಲ್ಲಿ ಹಾಜರಿದ್ದರು.

Translate »