ಸಿದ್ದಲಿಂಗಪುರದ ಷಷ್ಠಿ ದೇಗುಲದಲ್ಲಿ ಅದ್ಧೂರಿ ಜಾತ್ರಾ ಮಹೋತ್ಸವ
ಮೈಸೂರು

ಸಿದ್ದಲಿಂಗಪುರದ ಷಷ್ಠಿ ದೇಗುಲದಲ್ಲಿ ಅದ್ಧೂರಿ ಜಾತ್ರಾ ಮಹೋತ್ಸವ

December 3, 2019

ಮೈಸೂರು,ಡಿ.2(ಎಂಟಿವೈ)- ಮೈಸೂರು ತಾಲೂಕಿನ ಸಿದ್ದಲಿಂಗಪುರದ ಶ್ರೀ ಷಷ್ಠಿ ಸುಬ್ರಹ್ಮಣ್ಯೇಶ್ವರಸ್ವಾಮಿ ದೇವಾ ಲಯದಲ್ಲಿ ಸೋಮವಾರ ವಿಜೃಂಭಣೆಯಿಂದ ನಡೆದ ಸ್ಕಂದ ಷಷ್ಠಿ ಜಾತ್ರಾ ಮಹೋತ್ಸವದಲ್ಲಿ ಅಪಾರ ಸಂಖ್ಯೆ ಭಕ್ತರು ಪಾಲ್ಗೊಂಡು, ಹುತ್ತಕ್ಕೆ ಹಾಲೆರೆದು (ತನಿ) ಭಕ್ತಿಯಿಂದ ಪೂಜೆ ಸಲ್ಲಿಸಿದರು.

ಮಾರ್ಗಶಿರ ಮಾಸದ ಶುದ್ಧ ಷಷ್ಠಿ ದಿನವಾದ ಇಂದು ಮುಂಜಾನೆಯಿಂದಲೇ ತುಂತುರು ಮಳೆಯ ನಡುವೆಯೂ ಸಿದ್ದಲಿಂಗಪುರದ ಶ್ರೀ ಷಷ್ಠಿ ಸುಬ್ರಹ್ಮಣ್ಯೇಶ್ವರಸ್ವಾಮಿ ದೇವಾಲ ಯದಲ್ಲಿ ಭಕ್ತಸಾಗರವೇ ನೆರೆದು, ವಿಶೇಷ ಪೂಜಾ ಕೈಂಕರ್ಯ ನೆರವೇರಿಸಿದರು. ದೇವಾಲಯದ ಮುಖ್ಯ ಅರ್ಚಕ ಎಂ.ವಿ. ಸುಬ್ರಹ್ಮಣ್ಯ ನೇತೃತ್ವದಲ್ಲಿ ಮುಂಜಾನೆ 1 ಗಂಟೆಯಿಂದಲೇ ಶ್ರೀ ಷಷ್ಠಿ ಸುಬ್ರಹ್ಮಣ್ಯೇಶ್ವರಸ್ವಾಮಿಯ ಮೂರ್ತಿಗೆ ರುದ್ರಾಭಿ ಷೇಕ, ಸಹಸ್ರ ನಾಮಾರ್ಚನೆ, ಅಷ್ಟ್ಟಾವಧಾನ ಹಾಗೂ ಇನ್ನಿತರ ಪೂಜಾ ಕೈಂಕರ್ಯ ನೆರವೇರಿತು. ಬಳಿಕ ದೇವಾಲಯದಲ್ಲಿ ರುವ ಹುತ್ತಕ್ಕೆ 6 ಅಡಿ ಎತ್ತರದ ಬೆಳ್ಳಿ ನಾಗಾಭರಣದ ಅಲಂಕಾರ ಮಾಡಿ ಪೂಜೆ ಸಲ್ಲಿಸಲಾಯಿತು. ಮುಂಜಾನೆ 3ರ ನಂತರ ಭಕ್ತರಿಗೆ ಸ್ವಾಮಿ ದÀರ್ಶನ ಪಡೆಯಲು ಅವಕಾಶ ನೀಡಲಾಯಿತು. ರಾತ್ರಿ 10.30ರವರೆಗೂ ಅಪಾರ ಸಂಖ್ಯೆ ಭಕ್ತರು ದೇವಾಲಯಕ್ಕೆ ಆಗಮಿಸಿ, ದರ್ಶನ ಪಡೆದು ಇಷ್ಟಾರ್ಥ ಸಿದ್ದಿಗೆ ಪೂಜೆ ಸಲ್ಲಿಸಿದರು.

ಷಷ್ಠಿ ಜಾತ್ರೆ ಎಂದೇ ಪ್ರಸಿದ್ಧಿ ಪಡೆದಿರುವ ಸಿದ್ದಲಿಂಗ ಪುರದಲ್ಲಿರುವ ಶ್ರೀ ಸುಬ್ರಹ್ಮಣ್ಯೇಶ್ವರ ಸ್ವಾಮಿ ಷಷ್ಠಿ ಜಾತ್ರಾ ಮಹೋತ್ಸವದಲ್ಲಿ ಪಾಲ್ಗೊಳ್ಳಲು ಮೈಸೂರು, ಬೆಂಗಳೂರು ಸೇರಿದಂತೆ ವಿವಿಧ ಜಿಲ್ಲೆಗಳಿಂದ ಭಕ್ತರು ಮಧ್ಯರಾತ್ರಿಯಿಂದಲೇ ಆಗಮಿಸಿ ದರ್ಶನ ಪಡೆಯಲು ಸರದಿ ಸಾಲಿನಲ್ಲಿ ನಿಂತಿದ್ದರು. ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರಕ್ಕೆ ಹೋಗಲು ಸಾಧ್ಯವಾಗದೇ ಇದ್ದವರು ಸಿದ್ದಲಿಂಗಪುರದ ಷಷ್ಠಿ ಸುಬ್ರಹ್ಮಣ್ಯೇಶ್ವರನ ದರ್ಶನ ಪಡೆದರೆ ಒಳಿತಾಗುತ್ತದೆ ಎಂಬ ನಂಬಿಕೆ ಇರುವ ಹಿನ್ನೆಲೆಯಲ್ಲಿ ಇಂದು ಮುಂಜಾನೆಯಿಂದಲೇ ದೇವಾಲಯಕ್ಕೆ ವಿವಿಧೆಡೆ ಯಿಂದ ತಂಡೋಪತಂಡವಾಗಿ ಭಕ್ತರು ಆಗಮಿಸಿದರು. ದಿನವಿಡೀ ಭಕ್ತರು ಆಗಮಿಸುತ್ತಲೇ ಇದ್ದ ಹಿನ್ನೆಲೆಯಲ್ಲಿ ಮೈಸೂರು-ಬೆಂಗಳೂರು ಮುಖ್ಯ ರಸ್ತೆಯ ಬೆಂಗಳೂರಿನತ್ತ ತೆರಳುವ ಪಥದ ವಾಹನ ಸಂಚಾರ ಬಂದ್ ಆಗಿತ್ತು. ಅಲ್ಲದೆ ಮತ್ತೊಂದು ಪಥದಲ್ಲೂ ಭಕ್ತರ ಓಡಾಟವಿದ್ದರಿಂದ ಬೆಂಗಳೂರಿನಿಂದ ಮೈಸೂರಿಗೆ ಬರುವ ವಾಹನಗಳ ವೇಗಕ್ಕೂ ಕಡಿವಾಣ ಬಿದ್ದಂತಾಗಿತ್ತು. ಸಿದ್ದಲಿಂಗಪುರದ ಈ ದೇವಾ ಲಯ 300ಕ್ಕೂ ಅಧಿಕ ವರ್ಷಗಳ ಹಿಂದೆ ನಿರ್ಮಾಣ ವಾಗಿದ್ದು, ಮೈಸೂರು ಭಾಗದಲ್ಲಿ `ಚಿಕ್ಕ ಸುಬ್ರಹ್ಮಣ್ಯ’ ಎಂದೇ ಪ್ರಸಿದ್ಧಿ ಹೊಂದಿರುವ ಈ ಕ್ಷೇತ್ರ ಹಲವಾರು ನಂಬಿಕೆ ಮತ್ತು ಆಚರಣೆಗೆ ಬುನಾದಿ ಹಾಕಿಕೊಟ್ಟಿದೆ. ಸಿದ್ದಲಿಂಗಪುರ, ಕಳಸ್ತವಾಡಿ, ಮೇಳಾಪುರ, ನಾಗನಹಳ್ಳಿ, ಶ್ರೀರಂಗಪಟ್ಟಣ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳ ನಿವಾಸಿಗಳು ಈ ಜಾತ್ರಾ ಮಹೋತ್ಸವದಲ್ಲಿ ಸಕ್ರಿಯವಾಗಿ ಪಾಲ್ಗೊಂಡು, ಪೂಜೆ ಸಲ್ಲಿಸುತ್ತಾರೆ. ಈ ಗ್ರಾಮಗಳ ಗ್ರಾಮಸ್ಥರು ಎತ್ತಿನಗಾಡಿಯಲ್ಲಿ ಸಂಸಾರ ಸಮೇತ ಬಂದು ದಿನವಿಡೀ ಪೂಜಾ ನಿರತರಾಗುತ್ತಾರೆ. ಇವರಿಗೆ ಇದೊಂದು ವಿಶೇಷ ಜಾತ್ರೆಯೂ ಹೌದು.

ಕಂಗೊಳಿಸಿದ ನಾಗಾಭರಣ: ಮೈಸೂರು ರಾಜವಂಶಸ್ಥ ಜಯಚಾಮರಾಜೇಂದ್ರ ಒಡೆಯರ್ ಅವರು ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಹೆಸರಿನಲ್ಲಿ 6 ಅಡಿ ಎತ್ತರದ, 7 ಹೆಡೆ, 14 ಕೆಂಪು ಕಣ್ಣು, 7 ಹಸಿರು ಪಚ್ಚೆ ನಾಲಿಗೆಯುಳ್ಳ ಬೆಳ್ಳಿಯ ನಾಗಾಭರಣವನ್ನು ಕೊಡುಗೆ ನೀಡಿರುವ ಅರಮನೆ ವತಿಯಿಂದ ದೇವಾಲಯದ ಹುತ್ತಕ್ಕೆ ಧರಿಸಿ, ಅಲಂಕಾರ ಮಾಡುವುದು ಮೊದಲಿನಿಂದಲೂ ನಡೆಯುತ್ತಾ ಬಂದಿರುವ ಧಾರ್ಮಿಕ ವಿಧಿ ವಿಧಾನ. ಇದು ಭಕ್ತರ ಕಣ್ಮನ ಸೆಳೆಯುತ್ತಿತ್ತು.

ಪೂಜಾ ಕಾರ್ಯದ ನಂತರ ದೇವಾಲಯದ ಮುಂಭಾ ಗದ ರಸ್ತೆಯಲ್ಲಿ ನಡೆದ ರಥೋತ್ಸವದಲ್ಲಿ ಭಕ್ತರು ಪಾಲ್ಗೊಂಡು ಸುಬ್ರಹ್ಮಣ್ಯೇಶ್ವರ ಸ್ವಾಮಿಗೆ ನಮಿಸಿ, ಪ್ರಾರ್ಥಿಸಿದರು. ಭಕ್ತರೆ ಲ್ಲರೂ ಹಾಲು, ತುಪ್ಪ, ಬೆಣ್ಣೆಯನ್ನು ತಂದು ಸಮರ್ಪಿಸಿದರು. ಸರದಿ ಸಾಲಿನಲ್ಲಿ ಗಂಟೆ ಗಟ್ಟಲೆ ನಿಲ್ಲಲು ಸಾಧ್ಯವಾಗದೆ ಇದ್ದವರು, ದೇವಾಲಯದ ಪಕ್ಕದ ಜಮೀನಿನಲ್ಲಿದ್ದ ಹುತ್ತಕ್ಕೆ ಹಾಲೆರೆದು ಪೂಜೆ ಸಲ್ಲಿಸಿದರು. ಸ್ಥಳದಲ್ಲಿಯೇ ಹಾಲು, ಬೆಣ್ಣೆ ಮಾರಾಟವೂ ಇತ್ತು. ಹುತ್ತಕ್ಕೆ ತನಿ ಎರೆಯಲು ಬೇಕಾದ `ಚಿನ್ನ-ಬೆಳ್ಳಿ’ ನಾಗರ ಪುಟ್ಟ ಮೂರ್ತಿಗಳು ಮಾರಾಟ ಮಾಡುತ್ತಿದ್ದ ವ್ಯಾಪಾರಿಗಳ ಸಂಖ್ಯೆಯೂ ಹೆಚ್ಚಾಗಿತ್ತು.

ಷಷ್ಠಿ ಜಾತ್ರೆ ಅಂಗವಾಗಿ ರಸ್ತೆ ಬದಿಯಲ್ಲಿ ಅಂಗಡಿ ಮುಂಗಟ್ಟು ತಲೆ ಎತ್ತಿದ್ದವು. ಕಡಲೆಪುರಿ, ಸಿಹಿ ತಿನಿಸು, ಆಟಿಕೆ, ವಿವಿಧ ಗೃಹೋಪಯೋಗಿ ವಸ್ತುಗಳು, ಬಟ್ಟೆ ವ್ಯಾಪಾರ, ಅಲಂಕಾರಿಕ ವಸ್ತುಗಳ ಮಾರಾಟ ಮಳಿಗೆ ಜಾತ್ರೆಗೆ ಮೆರಗು ನೀಡಿದವು. ಅಲ್ಲದೆ ಕಬ್ಬು, ಆಲೆಮನೆ ಬೆಲ್ಲವನ್ನೂ ಮಾರಾಟ ಮಾಡಲಾಗುತ್ತಿತ್ತು.

ಭಕ್ತರು ದೇವರ ದರ್ಶನವನ್ನು ಸುಗಮ ರೀತಿ ನಡೆಯಲು ಮೇಟಗಳ್ಳಿ ಪೊಲೀಸರ ನೇತೃತ್ವದಲ್ಲಿ ಬಂದೋಬಸ್ತ್‍ನ ಅಗತ್ಯ ಕ್ರಮ ಕೈಗೊಳ್ಳಲಾಗಿತ್ತು. ದೇವಾಲಯಕ್ಕೆ ಸರದಿ ಸಾಲಿನಲ್ಲಿ ತೆರಳಲು ಬ್ಯಾರಿಕೇಡ್ ವ್ಯವಸ್ಥೆ ಮಾಡಲಾಗಿತ್ತು. ಗರ್ಭಗುಡಿ ಬಳಿ ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸ್ ಸಿಬ್ಬಂದಿ ನಿಯೋಜಿಸಿ, ಸ್ವಾಮಿ ದರ್ಶನ ಪಡೆದ ಭಕ್ತರನ್ನು ದೇವಾಲ ಯದಿಂದ ಹೊರಗೆ ಕಳುಹಿಸಲಾಗುತ್ತಿತ್ತು. ಜಾತ್ರಾ ಮಹೋ ತ್ಸವದ ಅಂಗವಾಗಿ ಮೈಸೂರಿನಿಂದ ಬೆಂಗಳೂರಿಗೆ ಹೋಗುವ ವಾಹನಗಳ ಸಂಚಾರ ಮಾರ್ಗ ಬದಲಿಸಲಾಗಿತ್ತು. ಲಘು ವಾಹನಗಳನ್ನು ಕೆಆರ್‍ಎಸ್ ರಸ್ತೆ, ಪಾಲಹಳ್ಳಿ, ಶ್ರೀರಂಗ ಪಟ್ಟಣ ಮಾರ್ಗವಾಗಿ ಸಂಚರಿಸಲು ಪರ್ಯಾಯ ಮಾರ್ಗ ಸೂಚಿಸಲಾಗಿತ್ತು. ಸಾರಿಗೆ ಸಂಸ್ಥೆಯ ಬಸ್ಸುಗಳು ಬನ್ನೂರು, ಮಳವಳ್ಳಿ ಮಾರ್ಗವಾಗಿ ಬೆಂಗಳೂರಿಗೆ ಹೋಗುವಂತೆ ವ್ಯವಸ್ಥೆ ಮಾಡಲಾಗಿತ್ತು. ಆದರೆ ಬಹುತೇಕ ಬಸ್ಸುಗಳು ಕೆಆರ್‍ಎಸ್ ರಸ್ತೆ ಪಂಪ್‍ಹೌಸ್ ಮಾರ್ಗದ ಮೂಲಕವೇ ಬೆಂಗಳೂರಿಗೆ ಸಂಚರಿಸಿದವು.

Translate »