ಮೈಸೂರು,ಜು.2(ಪಿಎಂ)- ಪ್ರಾರ್ಥನೆ ಮಾಡುವ ಕೈಗಳಿಗಿಂತ ದುಡಿಮೆ ಮಾಡುವ ಕೈಗಳು ದೊಡ್ಡವು. ಇದೆಲ್ಲಕ್ಕಿಂತಲೂ ಅನಾ ರೋಗ್ಯಕ್ಕೆ ಚಿಕಿತ್ಸೆ ನೀಡುವ ಕೈಗಳು ಶ್ರೇಷ್ಠ ಎಂದು ಕೇಂದ್ರೀಯ ಆಹಾರ ತಾಂತ್ರಿಕ ಸಂಶೋಧನಾ ಸಂಸ್ಥೆ (ಸಿಎಫ್‍ಟಿಆರ್‍ಐ) ನಿರ್ದೇಶಕ ಡಾ.ಕೆ.ಎಸ್.ಎಂ.ಎಸ್. ರಾಘವರಾವ್ ಬಣ್ಣಿಸಿದರು.
ಮೈಸೂರಿನ ಇನ್ಸ್‍ಟಿಟ್ಯೂಟ್ ಆಫ್ ಇಂಜಿನಿಯರ್ಸ್ ಸಂಸ್ಥೆ ಸಭಾಂಗಣದಲ್ಲಿ ಅನ್ವೇಷಣ ಸೇವಾ ಟ್ರಸ್ಟ್ ವತಿಯಿಂದ ಸೋಮವಾರ ಹಮ್ಮಿಕೊಂಡಿದ್ದ ವೈದ್ಯರ ದಿನಾಚರಣೆ ಹಾಗೂ `ವೈದ್ಯವಿಭೂಷಣ’ ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ವೈದ್ಯ ವೃತ್ತಿ ಶೇಷ್ಠವಾದದು. ಜೊತೆಗೆ ಅಷ್ಟೇ ತ್ರಾಸದಾಯಕ ಹಾಗೂ ಸವಾಲಿನ ಕೆಲಸವೂ ಹೌದು. ಹತ್ತು ಹಲವು ಪ್ರಕರಣ ಗಳಲ್ಲಿ ಯಶಸ್ವಿ ಚಿಕಿತ್ಸೆ ನೀಡಿ ಕೇವಲ ಒಂದರಲ್ಲಿ ವಿಫಲವಾದರೆ ಒಮ್ಮೊಮ್ಮೆ ಅದೇ ಹೆಚ್ಚು ಸುದ್ದಿಯಾಗಿ ಅನೇಕ ಸಮಸ್ಯೆ ಗಳಿಗೆ ಎಡೆ ಮಾಡುತ್ತದೆ. ಈ ಹಿನ್ನೆಲೆಯಲ್ಲಿ ಆಲೋಚಿಸಿದರೆ ಕೆಲವೊಮ್ಮೆ ಕೃತಜ್ಞತೆ ಇಲ್ಲದ ವೃತ್ತಿ ಎನ್ನಿಸುವಂತಾಗುತ್ತದೆ. ಆದರೂ ವೈದ್ಯರು ಧೃತಿಗೆಡದೆ ತಮ್ಮ ಕರ್ತವ್ಯ ನಿರ್ವಹಿಸುತ್ತಾರೆ ಎಂದು ತಿಳಿಸಿದರು.
ವೈದ್ಯರು ಚಿಕಿತ್ಸೆ ನೀಡುವ ಜೊತೆಗೆ ರೋಗಿ ಗಳಿಗೆ ಆತ್ಮಸ್ಥೈರ್ಯದ ಮಾತುಗಳನ್ನು ಹೇಳಿದರೆ ಅದು ಮತ್ತಷ್ಟು ಪರಿಣಾಮಕಾರಿ ಆಗಲಿದೆ. ನೇರವಾಗಿ ಜನತೆಯ ಸಂಪರ್ಕ ಹೊಂದುವ ವೃತ್ತಿಯೂ ಇದಾಗಿದೆ. ಗ್ರೀಕ್ ತತ್ವಜ್ಞಾನಿ ಅರಿಸ್ಟಾಟಲ್ `ಆಹಾರವೇ ಔಷಧ’ ಎಂದು ಹೇಳಿದ್ದರು. ಸದ್ಯ ಅಪೌಷ್ಠಿ ಕತೆ ಬಹುದೊಡ್ಡ ಸಮಸ್ಯೆಯಾಗಿದೆ. ಇದರ ನಿವಾರಣೆಗೆ ನಮ್ಮ ಸಂಸ್ಥೆ ಹಲವು ಸಂಶೋಧನೆಗಳನ್ನು ಕೈಗೊಂಡಿದೆ. ಹಿತ-ಮಿತ ಹಾಗೂ ಪೌಷ್ಠಿಕ ಆಹಾರ ಸೇವನೆ ಮೂಲಕ ಔಷಧ ಸೇವಿಸುವುದರಿಂದ ಅನಾರೋಗ್ಯದಿಂದ ಮುಕ್ತವಾಗಿ ಆರೋಗ್ಯಕರ ಜೀವನ ನಡೆಸಬಹುದು ಎಂದರು.
ಪ್ರಶಸ್ತಿ ಪ್ರದಾನ ಮಾಡಿದ ಮೈಸೂರು ವಿವಿ ಕುಲಪತಿ ಪ್ರೊ.ಜಿ.ಹೇಮಂತ್ ಕುಮಾರ್ ಮಾತನಾಡಿ, ವೈದ್ಯರು ಹಾಗೂ ಶಿಕ್ಷಕರು ಸಮಾಜದಲ್ಲಿ ಬಹು ಮುಖ್ಯ ಪಾತ್ರ ವಹಿಸುತ್ತಾರೆ. ಶಾಲೆಯೊಂದರಲ್ಲಿ ಶಿಕ್ಷಕರು ಒಂದೆರಡು ದಿನ ಇಲ್ಲವಾದರೆ ಅಂತಹ ಸಮಸ್ಯೆಯಾಗದು. ಆದರೆ ಆಸ್ಪತ್ರೆಯಲ್ಲಿ ಒಂದು ದಿನ ವೈದ್ಯರು ಇಲ್ಲವಾದರೆ ಇಡೀ ವ್ಯವಸ್ಥೆಯೇ ನಲುಗುತ್ತದೆ. ವೈದ್ಯ ವೃತ್ತಿ ಪುಣ್ಯದ ಕೆಲಸ. ಇದಕ್ಕಿಂತ ದೊಡ್ಡ ಪದವಿ ಮತ್ತೊಂದಿಲ್ಲ. ನಮಗೆ ಅನಾರೋಗ್ಯ ಉಂಟಾದಾಗ ವೈದ್ಯರ ಮಹತ್ವ ಅರಿವಿಗೆ ಬರಲಿದೆ ಎಂದು ಹೇಳಿದರು.
ಪ್ರಶಸ್ತಿ ಪ್ರದಾನ: ಇದಕ್ಕೂ ಮುನ್ನ ಹಿರಿಯ ಸ್ತ್ರೀರೋಗ ತಜ್ಞೆ ಡಾ.ದಮಯಂತಿ ಅರಸ್, ಹಿರಿಯ ಅರವಳಿಕೆ ತಜ್ಞ ಡಾ.ಹೆಚ್.ರಾಘವೇಂದ್ರ ಶೆಟ್ಟಿ, ಹಿರಿಯ ಶಸ್ತ್ರ ಚಿಕಿತ್ಸಕ ಡಾ.ಪ್ರಸಾದ್, ಮೈಸೂರು ಜಿಲ್ಲಾ ಆರ್‍ಪಿಹೆಚ್ ಅಧಿಕಾರಿ ಡಾ.ಎಲ್. ರವಿ, ಹಿರಿಯ ತಜ್ಞ ವೈದ್ಯ ಡಾ.ಸರ್ವೇ ಶರಾಜೇ ಅರಸ್, ಸರ್ಕಾರಿ ಆಯುರ್ವೇದ ಕಾಲೇಜಿನ ಶಾಲ್ಯವಿಭಾಗದ ಮುಖ್ಯಸ್ಥೆ ಡಾ.ಎನ್.ನಳಿನಿ ಅವರಿಗೆ ವೈದ್ಯವಿಭೂ ಷಣ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ನಿವೃತ್ತ ನಿರ್ದೇಶಕ ವೈದ್ಯರತ್ನ ಡಾ.ಡಿ.ತಿಮ್ಮಯ್ಯ, ಹೆಚ್‍ಡಿ ಕೋಟೆ ಅರಸು ಸಂಘದ ಅಧ್ಯಕ್ಷ ಲಿಂಗರಾಜೇ ಅರಸ್, ಅನ್ವೇಷಣ ಸೇವಾ ಟ್ರಸ್ಟ್‍ನ ಅಧ್ಯಕ್ಷ ಡಾ.ಎಂ.ಜಿ.ಆರ್.ಅರಸ್, ಸ್ಥಾಪಕ ಗೌರವ ಕಾರ್ಯದರ್ಶಿ ಅಮರನಾಥ ರಾಜೇ ಅರಸ್ ಮತ್ತಿತರರು ಹಾಜರಿದ್ದರು.