ಮೈಸೂರಲ್ಲಿ 511 ಕಳವು ಪ್ರಕರಣ ಬಯಲಿಗೆಳೆದ ಪೊಲೀಸರು415 ಮಂದಿ ಸೆರೆ, 5.9 ಕೋಟಿ ರೂ. ಮೌಲ್ಯದಆಭರಣ, ವಾಹನಗಳ ವಶ
ಮೈಸೂರು

ಮೈಸೂರಲ್ಲಿ 511 ಕಳವು ಪ್ರಕರಣ ಬಯಲಿಗೆಳೆದ ಪೊಲೀಸರು415 ಮಂದಿ ಸೆರೆ, 5.9 ಕೋಟಿ ರೂ. ಮೌಲ್ಯದಆಭರಣ, ವಾಹನಗಳ ವಶ

July 3, 2019

ಮೈಸೂರು,ಜು.2(ಆರ್‍ಕೆ)-2018 ಮತ್ತು 19ನೇ ಸಾಲಿನಲ್ಲಿ ನಡೆದಿದ್ದ 511 ಕಳವು ಪ್ರಕರಣಗಳನ್ನು ಭೇದಿಸಿರುವ ಮೈಸೂರು ನಗರ ಪೊಲೀಸರು, 415 ಮಂದಿ ಆರೋಪಿಗಳನ್ನು ಬಂಧಿಸಿ ಅವರಿಂದ ಒಟ್ಟು 5,96,67,763 ರೂ. ಮೌಲ್ಯದ ಮಾಲುಗಳನ್ನು ವಶ ಪಡಿಸಿಕೊಂಡಿದ್ದಾರೆ.

ಮೈಸೂರಿನ ಚಾಮುಂಡಿಬೆಟ್ಟದ ತಪ್ಪಲಿನ ಸಿಎಆರ್ ಮೈದಾನದಲ್ಲಿ ಇಂದು ಏರ್ಪಡಿಸಿದ್ದ ಕಾರ್ಯಕ್ರಮ ದಲ್ಲಿ ನಗರ ಪೊಲೀಸ್ ಆಯುಕ್ತ ಕೆ.ಟಿ. ಬಾಲಕೃಷ್ಣ ಅವರು ಮಾಲೀಕರಿಗೆ ವಶಪಡಿಸಿಕೊಂಡ ಮಾಲು ಗಳನ್ನು ಹಿಂದಿರುಗಿಸಿದರು. 6 ಕೆಜಿ 321 ಗ್ರಾಂ ಚಿನ್ನಾಭರಣ, 8 ಕೆಜಿ ಬೆಳ್ಳಿ ಪದಾರ್ಥ, 211 ದ್ವಿಚಕ್ರ ವಾಹನ, 27 ಕಾರು, 131 ಮೊಬೈಲ್ ಫೋನ್‍ಗಳು, 12 ಲ್ಯಾಪ್‍ಟಾಪ್, 1,12,09,550 ರೂ. ನಗದು ಹಾಗೂ 30 ಜಾನುವಾರುಗಳನ್ನು ವಶಪಡಿಸಿಕೊಳ್ಳ ಲಾಗಿದೆ ಎಂದು ಪೊಲೀಸ್ ಆಯುಕ್ತರು ತಿಳಿಸಿದ್ದಾರೆ.

ಮೈಸೂರು ನಗರದಲ್ಲಿ ಅಪರಾಧ ನಿಯಂತ್ರಿಸಲು ಪ್ರತೀದಿನ ಬೆಳಿಗ್ಗೆ 6 ರಿಂದ 9 ಗಂಟೆ ಹಾಗೂ ಸಂಜೆ 4 ರಿಂದ ರಾತ್ರಿ 9 ಗಂಟೆವರೆಗೆ ‘ಆಪರೇಷನ್ ಸನ್‍ರೈಸ್’ ಮತ್ತು ‘ಆಪರೇಷನ್ ಸನ್‍ಸೆಟ್’ ಅನ್ನು ಪ್ರಮುಖ ಸ್ಥಳಗಳಲ್ಲಿ ನಡೆಸಲಾಗುತ್ತಿದೆಯಲ್ಲದೆ, ಆಪರೇಷನ್ ಫಾಸ್ಟ್ ಟ್ರ್ಯಾಕ್ ಮೂಲಕ ಸರಗಳವು ನಿಯಂತ್ರಿಸಲಾಗುತ್ತಿದ್ದು, ಆರೋಪಿಗಳ ಪತ್ತೆಗೆ ‘ಆಪರೇಷನ್ ಡಿಕಾಯ್’ ಕಾರ್ಯಾಚರಣೆ ನಡೆಸಲಾಗುತ್ತಿದೆ ಎಂದು ಅವರು ತಿಳಿಸಿದರು.

ಸಿಸಿ ಕ್ಯಾಮರಾಗಳನ್ನು ಖಾಸಗಿ ಕಟ್ಟಡಗಳು, ಮಾಲ್ ಗಳು, ಪೆಟ್ರೋಲ್ ಬಂಕ್‍ಗಳು, ಹೋಟೆಲ್‍ಗಳಲ್ಲಿ ಅಳವಡಿಸಲು ಸೂಚಿಸಲಾಗಿದೆ. ವೃದ್ಧರ ರಕ್ಷಣೆಗಾಗಿ ‘ಅಭಯ’, ಬಾಡಿಗೆ ಮನೆಗಳಲ್ಲಿ ವಾಸಿಸುವವರ ಮಾಹಿತಿ ಪಡೆಯಲು ‘ಸುರಕ್ಷಾ’, ವಾಹನಗಳ ತಪಾ ಸಣೆಗಾಗಿ ‘ಆಪರೇಷನ್ ಚೀತಾ’ ಕಾರ್ಯಾಚರಣೆಯಲ್ಲಿವೆ.

ಚೆಕ್‍ಪೋಸ್ಟ್‍ಗಳಲ್ಲಿ ತಪಾಸಣೆ, ಗಸ್ತು ವಾಹನ, ಪಾರ್ಕಿಂಗ್ ಸ್ಥಳಗಳಲ್ಲಿ ತಪಾಸಣೆ, ಜೈಲಿನಿಂದ ಬಿಡುಗಡೆಯಾಗು ವವರ ಚಲನ-ವಲನಗಳ ಮೇಲೆ ನಿಗಾ ವಹಿಸುವುದು ಸೇರಿದಂತೆ ಮೈಸೂರು ನಗರದಲ್ಲಿ ಪೊಲೀಸ್ ಕಟ್ಟೆಚ್ಚರ ವಹಿಸಲಾಗಿದೆ ಎಂದು ಕೆ.ಟಿ.ಬಾಲಕೃಷ್ಣ ನುಡಿದರು.

ಡಿಸಿಪಿಗಳಾದ ಎಂ. ಮುತ್ತುರಾಜ್, ಚೆನ್ನಯ್ಯ, ಎಸಿಪಿಗಳಾದ ಗಜೇಂದ್ರಪ್ರಸಾದ್, ಸಿ. ಗೋಪಾಲ್, ಧರ್ಮಪ್ಪ, ಬಿ.ಆರ್. ಲಿಂಗಪ್ಪ ಸೇರಿದಂತೆ ಎಲ್ಲಾ ಠಾಣೆಗಳ ಇನ್ಸ್‍ಪೆಕ್ಟರ್‍ಗಳು ಈ ವೇಳೆ ಉಪಸ್ಥಿತರಿದ್ದರು.

Translate »