ಪತ್ನಿ ಕೊಂದ ಪತಿಗೆ ಜೀವಾವಧಿ ಶಿಕ್ಷೆ
ಮಂಡ್ಯ

ಪತ್ನಿ ಕೊಂದ ಪತಿಗೆ ಜೀವಾವಧಿ ಶಿಕ್ಷೆ

June 15, 2018

ಕೆ.ಆರ್.ಪೇಟೆ:  ಕಳೆದ 2 ವರ್ಷಗಳ ಹಿಂದೆ ತನ್ನ ಪತ್ನಿ ಮೇಲೆ ಸೀಮೆಎಣ್ಣೆ ಸುರಿದು ಬೆಂಕಿಹಚ್ಚಿ ಹತ್ಯೆ ಮಾಡಿದ್ದ ಆರೋಪಿಗೆ ಮಂಡ್ಯದ 3ನೇ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಜೀವಾವಧಿ ಶಿಕ್ಷೆ ನೀಡಿ ತೀರ್ಪು ನೀಡಿದೆ.

ತಾಲೂಕಿನ ಮಡುವಿನಕೋಡಿ ಗ್ರಾಮದ ಜವರೇ ಗೌಡರ ಮಗ ಸತೀಶ್(40) ಜೀವಾವಧಿ ಶಿಕ್ಷೆಗೆ ಗುರಿಯಾದವರು.
ಘಟನೆ ವಿವರ: 2016 ಮಾ.19ರಂದು ಮಧ್ಯಾಹ್ನ 3ಗಂಟೆ ವೇಳೆ ಮದ್ಯ ಸೇವನೆಗೆ ಹಣ ನೀಡಲಿಲ್ಲವೆಂದು ಸತೀಶ ತನ್ನ ಪತ್ನಿ ರೇಣುಕಾಳೊಂದಿಗೆ ಜಗಳ ತೆಗೆದು ದೈಹಿಕ ಮತ್ತು ಮಾನಸಿಕ ಹಿಂಸೆ ನೀಡಿದ್ದನು. ಈ ವೇಳೆ ರೇಣುಕಾ ತನ್ನ ಗಂಡನ ಮದ್ಯ ಸೇವನೆ ಚಟವನ್ನು ಬಿಡಿಸುವ ಸಲುವಾಗಿ ನಿನ್ನೊಂದಿಗೆ ಬಾಳುವುದಕ್ಕಿಂತ ಸಾಯುವುದೇ ಲೇಸೆಂದು ಆತನನ್ನು ಬೆದರಿಸುವ ಸಲುವಾಗಿ ತನ್ನ ಮೈಮೇಲೆ ಸೀಮೆಎಣ್ಣೆ ಸುರಿದು ಕೊಂಡಳು. ಈ ವೇಳೆ ಸತೀಶ ಯಾವುದೇ ಕರುಣೆ ತೋರದೇ ಸೀಮೆಎಣ್ಣೆ ಸುರಿದುಕೊಂಡಿದ್ದ ರೇಣುಕಾ ಮೈಮೇಲೆ ಬೆಂಕಿಕಡ್ಡಿ ಗೀರಿ ಎಸೆದಿದ್ದಾನೆ.

ಇದರಿಂದ ಸುಟ್ಟ ಗಾಯಗಳಾಗಿದ್ದ ರೇಣುಕಾಳನ್ನು ಮೈಸೂರಿನ ಕೆ.ಆರ್.ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ 2016 ಮಾ.24ರಂದು ರೇಣುಕಾ ಮೃತಪಟ್ಟಿದ್ದರು. ಈ ಹಿನ್ನೆಲೆಯಲ್ಲಿ ಆರೋಪಿ ಸತೀಶನ ವಿರುದ್ಧ ಕೆ.ಆರ್.ಪೇಟೆ ಗ್ರಾಮಾಂತರ ಪೊಲೀಸರು ನ್ಯಾಯಾಲಯಕ್ಕೆ ದೋಷಾರೋಪಣೆ ಸಲ್ಲಿಸಿದ್ದರು. ಸದರಿ ಪ್ರಕರಣದ ವಾದ-ವಿವಾದ ಆಲಿಸಿದ ಮಂಡ್ಯದ 3ನೇ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ಗೌರವಾನ್ವಿತ ನ್ಯಾಯಾಧೀಶ ಕಳಸಪ್ಪ ನಾಯಕ್ ಅವರು ಆರೋಪಿ ಸತೀಶನನ್ನು ತಪ್ಪಿತಸ್ಥನೆಂದು ಪರಿಗಣಿಸಿ ಜೀವಾವಧಿ ಶಿಕ್ಷೆಯನ್ನು ವಿಧಿಸಿ ತೀರ್ಪು ನೀಡಿ ಆದೇಶ ಹೊರಡಿಸಿದ್ದಾರೆ.

Translate »