ಅರಣ್ಯ, ವನ್ಯ ಜೀವಿ ಸಂರಕ್ಷಣೆಗೆ ತಂದಿರುವ ಕಾನೂನು ಅನುಷ್ಠಾನಕ್ಕೆ ಸಿಬ್ಬಂದಿಗೆ ತರಬೇತಿ ಅವಶ್ಯ
ಮೈಸೂರು

ಅರಣ್ಯ, ವನ್ಯ ಜೀವಿ ಸಂರಕ್ಷಣೆಗೆ ತಂದಿರುವ ಕಾನೂನು ಅನುಷ್ಠಾನಕ್ಕೆ ಸಿಬ್ಬಂದಿಗೆ ತರಬೇತಿ ಅವಶ್ಯ

January 9, 2019

ಮೈಸೂರು: ಅರಣ್ಯ ಭೂಮಿ ಒತ್ತುವರಿ ಮತ್ತು ವನ್ಯಜೀವಿಗಳ ಸಂರಕ್ಷಣೆಗೆ ಅರಣ್ಯ ಇಲಾಖೆ ಸಿಬ್ಬಂದಿ ಕಟಿಬದ್ಧರಾಗಬೇಕು. ಇದನ್ನು ತಡೆಗಟ್ಟಲು ತಂದಿರುವ ಕಾನೂನುಗಳ ಅನುಷ್ಠಾನಕ್ಕೆ ಸಿಬ್ಬಂದಿಗಳು ಅಗತ್ಯ ತರಬೇತಿ ಪಡೆಯುವುದು ಅವಶ್ಯ ಎಂದು ಮುಖ್ಯ ಅರಣ್ಯ ಸಂರಕ್ಷಣಾ ಧಿಕಾರಿ ವೆಂಕಟೇಶನ್ ಸಲಹೆ ನೀಡಿದರು.
ಮೈಸೂರಿನ ಅಶೋಕಪುರಂ ಅರಣ್ಯಭವನದಲ್ಲಿ ಕರ್ನಾಟಕ ರಾಜ್ಯ ಉಪವಲಯ ಅರಣ್ಯಾಧಿಕಾರಿಗಳು ಹಾಗೂ ಮೋಜಣಿ ದಾರರ ಸಂಘ ಮೈಸೂರು ಘಟಕದ ವತಿಯಿಂದ ಆಯೋಜಿಸಿದ್ದ 2019ನೇ ಹೊಸ ವರ್ಷದ ದಿನಚರಿ ಮತ್ತು ಕ್ಯಾಲೆಂಡರ್ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದರು.

ಸಂರಕ್ಷಿತ ಅರಣ್ಯ ಪ್ರದೇಶ, ಸಾಮಾಜಿಕ, ಡೀಮ್ಡ್ ಅರಣ್ಯ ಪ್ರದೇಶ ಹಾಗೂ ವರ್ಗಾಯಿತ ಅರಣ್ಯ ಭೂಮಿ ಗಳಲ್ಲಿ ಅಕ್ರಮ ಚಟುವಟಿಕೆಗಳ ಬಗ್ಗೆ ನಿಗಾ ವಹಿಸಬೇಕು. ಇಂಥ ಸಂದರ್ಭದಲ್ಲಿ ಒತ್ತುವರಿದಾರರ ಮೇಲೆ ಪ್ರಕರಣ ದಾಖಲಿಸುವ ವೇಳೆ ಘಟನಾ ಸ್ಥಳದ ಬಗ್ಗೆ ಅರಣ್ಯ ಇಲಾಖೆ ಸೇರಿದೆ ಎಂಬುದನ್ನು ಮೊದಲು ಜಿಪಿಆರ್‍ಎಸ್ ಮೂಲಕ ಖಚಿತಪಡಿಸಿಕೊಂಡು ನಂತರ ಎಫ್‍ಐಆರ್ ದಾಖಲಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಅರಣ್ಯ ಸಂರಕ್ಷಣೆಗೆ ಉಪವಲಯ ಅರಣ್ಯಾಧಿಕಾರಿಗಳು ಮತ್ತು ಮೋಜಣೀದಾರರ ಸೇವೆ ಅತ್ಯಮೂಲ್ಯ. ಆದ್ದರಿಂದ ಅರಣ್ಯ ಭೂಮಿ ಗಡಿ ರಕ್ಷಣೆ, ಒತ್ತುವರಿ ಸಮಸ್ಯೆ, ಕಾಡಂ ಚಿನ ಮಾನವ ಮತ್ತು ಪ್ರಾಣಿಗಳ ಸಂಘರ್ಷ ತಡೆಗಟ್ಟುವಲ್ಲಿ ಕೆಳಹಂತದ ಸಿಬ್ಬಂದಿಗಳ ಪಾತ್ರ ಅತೀಮುಖ್ಯ ಎಂದು ಸ್ಮರಿಸಿದರು.

ಮೈಸೂರು ವನ್ಯಜೀವಿ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಸಿದ್ರಾಮಪ್ಪ ಎಂ. ಚಳಕಾಪುರೇ ಮಾತ ನಾಡಿ, ಕಾಡಂಚಿನ ಗ್ರಾಮಗಳಲ್ಲಿ ಮಾನವ ಮತ್ತು ಪ್ರಾಣಿಗಳ ಸಂಘರ್ಷ ತಪ್ಪಿಸುವಲ್ಲಿ ಉಪ ವಲಯ ಅರಣ್ಯಾಧಿಕಾರಿ ಗಳ ಸೇವೆ ಅತೀಮುಖ್ಯ. ಅರಣ್ಯ ಪ್ರದೇಶದೊಳಗೆ ಅಕ್ರಮ ಚಟುವಟಿಕೆಯಲ್ಲಿ ಭಾಗಿಯಾದ ವ್ಯಕ್ತಿಗಳ ವಿರುದ್ಧ ಪ್ರಕರಣ ದಾಖಲಿಸುವ ಮುನ್ನ ಅರಣ್ಯ ಭೂಮಿಯ ಸರ್ವೆ ಅತೀಮುಖ್ಯ ವಾಗುತ್ತದೆ.ಇದಕ್ಕೆ ಮೋಜಿಣಿದಾರರ ಸೇವೆ ಬಗ್ಗೆ ಸ್ಮರಿಸಿದರು.

ಮಂಡ್ಯ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಎನ್.ಶಿವರಾಜು ಮಾತನಾಡಿ, ಅರಣ್ಯದಲ್ಲಿ ಒತ್ತುವರಿ ಸಮಸ್ಯೆ ಎದುರಾದಾಗ ಸ್ಥಳದಲ್ಲಿ ಎದುರಾಗುವ ಸಮಸ್ಯೆ ಗಳ ಬಗ್ಗೆ, ವನ್ಯಜೀವಿ, ಕಾಡು ಮರಗಳ ಕಳ್ಳಸಾಗಾಣಿಕೆ ಸಂದರ್ಭದಲ್ಲಿ ಅರಣ್ಯ ಇಲಾಖೆಯ ಕಾನೂನುಗಳ ಅಧ್ಯಯನ ಅತೀ ಮುಖ್ಯ. ಇದನ್ನು ಅರಿಯದೇ ಪ್ರಕರಣ ದಾಖಲಿಸಿದ್ದಲ್ಲಿ ಅದು ನಮಗೇ ತಿರುಗುಬಾಣವಾಗ ಬಹುದು. ಇದಕ್ಕೆ ಕೆಲ ತಿಂಗಳ ಹಿಂದೆ ಮಂಡ್ಯ ಜಿಲ್ಲೆ ಕೆ.ಆರ್.ಪೇಟೆ ತಾಲೂಕಿನಲ್ಲಿ ನಡೆದ ಪ್ರಕರಣವೊಂದರ ಘಟನೆಯೇ ಸಾಕ್ಷಿ. ಆದ್ದರಿಂದ ಕೆಳ ಹಂತದ ಸಿಬ್ಬಂದಿ ಉಪ ಅರಣ್ಯ ಸಂರಕ್ಷಣಾ ವಲಯ ಅಧಿಕಾರ ವ್ಯಾಪ್ತಿ ಬಗ್ಗೆ ತಿಳಿದುಕೊಳ್ಳುವುದು ಅತೀ ಮುಖ್ಯ ಎಂದರಲ್ಲದೆ, ಮೈಸೂರು ವಲಯದ ಅರಣ್ಯ ಇಲಾಖೆ ಕೆಳಹಂತದ ಸಿಬ್ಬಂದಿಗಳಿಗೆ ಕಾನೂನು ಅರಿವು ಕಡಿಮೆ ಇದ್ದು, ಇದಕ್ಕೆ ಸೂಕ್ತ ತರಬೇತಿ ಮುಖ್ಯ ಎಂದರು.

ಈ ವೇಳೆ ಕಳೆದ 35 ವರ್ಷಗಳಿಂದ ಅರಣ್ಯ ಇಲಾಖೆ ಯಲ್ಲಿ ಸೇವೆ ಸಲ್ಲಿಸಿ, ನಿವೃತ್ತರಾದ ಡಿಆರ್‍ಎಫ್‍ಓ ಸೋಮ ಶೆಟ್ಟಿ ಅವರನ್ನು ಸನ್ಮಾನಿಸಲಾಯಿತು. ಅಲ್ಲದೆ ಹೆಚ್.ಡಿ. ಕೋಟೆ ಅರಣ್ಯ ವಲಯ ವ್ಯಾಪ್ತಿಯಲ್ಲಿ 13 ಚಿರತೆಗಳನ್ನು ರಕ್ಷಣೆ ಮಾಡುವ ಸಂದರ್ಭದಲ್ಲಿ ಯಾವುದೇ ಮಾನವ ಸಂಘ ರ್ಷಕ್ಕೆ ಎಡೆಮಾಡಿಕೊಡದೇ ಯಶಸ್ವಿ ಕಾರ್ಯಾಚರಣೆ ಕೈಗೊಂಡ ಡಿಆರ್‍ಎಫ್‍ಓ ಮಂಜುನಾಥ್, ಮೈಸೂರು ವೃತ್ತದ ಡಿಆರ್‍ಎಫ್‍ಓ ಮಾಲೇಗೌಡ ಅವರನ್ನು (8 ಚಿರತೆಗಳನ್ನು ಕಾರ್ಯಾಚರಣೆ) ಸನ್ಮಾನಿಸಲಾಯಿತು.

ವೇದಿಕೆಯಲ್ಲಿ ಮೈಸೂರು ಘಟಕದ ಮುಖ್ಯ ಸಂರಕ್ಷಣಾ ಧಿಕಾರಿ ಅಂಬಾಡಿ ಮಾಧವ್, ಅಪರ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಜಗತ್ ರಾಮ್, ಹುಣಸೂರು ಪ್ರಾದೇಶಿಕ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಎಂ.ಎನ್.ವಿಜಯ್‍ಕುಮಾರ್, ಮೈಸೂರು ಕಾರ್ಯ ಯೋಜನೆ ಉಪ ಅರಣ್ಯ ಸಂರಕ್ಷಣಾಧಿಕಾರಿ ಟಿ.ವಿ.ಭಾನು ಪ್ರಕಾಶ್, ಮೈಸೂರು ಅರಣ್ಯ ಸಂಚಾರಿ ದಳದ ಉಪ ಅರಣ್ಯ ಸಂರಕ್ಷಣಾಧಿಕಾರಿ ಎ.ಟಿ.ಪೂವಯ್ಯ, ವೆಂಕಟೇಶ್, ಮಂಜುನಾಥ್, ಡಾ.ಕೆ.ಸಿ.ಪ್ರಶಾಂತ್‍ಕುಮಾರ್, ಕರ್ನಾಟಕ ರಾಜ್ಯ ಉಪವಲಯ ಅರಣ್ಯಾಧಿಕಾರಿ ಹಾಗೂ ಮೋಜಣಿದಾರರ ಸಂಘ ಮೈಸೂರು ಘಟಕದ ಅಧ್ಯಕ್ಷ ಡಿ.ಸಿದ್ದರಾಜು, ಪ್ರಧಾನ ಕಾರ್ಯದರ್ಶಿ ಹೆಚ್.ಎಂ.ಪ್ರಮೋದ್ ಸೇರಿದಂತೆ ಇತರರಿದ್ದರು.

Translate »