ಮೈಸೂರು: ಈಗಾಗಲೇ ಸ್ವಚ್ಛ ಸರ್ವೇಕ್ಷಣೆ ಆರಂಭವಾಗಿದೆ. ಮೈಸೂರು ಮತ್ತೆ ದೇಶದ ಪ್ರಥಮ ಸ್ವಚ್ಛ ನಗರವಾಗಿ ವಿಜೃಂಭಿಸಬೇಕೆಂಬ ಆಶಯ ಪ್ರತಿಯೊಬ್ಬರಲ್ಲೂ ಇದೆ. ಹಾಗಾಗಿ ತಮ್ಮ ತಮ್ಮ ವ್ಯಾಪ್ತಿಯಲ್ಲಿ ಸ್ವಚ್ಛತೆಗೆ ಸಹಕರಿಸಲು ಸಾರ್ವಜನಿಕರು ಮುಂದಾಗಿದ್ದಾರೆ. ಆದರೆ ನಗರದಲ್ಲಿರುವ ಪೇಯಿಂಗ್ ಗೆಸ್ಟ್(ಪಿಜಿ) ವಸತಿ ಗೃಹಗಳು ಸ್ವಚ್ಛತೆಗೆ ಕಂಟಕವಾಗಿವೆ ಎಂಬ ಗಂಭೀರ ಆರೋಪ ಕೇಳಿಬರುತ್ತಿದೆ.
ಮೈಸೂರಿನಲ್ಲಿ ಪಿಜಿ ವಸತಿ ಗೃಹಗಳು ನಾಯಿ ಕೊಡೆ ಗಳಂತೆ ಹಬ್ಬಿವೆ. ಶಿಕ್ಷಣಕ್ಕಾಗಿ ದೂರದ ಊರುಗಳಿಂದ ಬರುವವರು, ಉದ್ಯೋಗಸ್ಥರ ವಾಸ್ತವ್ಯಕ್ಕೆ ಆರಂಭವಾದ ಪಿಜಿಗಳ ಉದ್ದೇಶ ಪ್ರಸ್ತುತ ವಿಸ್ತಾರವಾಗಿದೆ. ವಿದ್ಯಾರ್ಥಿ ಗಳಿಗಿಂತ ಹೆಚ್ಚಾಗಿ ಉದ್ಯೋಗಿಗಳಿಗಾಗಿ ಇರುವ ಪಿಜಿಗಳ ಸಂಖ್ಯೆಯೇ ಹೆಚ್ಚಾಗಿದೆ. ಹೆಚ್ಚು ಹಣ ಸಂಪಾದನೆಯ ಬೆನ್ನುಹತ್ತಿರುವ ಜನ, ಮನೆಯ ಮೇಲೆ ಬಹುಮಹಡಿ ಗಳನ್ನು ನಿರ್ಮಿಸಿ, ಪಿಜಿಗಳನ್ನು ನಡೆಸುತ್ತಿದ್ದಾರೆ. ಅದರಲ್ಲೂ ಖಾಸಗಿ ಕಂಪನಿಗಳು, ಕೈಗಾರಿಕೆಗಳಿಗೆ ಸಮೀಪಕ್ಕಿರುವ ಹೆಬ್ಬಾಳು, ವಿಜಯನಗರ, ಮಂಚೇಗೌಡನ ಕೊಪ್ಪಲು, ಕುಂಬಾರ ಕೊಪ್ಪಲು, ಜಯಲಕ್ಷ್ಮೀಪುರಂ ಸೇರಿದಂತೆ ಅನೇಕ ಬಡಾವಣೆ ಗಳಲ್ಲಿ ಪಿಜಿಗಳು ಯಥೇಚ್ಛವಾಗಿವೆ. ನಗರದೆಲ್ಲೆಡೆ ನಿಯಮ ಬಾಹಿರವಾಗಿ ಪಿಜಿ ಉದ್ಯಮ ಅವ್ಯಾಹತವಾಗಿ ವಿಸ್ತರಿಸುತ್ತಿರು ವುದರ ಜೊತೆಗೆ ಸ್ವಚ್ಛತೆಯೂ ಹಾಳಾಗುತ್ತಿದೆ. ಜಂಕ್ ಫುಡ್‍ಗಳನ್ನು ಅರೆಬರೆ ತಿಂದು ಬಿಸಾಡಲಾಗುತ್ತಿದೆ. ಇದರ ಜೊತೆಗೆ ಫಾಸ್ಟ್ ಫುಡ್‍ಗಳ ಮಾರಾಟಗಾರರು ವ್ಯಾಪಾರ ಮಾಡಿ, ಕಸವನ್ನು ಸ್ಥಳದಲ್ಲೇ ಬಿಟ್ಟು ಹೋಗುತ್ತಾರೆ. ಹೀಗಾದರೆ ಸ್ವಚ್ಛತೆ ಹೇಗೆ ಸಾಧ್ಯ ಹೇಳಿ? ಎಂದು ಕಾರ್ಪೋ ರೇಟರ್ ಕೆ.ವಿ.ಶ್ರೀಧರ್ ವಿಷಾದ ವ್ಯಕ್ತಪಡಿಸಿದ್ದಾರೆ.
ಮೈಸೂರಿನ ವಿವಿಧ ಕಂಪನಿಗಳಲ್ಲಿ ಉದ್ಯೋಗದಲ್ಲಿರುವ ಹೊರರಾಜ್ಯದವರಲ್ಲಿ ಬಹುಪಾಲು ಮಂದಿ, ಪಿಜಿಗಳಲ್ಲೇ ವಾಸವಿದ್ದಾರೆ. ವಿದೇಶಿ ವಿದ್ಯಾರ್ಥಿಗಳೂ ಪಿಜಿಗಳಲ್ಲಿ ದ್ದಾರೆ. ಹೆಚ್ಚು ಹಣ ಗಳಿಸಬಹುದು ಎಂಬ ಒಂದೇ ಒಂದು ಕಾರಣಕ್ಕೆ ಬಂದವರಿಗೆಲ್ಲಾ ಪಿಜಿ ಮಾಲೀಕರು ವಾಸ್ತವ್ಯಕ್ಕೆ ಅವಕಾಶ ನೀಡುತ್ತಿದ್ದಾರೆ. ಕೆಲವೆಡೆ ಕೇವಲ ವಾಸ್ತವ್ಯಕ್ಕೆ ಕೊಠಡಿ ನೀಡಿದರೆ, ಹಲವೆಡೆ ವಸತಿ ಜೊತೆಗೆ ಊಟದ ಸೌಲಭ್ಯವೂ ಇರುತ್ತದೆ. ಒಬ್ಬರಿಂದ ತಿಂಗಳಿಗೆ ನಾಲ್ಕೈದು ಸಾವಿರ ರೂ. ವಸೂಲಿ ಮಾಡುತ್ತಾರೆ. ಹೀಗೆ 15 ಮಂದಿಗೆ ಪಿಜಿ ನೀಡಿದರೆ ಮಾಸಿಕ 75 ಸಾವಿರ ರೂ. ಆದಾಯ ಬರುತ್ತದೆ. ಈ ರೀತಿಯ ಆರ್ಥಿಕ ಲೆಕ್ಕಾಚಾರಕ್ಕೆ ಮೈಸೂರಿನ ಸಂಸ್ಕøತಿ, ವಾತಾವರಣ ಬಲಿಯಾಗುತ್ತಿದೆ. ಹೊರಗಿನಿಂದ ಬಂದವರಿಗೆ ಮೈಸೂರಿನ ಬಗ್ಗೆ ಒಂದಿಷ್ಟೂ ಅಭಿಮಾನವಿರುವುದಿಲ್ಲ. ಇದರ ಬಗ್ಗೆ ತಿಳಿಸಿಕೊಡುವ ಕಾಳಜಿ ಪಿಜಿ ಮಾಲೀಕರಿಗಿಲ್ಲ.
ತಡರಾತ್ರಿ ಪಿಜಿಗೆ ಬರುತ್ತಾರೆ. ಆನ್‍ಲೈನ್‍ನಲ್ಲಿ ತಿಂಡಿ ತಿನಿಸುಗಳನ್ನು ತರಿಸಿಕೊಳ್ಳುತ್ತಾರೆ. ಅರೆಬರೆ ತಿಂದು ಉಳಿ ದಿದ್ದನ್ನು ಎಲ್ಲೆಂದರಲ್ಲಿ ಬಿಸಾಕುತ್ತಾರೆ. ಮದ್ಯದ ಬಾಟಲಿ ಗಳು, ನೀರಿನ ಬಾಟಲ್‍ಗಳು, ಹಳೇ ವಸ್ತುಗಳು, ಪ್ಲಾಸ್ಟಿಕ್ ಕವರ್‍ಗಳು ಹೀಗೆ ಬೇಡದ ವಸ್ತುಗಳನ್ನು ತಮ್ಮ ಕೊಠ ಡಿಯ ಕಿಟಕಿ ಮೂಲಕ ಪಕ್ಕದ ಖಾಲಿ ನಿವೇಶನಕ್ಕೋ, ರಸ್ತೆಗೋ, ಚರಂಡಿಗೋ, ಬಿಸಾಕುತ್ತಾರೆ. ಅಲ್ಲದೆ ಪೌರ ಕಾರ್ಮಿಕರು ಆ ಸ್ಥಳವನ್ನು ಸ್ವಚ್ಛಗೊಳಿಸಿ, ಸ್ವಲ್ಪ ಮುಂದೆ ಸಾಗುವಷ್ಟರಲ್ಲಿ ಮತ್ತೆ ಕಸ ಬಿಸಾಕುವ ಕಿರಾತಕರೂ ಇದ್ದಾರೆ. ಅವರ್ಯಾರಿಗೂ ಮೈಸೂರಿನ ಬಗ್ಗೆ ಅರಿವಿಲ್ಲ. ನಮ್ಮ ದೇಹದಂತೆ, ಮನೆ, ಸುತ್ತಮುತ್ತಲ ಪ್ರದೇಶವನ್ನೂ ಸ್ವಚ್ಛವಾಗಿಡಬೇಕೆಂಬ ಮನಸ್ಸಿಲ್ಲ. ಇವರ ಆಟಾಟೋಪಕ್ಕೆ ಕಡಿವಾಣ ಹಾಕುವ ಶಕ್ತಿ ಪಿಜಿ ಮಾಲೀಕರಿಗೂ ಇಲ್ಲ. ಅವರು ಕೇಳಿದಷ್ಟು ಹಣ ನೀಡುವುದರಿಂದ ಬಾಯಿ ತೆರೆಯುವುದಿಲ್ಲ. ಕನಿಷ್ಠ ಪಿಜಿಗಳಲ್ಲಿ ಕಸದ ಬುಟ್ಟಿಗಳನ್ನಿಟ್ಟು, ಅದರಲ್ಲೇ ಕಸ ಹಾಕಬೇಕೆಂದು ಕಟ್ಟುನಿಟ್ಟಾಗಿ ಹೇಳುವವರಿಲ್ಲ. ಹಣ ಸಂಪಾದನೆ ಮಂಪರಿನಲ್ಲಿ ನಗರದ ಸ್ವಚ್ಛತೆಯನ್ನೇ ಮರೆತಿದ್ದಾರೆ. ಈ ಸಂಬಂಧ ಸೂಕ್ತ ಕ್ರಮ ಕೈಗೊಳ್ಳದಿದ್ದರೆ, ಸ್ವಚ್ಛ ನಗರಿ ಪ್ರಶಸ್ತಿಗೆ ಮುಳುವಾಗುತ್ತದೆ. ಜೊತೆಗೆ ಇದೊಂದು ಗಂಭೀರ ಸಮಸ್ಯೆಯಾಗಿ ಉಲ್ಬಣವಾಗುತ್ತದೆ ಎಂದು ಶ್ರೀಧರ್ ಅಭಿಪ್ರಾಯಿಸಿದ್ದಾರೆ.