ಸಾಹಿತ್ಯ ಕ್ಷೇತ್ರದಲ್ಲಿ ಗುಂಪುಗಾರಿಕೆ ಹೆಚ್ಚಳ: ಸಾಹಿತಿ ಸಿಪಿಕೆ ಬೇಸರ
ಮೈಸೂರು

ಸಾಹಿತ್ಯ ಕ್ಷೇತ್ರದಲ್ಲಿ ಗುಂಪುಗಾರಿಕೆ ಹೆಚ್ಚಳ: ಸಾಹಿತಿ ಸಿಪಿಕೆ ಬೇಸರ

January 24, 2020

ಮೈಸೂರು, ಜ. 23- ಇಂದು ಸಾಹಿತ್ಯ ಕ್ಷೇತ್ರದಲ್ಲಿ ಗುಂಪುಗಾರಿಕೆ ಹೆಚ್ಚಾಗುತ್ತಿದೆ. ಕೇವಲ ಒಂದು ಪುಸ್ತಕ ಬರೆದವರಿಗೆಲ್ಲ ಪ್ರಶಸ್ತಿ, ಪುರಸ್ಕಾರಗಳು ಬಂದಿವೆ. ಅನರ್ಹರು, ಯೋಗ್ಯರಲ್ಲದವರು, ಲಾಬಿ ಮಾಡಿ ದೊಡ್ಡ ಪ್ರಶಸ್ತಿಗಳನ್ನು ಪಡೆದುಕೊಳ್ಳುತ್ತಿದ್ದು, ಅರ್ಹರಿಗೆ ಪ್ರಶಸ್ತಿಗಳು ದಕ್ಕುತ್ತಿಲ್ಲ ಎಂದು ಖ್ಯಾತ ಸಾಹಿತಿ, ನೃಪತುಂಗ ಪ್ರಶಸ್ತಿ ಪುರಸ್ಕøತರಾದ ಡಾ.ಸಿ.ಪಿ.ಕೃಷ್ಣಕುಮಾರ್ (ಸಿಪಿಕೆ) ಬೇಸರ ವ್ಯಕ್ತಪಡಿಸಿದರು.

ನಗರದ ಇಂಜಿನಿಯರುಗಳ ಸಂಸ್ಥೆಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಡಿಎನ್ಕೆ ಅವರ ಎರಡು ಕಾದಂಬರಿಗಳನ್ನು ಲೋಕಾರ್ಪಣೆಗೊಳಿಸಿ ಮಾತನಾಡಿದರು. ದೇಜಗೌ ಅವರಂತಹ ದಿಗ್ಗಜ ಸಾಹಿತಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಬಾರದಿರುವುದು ವಿಪರ್ಯಾಸ. ಹೀಗಾಗಿ ಸಾಹಿತ್ಯ ಅಕಾಡೆಮಿ, ಕನ್ನಡ ಸಾಹಿತ್ಯ ಪರಿಷತ್, ಸರ್ಕಾರ ಯೋಗ್ಯರನ್ನು ಗುರುತಿಸುವ ಕೆಲಸ ಮಾಡಬೇಕು ಎಂದು ಸಿಪಿಕೆ ಆಗ್ರಹಿಸಿದರು.

ಸಮಾಜದಲ್ಲಿ ಇತ್ತೀಚೆಗೆ ನಂಬಿಕೆ, ವಿಶ್ವಾಸ ಕಡಿಮೆ ಆಗುತ್ತಿದೆ. ಇಂದು ಬಿಡುಗಡೆ ಯಾದ ಎರಡೂ ಕಾದಂಬರಿಗಳಲ್ಲೂ ಮಣ್ಣಿನ ವಾಸನೆ ಇದ್ದು, ಗ್ರಾಮೀಣ ಜನಜೀವನ ವನ್ನು ಅನನ್ಯವಾಗಿ ಚಿತ್ರಿಸಲಾಗಿದೆ. ಇತ್ತೀಚಿನ ದಿನಗಳಲ್ಲಿ ಕಾದಂಬರಿ ಬರೆಯುವುದು ಕಷ್ಟದ ಕೆಲಸ. ಹೀಗಾಗಿ ನಾನೇ ಕಾದಂಬರಿ ಬರೆಯುವುದನ್ನು ನಿಲ್ಲಿಸಿದ್ದೇನೆ. ಆದರೆ ಕೃಷ್ಣಮೂರ್ತಿ ಅವರ ಈ ಎರಡೂ ಕಾದಂಬರಿಗಳು ಉತ್ತಮವಾಗಿವೆ ಎಂದರು.

ಸಾಹಿತಿ ಬನ್ನೂರು ಕೆ.ರಾಜು ಮಾತನಾಡಿ, ಇಂದು ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಎರಡು ವರ್ಗದ ಸಾಹಿತಿಗಳಿದ್ದಾರೆ. ಸಿದ್ಧತೆ, ಶುದ್ಧತೆ, ಬದ್ಧತೆ ಇಟ್ಟುಕೊಂಡು ಬರೆಯುವವರು ಒಂದು ವರ್ಗವಾದರೆ, ಇದಾವುದೂ ಇಲ್ಲದೆ ಸಾಹಿತ್ಯವೇ ಅಲ್ಲದ್ದನ್ನು ಸಾಹಿತ್ಯ ಎಂದು ಬರೆದು ಅಗ್ಗದ ಪ್ರಚಾರ ಗಿಟ್ಟಿಸಿಕೊಂಡು, ಲಾಬಿ ಮಾಡಿ ಪ್ರಶಸ್ತಿ ಪಡೆಯಲು ಬರೆಯು ವವರು ಮತ್ತೊಂದು ವರ್ಗ. ಮೊದಲನೇ ವರ್ಗಕ್ಕೆ ಸೇರಿದವರು ಕೃಷ್ಣಮೂರ್ತಿ. ಗ್ರಾಮೀಣ ಭಾಷೆಯೇ ಕಣ್ಮರೆಯಾಗುವ ಕಾಲಘಟ್ಟದಲ್ಲಿ ಗ್ರಾಮೀಣ ಜನಜೀವನವನ್ನು, ಗ್ರಾಮೀಣ ಭಾಷೆಯನ್ನು ಒಂದು ಕೃತಿಯ ಮೂಲಕ ಕಟ್ಟಿಕೊಡುವ ಕೆಲಸವನ್ನು ಎಲ್ಲರೂ ಮಾಡಬೇಕು ಎಂದರು. ಕಾರ್ಯಕ್ರಮದಲ್ಲಿ ವೆಂಗೀಪುರ ನಂಬಿಮಠದ ಇಳೈ ಆಳ್ವಾರ್ ಸ್ವಾಮೀಜಿ, ಮಾಜಿ ಸಚಿವ ಸಿ.ಹೆಚ್.ವಿಜಯಶಂಕರ್, ಸಮಾಜ ಸೇವಕ ಕೆ.ರಘುರಾಂ ವಾಜ ಪೇಯಿ, ಬಿಜೆಪಿ ಮುಖಂಡ ಎಸ್.ಆರ್.ಗೋಪಾಲರಾವ್, ಕರ್ತೃ ಡಿ.ಎನ್.ಕೃಷ್ಣ ಮೂರ್ತಿ, ರಂಗಕರ್ಮಿ ಧನಂಜಯ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Translate »