ಬಡಗಲಪುರ ಆರೋಗ್ಯ ಕೇಂದ್ರಕ್ಕೆ ಭೂಮಿ ನೀಡಿದ ದಾನಿಯ ಆಸೆಗೆ ಆಳುವವರಿಂದ ತಣ್ಣೀರು!
ಮೈಸೂರು

ಬಡಗಲಪುರ ಆರೋಗ್ಯ ಕೇಂದ್ರಕ್ಕೆ ಭೂಮಿ ನೀಡಿದ ದಾನಿಯ ಆಸೆಗೆ ಆಳುವವರಿಂದ ತಣ್ಣೀರು!

January 24, 2020

ಮೈಸೂರು, ಜ.23(ಎಸ್‍ಪಿಎನ್)-ತಮ್ಮದೇ ಸರ್ಕಾರ ಬಂದು 6 ತಿಂಗಳು ಕಳೆದರೂ ಬಿಜೆಪಿ ಕಾರ್ಯಕರ್ತ ರೊಬ್ಬರ ಆಸೆ ಈಡೇರಿಲ್ಲ. ಅದು ಸರ್ಕಾರಿ ನೌಕರಿಯೂ ಅಲ್ಲ, ಇಲ್ಲವೇ ಗುತ್ತಿಗೆ ವ್ಯವಹಾರವೂ ಅಲ್ಲ. ಬದಲಾಗಿ ಪ್ರಾಥಮಿಕ ಆರೋಗ್ಯ ಕೇಂದ್ರದ ಕಟ್ಟಡ ಕಟ್ಟಲು ತಮ್ಮ ಸ್ವಂತ ಜಮೀನು ಬಿಟ್ಟುಕೊಟ್ಟು, ಈ ಜಾಗದಲ್ಲಿ ನಿರ್ಮಾಣ ವಾಗಿರುವ ಕಟ್ಟಡಕ್ಕೆ ನಮ್ಮ ಪೂರ್ವಜರ ಹೆಸರಿಡಿ ಎಂಬುದೇ ಇವರ ಸರಳ ಬೇಡಿಕೆ…!.

ಹೌದು, ಸರಗೂರು ತಾಲೂಕಿನ ಬಡಗಲಪುರ ಗ್ರಾಮ ದಲ್ಲಿ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರ ಸ್ಥಾಪನೆಗೆ ಗ್ರಾಪಂ ಸದಸ್ಯೆ ಭಾಗ್ಯಮ್ಮ ಅವರ ಪತಿ ಶಿವನಂಜೇಗೌಡರು, ಯಡಿಯಾಲ-ಬಡಗಲಪುರ ಮಾರ್ಗದ ರಸ್ತೆ ಪಕ್ಕದಲ್ಲಿರುವ ಜಮೀನಿನಲ್ಲಿ 39 ಗುಂಟೆ ಕೃಷಿ ಜಮೀನನ್ನು ಆರೋಗ್ಯ ಕೇಂದ್ರದ ಕಟ್ಟಡ ಕಟ್ಟಲು 2017ರಲ್ಲಿ ಷರತ್ತಿನ ಮೇರೆಗೆ ಆರೋಗ್ಯ ಇಲಾಖೆಗೆ ದಾನಪತ್ರ ಮಾಡಿಕೊಟ್ಟಿದ್ದಾರೆ.

ದಾನಿಗಳಾದ ಶಿವನಂಜೇಗೌಡರ ಪ್ರಕಾರ, ಈಗಾಗಲೇ ಈ ಜಾಗದಲ್ಲಿ 1.5 ಕೋಟಿ ವೆಚ್ಚದಲ್ಲಿ ಸುಂದರವಾದ ಪ್ರಾಥಮಿಕ ಆರೋಗ್ಯ ಕೇಂದ್ರದ ಕಟ್ಟಡ ನಿರ್ಮಾಣವಾಗಿದೆ. ಈ ಕಟ್ಟಡಕ್ಕೆ ನಮ್ಮ ಪೂರ್ವಜರ ಹೆಸರಿಟ್ಟು, ಪ್ರಾಥಮಿಕ ಆರೋಗ್ಯದ ಚಟುವಟಿಕೆ ಆರಂಭಿಸಲು ನಮ್ಮ ಅಭ್ಯಂತರ ವಿಲ್ಲ. ಆದರೆ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಧಿಕಾರಿಗಳು ತಾಂತ್ರಿಕ ನೆಪವೊಡ್ಡಿ ದಾನಿಗಳು ಹೇಳಿದ ಹೆಸರಿಡಲು ಇಂತಿಷ್ಟು ಜಮೀನು ನೀಡಬೇಕೆಂಬ ಕಾನೂನು ಇದೆ. ಕಡಿಮೆ ಜಮೀನು ನೀಡಿರುವುದರಿಂದ ನಿಮ್ಮ ಬೇಡಿಕೆ ಈಡೇರಿಸಲು ಸಾಧ್ಯವಿಲ್ಲ ಎನ್ನುತ್ತಿದ್ದಾರೆ.

ಅಧಿಕಾರಿಗಳ ಈ ಸಿದ್ಧ ಉತ್ತರಕ್ಕೆ ಬೇಸರಗೊಂಡಿರುವ ಶಿವನಂಜೇಗೌಡರು ಹೊಸ ಕಟ್ಟಡದಲ್ಲಿ ಆಸ್ಪತ್ರೆ ಚಟುವಟಿಕೆ ಆರಂಭವಾಗಬೇಕಾದರೆ, ನಮ್ಮ ಬೇಡಿಕೆ ಮೊದಲು ಈಡೇ ರಿಸಿ, ಇಲ್ಲವೇ ಈ ಜಮೀನಿಗೆ ಬದಲಾಗಿ ನೂತನ ಕಟ್ಟಡದ ಪಕ್ಕದಲ್ಲಿರುವ ಸರ್ಕಾರಿ ಜಮೀನಿನಲ್ಲಿ ದಾನವಾಗಿ ನೀಡಿ ರುವ 39 ಗುಂಟೆ ಜಮೀನು ವಾಪಸ್ಸು ಕೊಡಿಸಿ ಎಂದು ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳ ಬಳಿ ಬೇಡಿಕೆಯಿಟ್ಟಿದ್ದಾರೆ.

ಈ ಸಮಸ್ಯೆ ಬಗೆಹರಿಸುವಂತೆ ವಿಧಾನಸೌಧಕ್ಕೆ ಹತ್ತಾರು ಬಾರಿ ಭೇಟಿ ನೀಡಿರುವ ಶಿವನಂಜೇಗೌಡರು, ಹಿಂದಿನ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ, ಹೆಚ್.ಡಿ.ಕುಮಾರ ಸ್ವಾಮಿ, ಈಗಿನ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹಾಗೂ ಸಂಬಂಧಪಟ್ಟ ಎಲ್ಲಾ ಸಚಿವರಿಗೂ ಮನವಿ ಪತ್ರ ನೀಡಿ ಬಂದರೂ ಯಾವುದೇ ಪ್ರಯೋಜನವಾಗಿಲ್ಲ ಎಂಬುದು ಇವರ ಅಳಲು. ಬಡಗಲಪುರ ಮೈಸೂರಿಂದ 80 ಕಿಮೀ ದೂರವಿದೆ. ಈ ಭಾಗ ಕಾಡಂಚಿನ ಪ್ರದೇಶವಾದ್ದರಿಂದ ಈ ಭಾಗದ ಜನರು ಸಣ್ಣ-ಪುಟ್ಟ ಚಿಕಿತ್ಸೆಗೂ ಮೈಸೂರಿಗೆ ಬರಲು ಸಾಧ್ಯವಾಗದ ಕಾರಣ ನಮ್ಮ ಗ್ರಾಮದಲ್ಲಿ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರ ಕಟ್ಟಲು ಹಿಂದಿನ ರಾಜ್ಯ ಸರ್ಕಾರ ತೀರ್ಮಾನಿಸಿತ್ತು. ಆದರೆ, ಆ ವೇಳೆ ಕಟ್ಟಡ ಕಟ್ಟಲು ಜಾಗ ಸಮಸ್ಯೆ ಎದುರಾದಾಗ, ತಮ್ಮ ಸ್ವಂತ 39 ಗುಂಟೆ ಕೃಷಿ ಜಮೀನು ನೀಡಿ, ಕಟ್ಟಡ ನಿರ್ಮಾಣಕ್ಕೆ ಅವಕಾಶ ಮಾಡಿ ಕೊಟ್ಟೆವು. ನಂತರ ಈ ಕಟ್ಟಡಕ್ಕೆ ನಮ್ಮ ಪೂರ್ವಜರ ಹೆಸರಿಡಿ, ಅವರು ಹೆಸರು ಶಾಶ್ವತವಾಗಿರಲಿ ಎಂಬುದೇ ದಾನಿಗಳ ವಾದ.

`ದಂಪತಿ ಜಗಳದಲ್ಲಿ ಕೂಸು ಬಡವಾಯಿತು’ ಎಂಬ ಗಾದೆ ಮಾತಿನಂತೆ `ದಾನಿಗಳು ಮತ್ತು ಆರೋಗ್ಯ ಅಧಿಕಾರಿಗಳ ಹಗ್ಗ-ಜಗ್ಗಾಟದಿಂದಾಗಿ ಪ್ರಾಥಮಿಕ ಆರೋಗ್ಯ ಕೇಂದ್ರ ಕಟ್ಟಡ ನಿರ್ಮಾಣವಾಗಿ 3 ವರ್ಷ ಕಳೆದರೂ ಸಾರ್ವಜನಿಕ ಸೇವೆಗೆ ಲಭ್ಯವಾಗಿಲ್ಲ’. ಇನ್ನಾದರೂ ಜಿಲ್ಲಾಡಳಿತ, ದಾನಿಗಳ ಬೇಡಿಕೆ ಈಡೇರಿಸಿ, ನೂತನ ಕಟ್ಟಡದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರ ಕಾರ್ಯ ಚಟುವಟಿಕೆ ಆರಂಭವಾಗಲಿ ಎಂಬುದು ಬಡಗಲಪುರ ಗ್ರಾಮಸ್ಥರ ಆಗ್ರಹವಾಗಿದೆ.

Translate »