ಅರಸೀಕೆರೆ: ಮಠದ ಆವರಣದ ಜಮೀನಲ್ಲಿ ಸ್ವಾಮೀಜಿಯೊಬ್ಬರು ಬೇಸಾಯ ಮಾಡಿ ಬೆಳೆದ ತರಕಾರಿ ಬೆಳೆದು ಭಕ್ತರ ದಾಸೋಹಕ್ಕೆ ಬಳಸುವ ಮೂಲಕ ಇತರೆ ಮಠ ಮಂದಿರಗಳಿಗೆ ಮಾದರಿಯಾಗಿದ್ದಾರೆ.
ತಾಲೂಕಿನ ದೊಡ್ಡಮೇಟಿಕುರ್ಕೆ ಗ್ರಾಮದ ಬೂದಿಹಾಳ್ ವೀರಕ್ತ ಮಠದ ಶ್ರೀ ಶಶಿಶೇಖರ ಸಿದ್ದಬಸವ ಸ್ವಾಮೀಜಿ ನೇಗಿಲು ಹಿಡಿದು ಬೇಸಾಯ ಮಾಡುತ್ತಿದ್ದು, ಭೂ ಸೇವೆಗೆ ಅಸಡ್ಡೆ ತೋರುವ ಇಂದಿನ ಯುವ ಜನಾಂಗಕ್ಕೆ ಪದವೀಧರರಾದ ಈ ಸ್ವಾಮೀಜಿ ಸ್ಪೂರ್ತಿಯಾಗಿದ್ದಾರೆ.
ಹತ್ತಾರು ವರ್ಷಗಳಿಂದ ಮಳೆ ಇಲ್ಲದೆ ತತ್ತರಿಸಿದ್ದ ತಾಲೂಕಿನ ರೈತಾಪಿ ಜನತೆಗೆ ಕಳೆದ ದಿನಗಳಿಂದ ಬೀಳುತ್ತಿರುವ ಮುಂಗಾರು ಪೂರ್ವ ಮಳೆ ವರದಾನ ವಾಗಿದ್ದು, ಕೃಷಿ ಚಟುವಟಿಕೆಗಳತ್ತ ಮುಖ ಮಾಡಿದ್ದಾರೆ. ಅದರಂತೆ ಶ್ರೀಗಳೂ ಕೂಡ ನೇಗಿಲು ಹಿಡಿದು ಮಠದ ಆವರಣದ ಜಮೀನ ನ್ನು ಕೃಷಿಗೆ ಸಜ್ಜುಗೊಳಿಸುತ್ತಿದ್ದಾರೆ. ಸಾಮಾನ್ಯ ವಾಗಿ ಗ್ರಾಮೀಣ ಪ್ರದೇಶದ ಜನತೆ ಆಧುನಿಕತೆ ಮತ್ತು ಉದ್ಯೋಗಗಳ ಅರಸಿ ನಗರಗಳತ್ತ ಹೆಜ್ಜೆ ಹಾಕುತ್ತಿರುವುದು ಕಂಡು ಬರುತ್ತಿದ್ದರೆ, ಇವರು ಭೂತಾಯಿಯ ಸೇವೆಯನ್ನು ಸವಾಲಾಗಿ ಸ್ವೀಕರಿಸಿ ಧರ್ಮ ಬೋಧನೆಯೊಂದಿಗೆ ಮಠಕ್ಕೆ ಬರುವ ಭಕ್ತಾದಿಗಳಿಗೆ ಪ್ರತಿನಿತ್ಯ ಉಣಬಡಿಸುವ ದಾಸೋಹಕ್ಕೆ ತರಕಾರಿಗಳನ್ನು ಸ್ಥಳೀಯ ವಾಗಿಯೇ ಸಾವಯವ ಪದ್ಧತಿಯಲ್ಲಿ ಬೆಳೆದು ಕೊಳ್ಳುವ ಕಾರ್ಯ ಮುಂದುವರೆಸಿದ್ದಾರೆ.
ಸಾಮಾನ್ಯವಾಗಿ ಮಠ ಮಂದಿರಗಳೆಂದರೆ ಮೂಗು ಮುರಿಯುವ ಇಂದಿನ ಯುವ ಜನಾಂಗಕ್ಕೆ ನೇಗಿಲು ಹಿಡಿದು ಭೂಮಿ ಉಳುವ ಇಂತಹ ಸ್ವಾಮೀಜಿ ಮಾದರಿಯಾಗುವುದರ ಮೂಲಕ ರಸಗೊಬ್ಬರ ರಹಿತ ಸಾವಯವ ಕೃಷಿಯಿಂದ ಉತ್ತಮ ಆರೋಗ್ಯಕರ ತರಕಾರಿ ಗಳು ಸೇರಿದಂತೆ ಇನ್ನಿತರೆ ಬೆಳೆಗಳನ್ನು ಬೆಳೆಯಬಹುದು ಎಂಬುದನ್ನು ಪ್ರಾತ್ಯಕ್ಷಿಕವಾಗಿ ತೋರಿಸಿಕೊಡುತ್ತಿದ್ದಾರೆ. ಅಕ್ಷರ ದಾಸೋಹ ದೊಂದಿಗೆ ಅನ್ನ ದಾಸೋಹಕ್ಕೂ ಹೆಚ್ಚು ಪ್ರಾಮುಖ್ಯತೆ ನೀಡುತ್ತಿರುವ ಸ್ವಾಮೀಜಿ, ಮಠಕ್ಕೆ ಸೇರಿದ ಉತ್ತಮ ಜಮೀನಿನಲ್ಲಿ ಬೆಳೆದ ಫಸಲನ್ನು ಪ್ರಸಾದದ ರೂಪದಲ್ಲಿ ನೀಡುವ ಅನ್ನ ದಾಸೋಹಕ್ಕೆ ಬಳಸಿಕೊಳ್ಳುತ್ತಿದ್ದು, ಮಠದ ಭಕ್ತರಿಗೂ ಇದು ಹರ್ಷ ತಂದಿದೆ.
ಹೆಚ್ಚು ಬೆಳೆ ಮತ್ತು ಕಡಿಮೆ ಅವಧಿ ಎಂಬ ಮಾಯಾ ಪದ್ಧತಿಗೆ ಮಾರು ಹೋಗಿ ನಮ್ಮ ರೈತರು ಭೂಮಿ ಫಲವತ್ತತೆ ಹಾಳಾ ಗುತ್ತಿದೆ. ಆದರೂ ಕಾಲ ಮಿಂಚಿಲ್ಲವಾದ್ದ ರಿಂದ ನಮ್ಮ ರೈತರು ಹಿಂದಿನಂತೆ ಸಾವ ಯವ ಕೃಷಿಗೆ ಹೆಚ್ಚು ಒತ್ತು ನೀಡಿದ್ದಲ್ಲಿ ಕಳೆದುಕೊಂಡಿರುವ ಭೂಮಿ ಫಲವತ್ತತೆ ಮರಳಿ ಪಡೆಯಬಹುದು. ಈಗಾಗಲೇ ರಾಸಾಯನಿಕ ಗೊಬ್ಬರಗಳಿಂದ ಕಹಿ ಅನುಭವ ಪಡೆದಿರುವ ನಮ್ಮ ರೈತಾಪಿ ಜನರು ಇತ್ತೀಚೆಗೆ ಸಾವಯವ ಕೃಷಿಗೆ ಮರಳುತ್ತಿರುವುದು ಸಮಾಧಾನಕರ ಸಂಗತಿಯಾಗಿದೆ ಎಂಬುದು ಸ್ವಾಮೀಜಿಗಳ ಭರವಸೆ ಮಾತಾಗಿದೆ.