ಹಲಸಿನ ಹಣ್ಣು ತೊಳೆಕೊಡದಕ್ಕೆ ಹತ್ಯೆ: ಹಂತಕನಿಗೆ 10 ವರ್ಷ ಶಿಕ್ಷೆ
ಮೈಸೂರು

ಹಲಸಿನ ಹಣ್ಣು ತೊಳೆಕೊಡದಕ್ಕೆ ಹತ್ಯೆ: ಹಂತಕನಿಗೆ 10 ವರ್ಷ ಶಿಕ್ಷೆ

July 1, 2018

ಮೈಸೂರು: ಹಲಸಿನ ಹಣ್ಣಿನ ತೊಳೆ ಕೊಡಲಿಲ್ಲ ಎಂಬ ಕಾರಣಕ್ಕಾಗಿ ಬೀದಿಬದಿ ವ್ಯಾಪಾರಿಯನ್ನು ಹತ್ಯೆಗೈದ ಹಂತಕನಿಗೆ 10 ವರ್ಷ ಕಠಿಣ ಜೈಲು ಶಿಕ್ಷೆ ಮತ್ತು 10 ಸಾವಿರ ರೂ. ದಂಡ ವಿಧಿಸಿ ಮೈಸೂರಿನ ಒಂದನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶೆ ಶ್ರೀಮತಿ ವನಮಾಲ ಯಾದವ ತೀರ್ಪು ನೀಡಿದ್ದಾರೆ.

ಮೈಸೂರಿನ ಕೆ.ಜಿ. ಕೊಪ್ಪಲು ನಿವಾಸಿ ಟಿ.ನಿತ್ಯಾನಂದ (35) ಶಿಕ್ಷೆಗೆ ಗುರಿಯಾದವನಾಗಿದ್ದು, ಈತ 2015ರ ಜುಲೈ 2ರಂದು ಸರಸ್ವತಿಪುರಂನ ಕಾಂತರಾಜ್ ಅರಸ ರಸ್ತೆಯ ಜಿ.ಕೆ.ವೇಲು ಸ್ಟ್ಟುಡಿಯೋ ಮುಂಭಾಗ ಫುಟ್‍ಬಾತ್‍ನಲ್ಲಿ ತಳ್ಳುವ ಗಾಡಿಯಲ್ಲಿ ಹಲಸಿನ ಹಣ್ಣು ಮಾರಾಟ ಮಾಡುತ್ತಿದ್ದ ಕಾಳೇಗೌಡ ಎಂಬುವವರ ಬಳಿ ಹಣ ಇಲ್ಲದೆ ಹಲಸಿನ ತೊಳೆ ಕೊಡಬೇಕೆಂದು ಕೇಳಿದ್ದಾನೆ. ಹಣವಿಲ್ಲದೆ ಹಣ್ಣು ಕೊಡಲು ಸಾಧ್ಯವಿಲ್ಲ ಎಂದು ಹೇಳಿದ ಕಾಳೇಗೌಡರ ಮೇಲೆ ಈತ ದೊಣ್ಣೆಯಿಂದ ಮಾರಣಾಂತಿಕ ಹಲ್ಲೆ ನಡೆಸಿದ್ದಾನೆ.

ತೀವ್ರವಾಗಿ ಗಾಯಗೊಂಡಿದ್ದ ಕಾಳೇಗೌಡರನ್ನು ಕೆ.ಆರ್.ಆಸ್ಪತ್ರೆಗೆ ದಾಖಲಿಸಲಾಗಿ ಅವರು ಚಿಕಿತ್ಸೆ ಫಲಕಾರಿಯಾಗದೆ 2015ರ ಜುಲೈ 3ರಂದು ಸಾವನ್ನಪ್ಪಿದ್ದರು. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದ ಸರಸ್ವತಿಪುರಂ ಪೊಲೀಸರು ನ್ಯಾಯಾಲಯಕ್ಕೆ ಆರೋಪ ಪಟ್ಟಿ ಸಲ್ಲಿಸಿದರು. ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಧೀಶರು ನಿತ್ಯಾನಂದನಿಗೆ ಶಿಕ್ಷೆ ವಿಧಿಸಿ ತೀರ್ಪು ನೀಡಿದ್ದಾರೆ. ಅಲ್ಲದೆ ಮೃತ ಕಾಳೇಗೌಡರ ಪತ್ನಿಗೆ ಸರ್ಕಾರದಿಂದ 1ಲಕ್ಷ ರೂ. ಪರಿಹಾರ ನೀಡಬೇಕು ಎಂದು ಆದೇಶಿಸಿದ್ದಾರೆ.
ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕ ಅಜೀತ್‍ಕುಮಾರ್ ಡಿ. ಹಮಿಗಿ ವಾದ ಮಂಡಿಸಿದರು.

Translate »