ಬಸ್‍ಗೆ ಡಿಕ್ಕಿ ಹೊಡೆದು ಉರುಳಿ ಬಿದ್ದ ಲಾರಿ
ಕೊಡಗು

ಬಸ್‍ಗೆ ಡಿಕ್ಕಿ ಹೊಡೆದು ಉರುಳಿ ಬಿದ್ದ ಲಾರಿ

June 28, 2018

ಮಡಿಕೇರಿ: ಕಬ್ಬಿಣದ ಶೀಟ್ ರೋಲ್ ಸಾಗಿಸುತ್ತಿದ್ದ ಲಾಂಗ್ ಚಾಸೀಸ್ ಲಾರಿಯೊಂದು, ಕೆಎಸ್‍ಆರ್‍ಟಿಸಿ ಬಸ್‍ಗೆ ಡಿಕ್ಕಿ ಹೊಡೆದು ರಸ್ತೆ ಮಧ್ಯೆ ಉರುಳಿ ಬಿದ್ದ ಘಟನೆ ಮಡಿಕೇರಿ ಸಮೀಪದ ಬೋಯಿಕೇರಿಯಲ್ಲಿ ನಡೆದಿದೆ.

ಮಂಗಳೂರು ಬಂದರಿನಿಂದ ಬೆಂಗಳೂರು ಕಡೆಗೆ 60 ಟನ್ ತೂಕದ ಕಬ್ಬಿಣದ 2 ಶೀಟ್ ರೋಲ್ ಸಾಗಿಸುತ್ತಿದ್ದ ಲಾರಿ, ಬೊಯಿಕೇರಿ ಬಳಿಯ ರಸ್ತೆ ಹಂಪ್ಸ್‍ನಲ್ಲಿ ಚಾಲಕನ ನಿಯಂತ್ರಣ ಕಳೆದುಕೊಂಡಿದೆ. ಈ ಸಂದರ್ಭ ಮೈಸೂರು ಕಡೆಯಿಂದ ಮಡಿಕೇರಿಗೆ ಬರುತ್ತಿದ್ದ ಕೆಎಸ್‍ಆರ್‍ಟಿಸಿ ಬಸ್‍ಗೆ ಡಿಕ್ಕಿ ಹೊಡೆದಿದೆ. ಬಸ್‍ನಲ್ಲಿದ್ದ 10ಕ್ಕೂ ಹೆಚ್ಚು ಪ್ರಯಾಣಿಕರಿಗೆ ಸಣ್ಣ-ಪುಟ್ಟ ಗಾಯಗಳಾಗಿದ್ದು, ಲಾರಿಯ ಚಾಸೀಸ್ ತುಂಡರಿಸಿ ರಸ್ತೆಗೆ ಬಿದ್ದಿದೆ. ಚಾಸೀಸ್‍ಗೆ ಕಬ್ಬಿಣದ ರೋಲ್ ಶೀಟ್ ಅಲುಗಾಡದಂತೆ ಕಟ್ಟಲ್ಪಟ್ಟಿದ್ದ ಕಬ್ಬಿಣದ ರೋಪ್ ತುಂಡರಿಸಿದ್ದು, 60 ಟನ್ ತೂಕದ ರೋಲ್ ರಸ್ತೆಗೆ ಉರುಳಿ ಬಿದ್ದಿದೆ. ಮತ್ತೊಂದು ರೋಲ್ ಸಮೀಪದಲ್ಲಿದ್ದ ಮನೆಗೆ ಅಪ್ಪಳಿಸಿದ್ದು, ಮನೆಯಲ್ಲಿ ಯಾರೂ ವಾಸ ಇಲ್ಲದ ಪರಿಣಾಮ ಭಾರೀ ಅನಾಹುತವೊಂದು ತಪ್ಪಿದಂತಾಗಿದೆ.

ಭಾರೀ ತೂಕದ ಕಬ್ಬಿಣದ ರೋಲ್ ಹೆದ್ದಾರಿಗೆ ಬಿದ್ದ ಪರಿಣಾಮ ಸ್ಥಳದಲ್ಲಿ ಒಂದು ಅಡಿ ಆಳದ ಗುಂಡಿ ನಿರ್ಮಾಣವಾಗಿದೆ.ಲಾರಿ ಚಾಲಕನಿಗೂ ಸಣ್ಣ ಪುಟ್ಟ ಗಾಯಾ ಗಳಾಗಿದ್ದು, ಪ್ರಕರಣದ ಕುರಿತು ಮಡಿಕೇರಿ ಗ್ರಾಮಾಂತರ ಠಾಣೆಯಲ್ಲಿ ದೂರು ದಾಖ ಲಾಗಿದೆ. ಮೈಸೂರಿನಿಂದ ಭಾರೀ ಗಾತ್ರದ ಕ್ರೇನ್ ತಂದು ಕಬ್ಬಿಣದ ರೋಲ್ ಶೀಟನ್ನು ರಸ್ತೆ ಬದಿಗೆ ಸರಿಸಲಾಯಿತು. ಈ ಅಪಘಾತದಿಂದಾಗಿ ಮಡಿಕೇರಿ ಕುಶಾಲನಗರ ಹೆದ್ದಾರಿ ಉದ್ದಕ್ಕೂ ನೂರಾರು ವಾಹನಗಳು ಸಾಲುಗಟ್ಟಿ ನಿಂತಿದ್ದವು.

Translate »