ಮಂಡ್ಯ ಜನತೆಗೆ ಮತ್ತೊಬ್ಬ ಮಣ್ಣಿನ ಮಗನ ಸೃಷ್ಟಿಸುವ ಅವಕಾಶ ಸಿಕ್ಕಿದೆ
ಮೈಸೂರು

ಮಂಡ್ಯ ಜನತೆಗೆ ಮತ್ತೊಬ್ಬ ಮಣ್ಣಿನ ಮಗನ ಸೃಷ್ಟಿಸುವ ಅವಕಾಶ ಸಿಕ್ಕಿದೆ

April 11, 2019

ಮೈಸೂರು: ನಿಖಿಲ್ ವಯಸ್ಸಿನಲ್ಲಿ ಚಿಕ್ಕವ ನಾದರೂ ಜನಸೇವೆ ಹಾಗೂ ಕ್ಷೇತ್ರದ ಅಭಿವೃದ್ಧಿ ಮಾಡ ಬೇಕೆಂಬ ಬದ್ಧತೆ ಹೊಂದಿದ್ದಾನೆ. ಮತ್ತೊಬ್ಬ ಮಣ್ಣಿನ ಮಗನನ್ನು ಮಂಡ್ಯದ ಜನರೇ ಸೃಷ್ಟಿ ಮಾಡಬೇಕೆಂದು ಮಂಡ್ಯ ಲೋಕಸಭಾ ಕ್ಷೇತ್ರದ ಮೈತ್ರಿ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ತಾಯಿ, ರಾಮನಗರ ಶಾಸಕಿ ಅನಿತಾ ಕುಮಾರಸ್ವಾಮಿ ಮನವಿ ಮಾಡಿದ್ದಾರೆ.

ಮೈಸೂರಿನ ವಿಜಯನಗರದಲ್ಲಿರುವ ಸಪ್ತಪದಿ ಕಲ್ಯಾಣ ಮಂಟಪದಲ್ಲಿ ಬುಧವಾರ ಲೋಕಸಭಾ ಚುನಾವಣಾ ಹಿನ್ನೆಲೆ ಯಲ್ಲಿ ಏರ್ಪಡಿಸಲಾಗಿದ್ದ ಮಂಡ್ಯ ಜಿಲ್ಲೆ ಮೈಸೂರು ನಿವಾಸಿಗಳ ಒಕ್ಕೂಟದ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದ ಅವರು, ಲೋಕಸಭಾ ಚುನಾವಣೆಯಲ್ಲಿ ನಿಖಿಲ್ ಅಭ್ಯರ್ಥಿ ಯಾಗಬೇಕೆಂದು ನಾನಾಗಲೀ, ಕುಮಾರ ಸ್ವಾಮಿಯವರಾಗಲೀ ಅಪೇಕ್ಷಿಸಿರಲಿಲ್ಲ. ಇದು ಸ್ಥಳೀಯ ಶಾಸಕರು, ಮುಖಂಡರ ತೀರ್ಮಾನ ಎಂಬುದನ್ನು ಮೊದಲಿಗೆ ಸ್ಪಷ್ಟಪಡಿಸುತ್ತೇನೆ. ನಿಖಿಲ್ ಚಿಕ್ಕವನು, ಈಗಲೇ ರಾಜಕೀಯ ಬೇಕಿತ್ತಾ ಎನ್ನುವ ವರಿದ್ದಾರೆ. ಹೌದು ನಿಖಿಲ್ ವಯಸ್ಸಿನಲ್ಲಿ ಚಿಕ್ಕವನು. ಆದರೆ ಕ್ಷೇತ್ರದ ಅಭಿವೃದ್ಧಿ ಹಾಗೂ ಜನಸೇವೆ ಬಗ್ಗೆ ಆತನಲ್ಲಿ ಬದ್ಧತೆಯಿದೆ. ವಿದ್ಯೆಯಿದೆ, ದೊಡ್ಡವರು, ಮಹಿಳೆಯರನ್ನು ಗೌರವದಿಂದ ಕಾಣುವ ವಿಧೇಯತೆಯಿದೆ. ಎಲ್ಲರೊಂದಿಗೆ ಬೆರೆಯುವ ಸ್ನೇಹತ್ವವಿದೆ. ಚುನಾವಣೆಯಲ್ಲಿ ಅಭ್ಯರ್ಥಿ ಯಾಗಲು ಇಷ್ಟಿದ್ದರೆ ಸಾಕಲ್ಲವೇ? ಎಂದು ಪ್ರಶ್ನಿಸಿದರು.

ವಿಧಾನಸಭಾ ಚುನಾವಣೆಯಲ್ಲಿ ಜಿಲ್ಲೆಯ ಎಲ್ಲಾ ಕ್ಷೇತ್ರಗಳಲ್ಲಿ ನಮ್ಮ ಅಭ್ಯರ್ಥಿಗಳನ್ನು ಗೆಲ್ಲಿಸಿಕೊಟ್ಟ ಮಂಡ್ಯದ ಜನರ ಋಣ ಜೆಡಿಎಸ್ ಮೇಲಿದೆ. ಹಾಗಾಗಿ ಮುಖ್ಯಮಂತ್ರಿ ಕುಮಾರ ಸ್ವಾಮಿ ಅವರು ವಿವಿಧ ಅಭಿವೃದ್ಧಿ ಕಾರ್ಯಗಳಿಗಾಗಿ 8,400 ಕೋಟಿ ರೂ. ಅನುದಾನ ನೀಡಿದ್ದಾರೆ. ರೈತ ಆತ್ಮಹತ್ಯೆ ಮಾಡಿ ಕೊಂಡಾಗ ಅವರ ಬಳಿ ಮೊದಲು ಧಾವಿಸಿ, ಆ ಕುಟುಂಬಕ್ಕೆ ನೆರವಾಗುವುದು ಕುಮಾರ ಸ್ವಾಮಿ. ಕಾವೇರಿ ವಿಚಾರ ಬಂದಾಗ ಮೊದಲು ಬರುವುದು ಹೆಚ್.ಡಿ.ದೇವೇಗೌಡರು. ಈ ಸತ್ಯವನ್ನು ಎಲ್ಲರೂ ಒಪ್ಪಲೇಬೇಕು. ಮಂಡ್ಯದ ಪಕ್ಷೇತರ ಅಭ್ಯರ್ಥಿ ಎಂದಾದರೂ ಬಂದಿದ್ದಾರಾ. ಪತಿ ನಿಧನದ ನಂತರ ಜನರ ಬಳಿ ಬಂದಿದ್ದಾರೆ. ಅವರು ರಾಜಕೀಯಕ್ಕೆ ಬರಬಾರದು ಎಂಬುದು ನನ್ನ ಭಾವನೆಯಲ್ಲ. ಆದರೆ ಮಿತಿಮೀರಿ ಮಾತ ನಾಡಬಾರದು. ಅವರೂ ಜನರ ಬಳಿ ಹೋಗಲಿ, ನಮ್ಮ ಮಗ ನಿಖಿಲ್ ಕೂಡ ಜನರ ಆಶೀರ್ವಾದ ಕೇಳುತ್ತಾನೆ. ಅಂತಿಮವಾಗಿ ಜನ ತೀರ್ಮಾನಿ ಸುತ್ತಾರೆ. ಕೆಲ ಯುವಕರು ಸಿನಿಮಾ ಹುಚ್ಚಿನಿಂದ ಪಕ್ಷೇತರ ಅಭ್ಯರ್ಥಿ ಪರ ನಿಂತಿದ್ದಾರೆ. ಅವರಿಗೆ ನೀವೆಲ್ಲಾ ತಿಳಿ ಹೇಳಬೇಕು. ಇಲ್ಲಿರುವ ಒಬ್ಬೊಬ್ಬರೂ ನೂರಿನ್ನೂರು ಜನರಿಂದ ಮತ ಹಾಕಿಸಬೇಕು. ರಾಜ್ಯದ ಎಲ್ಲಾ ಕ್ಷೇತ್ರಗಳಲ್ಲಿ ಮೈತ್ರಿ ಅಭ್ಯರ್ಥಿಗಳ ಗೆಲುವಿಗೆ ಸಹಕರಿಸಬೇಕೆಂದು ಮನವಿ ಮಾಡಿದರು. ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ಸಿ.ಎಸ್.ಪುಟ್ಟರಾಜು, ವಿಧಾನ ಪರಿಷತ್ ಸದಸ್ಯರಾದ ಮರಿತಿಬ್ಬೇಗೌಡ, ಕೆ.ಟಿ.ಶ್ರೀಕಂಠೇಗೌಡ, ಮೈಸೂರು ವಿವಿ ವಿಶ್ರಾಂತ ಕುಲಪತಿ, ಜೆಡಿಎಸ್ ಮುಖಂಡ ಪ್ರೊ.ಕೆ.ಎಸ್.ರಂಗಪ್ಪ, ಜೆಡಿಎಸ್ ಮೈಸೂರು ಜಿಲ್ಲಾಧ್ಯಕ್ಷ ನರಸಿಂಹ ಸ್ವಾಮಿ, ನಗರಪಾಲಿಕೆ ಸದಸ್ಯರಾದ ಪ್ರೇಮಾ ಶಂಕರೇಗೌಡ, ಕೆ.ವಿ.ಶ್ರೀಧರ್, ಭಾಗ್ಯ ಮಾದೇಶ್, ಎಸ್‍ಬಿಎಂ ಮಂಜು, ರಮೇಶ್, ಮಾಜಿ ಸದಸ್ಯ ಕೆ.ವಿ.ಮಲ್ಲೇಶ್, ಮೈಸೂರು ಒಕ್ಕಲಿಗರ ಸಂಘದ ನಾಗರಾಜು, ಒಕ್ಕೂಟದ ನರಸಿಂಹೇಗೌಡ, ಜೆಡಿಎಸ್ ಮುಖಂಡರಾದ ನಂಜುಂಡಸ್ವಾಮಿ, ರಾಮೇಗೌಡ, ಹೇಮಾವತಿ, ಕುಮಾರಸ್ವಾಮಿ, ಪ್ರತಾಪ್ ಮತ್ತಿತರರು ಉಪಸ್ಥಿತರಿದ್ದರು.

Translate »