ಇಬ್ಬರ ಸಾಹಸಗಾಥೆಯ ಚಿತ್ರ`ವೀ..ಟು’ ಜೂ.29ಕ್ಕೆ ಬಿಡುಗಡೆ
ಮೈಸೂರು

ಇಬ್ಬರ ಸಾಹಸಗಾಥೆಯ ಚಿತ್ರ`ವೀ..ಟು’ ಜೂ.29ಕ್ಕೆ ಬಿಡುಗಡೆ

June 27, 2018

ಮೈಸೂರು:  ಒಂದು ಲೋ ಬಜೆಟ್ ಸಿನಿಮಾವಾದರೂ ಪಾತ್ರಧಾರಿಗಳು, ತಾಂತ್ರಿಕ ವರ್ಗ ಸೇರಿದಂತೆ ಒಂದಿಷ್ಟು ಮಾನವ ಸಂಪನ್ಮೂಲ ಬೇಕುಬೇಕು. ಚಿತ್ರವೊಂದು ಸಿದ್ಧಗೊಳ್ಳಲು ಆಯಾಯ ಕೆಲಸ-ಕಾರ್ಯಗಳಿಗೆ ಪರಿಣಿತರು ತಂಡ ಅಗತ್ಯವಾಗಿ ಇರಲೇಬೇಕು ಎಂಬ ಸಿದ್ಧ ಸೂತ್ರಕ್ಕೆ ಸೆಡ್ಡು ಹೊಡೆದಿರುವ ಮೈಸೂರಿನ ಇಬ್ಬರು ನಟರು ಎಲ್ಲವನ್ನೂ ತಾವೇ ಮಾಡಿ ಸಿನಿಮಾ ಬಿಡುಗಡೆ ಮಾಡಲು ತಯಾರಿ ನಡೆಸಿದ್ದಾರೆ. ಕಥೆ-ಚಿತ್ರಕಥೆ, ಅಭಿನಯ, ಛಾಯಾಗ್ರಾಹಣ, ಸಂಗೀತ, ಸಂಕಲನ ಎಲ್ಲವನ್ನೂ ಇಬ್ಬರೇ ಮಾಡಿರುವ ಕನ್ನಡ ಸಿನಿಮಾ `ವೀ..ಟು’. ಜೂ.29ರಂದು ಮೈಸೂರು, ಮಂಡ್ಯ ಸೇರಿದಂತೆ ರಾಜ್ಯಾದ್ಯಂತ ಸಿನಿಮಾ ಬಿಡುಗಡೆ ಮಾಡುತ್ತಿರುವ ವಿಷಯ ತಿಳಿಸಿದ ಚಿತ್ರದ ನಟರಲ್ಲಿ ಒಬ್ಬರಾದ ಭಯಾನಕ ನಾಗ, ಚಿತ್ರ ನಿರ್ಮಾಣಗೊಂಡ ಕಥೆಯನ್ನು ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಮಾತನಾಡಿದ ಅವರು, ಸಿನಿಮಾ ಇತಿಹಾಸದಲ್ಲೇ ಯಾರೂ ಮಾಡಿರದ ಪ್ರಯೋಗ ಮಾಡಿದ್ದೇವೆ. `ಕಿರಣ್ ಕ್ರಿಯೇಷನ್ಸ್ ಮೈಸೂರು’ ಬ್ಯಾನರ್‍ನಡಿ ವೀ..ಟು ಚಿತ್ರ ನಿರ್ಮಾಣವಾಗಿದೆ. ಎರಡು ಗಂಟೆಗಳ ಅವಧಿಯ ಈ ಚಿತ್ರ ಮನರಂಜನೆ ನೀಡುವ ಜೊತೆಗೆ ಹಣದ ಹಿಂದೆ ಹೋದರೆ ಯಾವ ರೀತಿ ಅನಾಹುತಕ್ಕೆ ಸಿಲುಕಬೇಕಾಗುತ್ತದೆ ಎಂಬ ಸಂದೇಶ ನೀಡಲಿದೆ ಎಂದ ಅವರು, ಕ್ಯಾಮರಾ ನಿರ್ವಹಣೆ ಮಾಡಿದ್ದು ಹೇಗೆಂಬ ಪ್ರಶ್ನೆಗೆ ಉತ್ತರಿಸಿ, ಒಬ್ಬರು ಅಭಿ ನಯಿಸುವಾಗ ಮತ್ತೊಬ್ಬರು ಚಿತ್ರೀಕರಣ ಮಾಡಿದೆವು. ಇಬ್ಬರೂ ಒಟ್ಟಿಗೆ ಕಾಣ ಸಿ ಕೊಳ್ಳುವ ದೃಶ್ಯಗಳಿಗೆ ಸ್ನೇಹಿತರ ಸಹಾಯ ಪಡೆದಿದ್ದೇವೆ ಎಂದು ಪ್ರತಿಕ್ರಿಯಿಸಿದರು.

ಸಿನಿಮಾದ ಮತ್ತೊಬ್ಬ ನಟ ಕೃಷ್ಣ ನಾಗ್ ಮಾತನಾಡಿ, ಪ್ರತಿಭೆ ಅನಾವರಣಕ್ಕೆ ಎಲ್ಲಿಯೂ ಅವಕಾಶ ಸಿಗದಿದ್ದ ಕಾರಣಕ್ಕೆ ಈ ವಿಭಿನ್ನ ಪ್ರಯೋಗ ಮಾಡಿದ್ದು, ಅವಕಾಶ ವಂಚಿ ತರು ತಾವೇ ಅವಕಾಶ ಸೃಷ್ಟಿಸಿಕೊಳ್ಳಬೇಕು ಎಂಬ ಸಂದೇಶ ನೀಡಿದ ಭಾವನೆ ಇದೆ. ಕೆಲವು ರಕ್ತಪಾತದ ದೃಶ್ಯಗಳಿರುವ ಹಿನ್ನೆಲೆಯಲ್ಲಿ ಸಿನಿಮಾಕ್ಕೆ `ಎ’ ಪ್ರಮಾಣ ಪತ್ರ ನೀಡಲಾಗಿದೆ. ಇಬ್ಬರೇ ನಟಿಸಿರುವ ಹಿನ್ನೆಲೆಯಲ್ಲಿ ಪ್ರಕ್ಷೇಕರಿಗೆ ಬೇಸರವಾಗಬಾರದು ಎಂಬ ಕಾರಣಕ್ಕೆ ರಕ್ತಪಾತದ ಸನ್ನಿವೇಶ ಉಳಿಸಿಕೊಳ್ಳಲಾಗಿದೆ ಎಂದರು. ಲೇಖಕ ರಘು, ಮುಖಂಡರಾದ ರಾಜೇಂದ್ರ, ನಟ ಸುರೇಶ್ ಉದೂರು ಸುದ್ದಿಗೋಷ್ಠಿಯಲ್ಲಿ ಇದ್ದರು.

Translate »