ಮೈಸೂರು: ದ್ಯಾ ಸಿನಿಹೌಸ್ ಬ್ಯಾನರ್‍ನಡಿ ನಿರ್ಮಾಣಗೊಂಡಿರುವ ಹಳ್ಳಿಯೊಂದರಲ್ಲಿ ನಡೆದ ನೈಜ ಘಟನೆಯಾಧಾರಿತ ಚಿತ್ರ `ಪರಸಂಗ-ತಿಮ್ಮನ ಕಥೆ’ ಜು.6ರಂದು ರಾಜ್ಯಾದ್ಯಂತ ಬಿಡುಗಡೆಗೊಳ್ಳಲಿದೆ ಎಂದು ಚಿತ್ರ ನಿರ್ದೇಶಕ ಕೆ.ಎಂ.ರಘು ತಿಳಿಸಿದರು.
ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಹಾಸನ ಜಿಲ್ಲೆಯ ಹಳ್ಳಿಯೊಂದರಲ್ಲಿ ನಡೆದ ನೈಜ ಘಟನೆಯ ಕಥಾಹಂದರದ ಸಿನಿಮಾ ಇದಾಗಿದ್ದು, ಚಿತ್ರದ ಬಹುತೇಕ ಚಿತ್ರೀಕರಣ ಮೈಸೂರು ನಗರ ಸೇರಿದಂತೆ ಜಿಲ್ಲೆಯ ಗ್ರಾಮೀಣ ಪ್ರದೇಶದಲ್ಲಿ ನಡೆದಿರುವುದು ವಿಶೇಷ ಎಂದು ಹೇಳಿದರು.
ನಾಯಕರಾಗಿ ಮಿತ್ರ ಹಾಗೂ ನಾಯಕಿಯಾಗಿ ಅಕ್ಷತಾ ಶ್ರೀನಿವಾಸ್ ಅಭಿನಯಿಸಿರುವ ಈ ಚಿತ್ರಕ್ಕೆ ಹರ್ಷವರ್ಧನ್‍ರಾಜ್ ಸಂಗೀತ ನಿರ್ದೇಶನ ಮಾಡಿದ್ದಾರೆ. ಚಿತ್ರದಲ್ಲಿ ಐದು ಹಾಡುಗಳಿದ್ದು, ಸಾವಿರ ಅಡಿ ಎತ್ತರದಿಂದ ಸಿನಿಮಾದ ಒಂದು ಸಾಹಸಮಯ ಸನ್ನಿವೇಶ ಚಿತ್ರೀಕರಿಸಿರುವುದು ಚಿತ್ರದ ವಿಶೇಷತೆಗಳೊಂದಾಗಿದೆ ಎಂದರು.
ಮರಳಿ ಬಾರದ ಊರಿಗೆ: ಮರಳಿ ಬಾರದ ಊರಿಗೆ… ಗೀತೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಈ ಗೀತೆಯನ್ನು ಮೈಸೂರು ವಿವಿ ಪ್ರಾಧ್ಯಾಪಕಿ ಡಾ.ಲೋಲಾಕ್ಷಿ ಅವರ ಕವನ ಸಂಕಲನದಿಂದ ಆಯ್ದುಕೊಳ್ಳಲಾಗಿದೆ. ಇದೊಂದು ಗೀತೆಗೆ ಮಾತ್ರ ಮೈಸೂರಿನ ನಾಗೇಶ್ ಕಂದೇಗಾಲ ರಾಗ ಸಂಯೋಜನೆ ಮಾಡಿದ್ದಾರೆ. ಮನಕಲಕುವ ಸಾಹಿತ್ಯ ಒಳಗೊಂಡಿರುವ ಈ ಹಾಡಿಗೆ ಜೋಗಿ ಖ್ಯಾತಿಯ ನಿರ್ದೇಶಕ ಪ್ರೇಮ್ ಕಂಠಸಿರಿ ನೀಡಿದ್ದಾರೆ ಎಂದು ತಿಳಿಸಿದರು.
ನಾಯಕ ನಟ ಮಿತ್ರ ಮಾತನಾಡಿ, ಕುಟುಂಬ ಸಮೇತ ಯಾವುದೇ ಮುಜುಗರವಿಲ್ಲದೆ, ನೋಡುವಂತಹ ಸಿನಿಮಾ ಇದು. ಹೊಸ ಪ್ರತಿಭೆಗಳಿಗೆ ಹೆಚ್ಚಿನ ಅವಕಾಶಗಳನ್ನು ನೀಡಲಾಗಿದೆ. ಮೈಸೂರಿನ ರಾಜಕಾರಣಿ ಯೊಬ್ಬರ ಅದ್ಬುತ ಅಭಿನಯ ಚಿತ್ರದಲ್ಲಿದ್ದು, ಅವರು ಯಾರೆಂಬುದನ್ನು ಸದ್ಯ ಸಸ್ಪೆನ್ಸ್ ಆಗಿ ಇಡಲಾಗಿದೆ ಎಂದು ಹೇಳಿದರು. ಸಿನಿಮಾ ನಿರ್ದೇಶಕರಲ್ಲಿ ಒಬ್ಬರಾದ ಕೆ.ಎಂ.ಲೋಕೇಶ್, ಪ್ರಾಧ್ಯಾಪಕಿ ಡಾ.ಲೋಲಾಕ್ಷಿ, ಗಾಯಕ ನಾಗೇಶ್ ಕಂದೇಗಾಲ ಗೋಷ್ಠಿಯಲ್ಲಿದ್ದರು.