ಇಂದು, ನಾಳೆ ಎಸ್‍ಡಿಪಿಐ ರಾಜ್ಯ ಪ್ರತಿನಿಧಿಗಳ ಸಭೆ
ಮೈಸೂರು

ಇಂದು, ನಾಳೆ ಎಸ್‍ಡಿಪಿಐ ರಾಜ್ಯ ಪ್ರತಿನಿಧಿಗಳ ಸಭೆ

July 1, 2018

ಮೈಸೂರು: ಎಸ್‍ಡಿಪಿಐ ರಾಜ್ಯ ಕಾರ್ಯಕಾರಣಿ ಸಮಿತಿ ಸದಸ್ಯರ ಆಯ್ಕೆಗಾಗಿ ಮೈಸೂರಿನಲ್ಲಿ ಜು.1 ಮತ್ತು 2ರಂದು ಪಕ್ಷದ ರಾಜ್ಯ ಪ್ರತಿನಿಧಿಗಳ ಸಭೆಯನ್ನು ಆಯೋಜಿಸಲಾಗಿದೆ ಎಂದು ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಮಜೀದ್ ತಿಳಿಸಿದರು.

ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್‍ಡಿಪಿಐ) ಪಕ್ಷವು ಭಾರತದ ಚುನಾವಣಾ ಆಯೋಗದ ನಿಯಮಗಳಿಗೆ ಬದ್ಧವಾಗಿ ಪ್ರತಿ ಮೂರು ವರ್ಷಕ್ಕೊಮ್ಮೆ ತಳಮಟ್ಟದಿಂದ ರಾಷ್ಟ್ರಮಟ್ಟದವರೆಗೆ ಆಂತರಿಕ ಚುನಾವಣೆ ಮೂಲಕ ಕಾರ್ಯಕಾರಣಿ ಸಮಿತಿ ಸದಸ್ಯರನ್ನು ಆಯ್ಕೆ ಮಾಡುತ್ತಿದೆ ಎಂದು ಹೇಳಿದರು.

ಮೈಸೂರಿನ ಹೈವೇ ವೃತ್ತದ ಬಳಿ ಇರುವ ನಲಪಾಡ್ ಹೋಟೆಲ್‍ನಲ್ಲಿ ಎರಡು ದಿನಗಳ ರಾಜ್ಯ ಪ್ರತಿನಿಧಿ ಸಭೆ ನಡೆಯಲಿದೆ. ಇದರಲ್ಲಿ ಎಲ್ಲಾ ಜಿಲ್ಲೆಗಳ ಜಿಲ್ಲಾ ಕಾರ್ಯಕಾರಣಿ ಸಮಿತಿ ಸದಸ್ಯರು ಪಾಲ್ಗೊಳ್ಳಲಿದ್ದು, ಇವರಿಂದ 2018-21ರ ಸಾಲಿಗೆ 21 ಮಂದಿ ರಾಜ್ಯ ಕಾರ್ಯಕಾರಣಿ ಸಮಿತಿ ಸದಸ್ಯರ ಆಯ್ಕೆ ಪ್ರಕ್ರಿಯೆ ನಡೆಯಲಿದೆ. ಜು.1ರಂದು ಬೆಳಿಗ್ಗೆ 10.30ಕ್ಕೆ ಪಕ್ಷದ ರಾಷ್ಟ್ರೀಯ ಉಪಾಧ್ಯಕ್ಷ ಶರಫುದ್ದೀನ್ ಲಕ್ನೋ ಸಭೆಯ ಉದ್ಘಾಟನೆ ನೆರವೇರಿಸಲಿದ್ದಾರೆ. ರಾಷ್ಟ್ರೀಯ ಸಮಿತಿ ಸದಸ್ಯ ಅಶ್ರಫ್ ಚುನಾವಣಾಧಿಕಾರಿಯಾಗಿ ಕಾರ್ಯನಿರ್ವಹಿಸಲಿದ್ದಾರೆ. ಜು.2ರಂದು ಬೆಳಿಗ್ಗೆ ರಾಷ್ಟ್ರೀಯ ಅಧ್ಯಕ್ಷ ಎ.ಸಯೀದ್ ರಾಜ್ಯ ಪ್ರತಿನಿಧಿ ಸಭೆಯನ್ನು ಉದ್ದೇಶಿಸಿ ಮಾತನಾಡಲಿದ್ದಾರೆ ಎಂದು ವಿವರಿಸಿದರು.

ಜು.2ರ ಸಂಜೆ 7ಕ್ಕೆ ಉದಯಗಿರಿ ಮುಖ್ಯರಸ್ತೆಯ ಸಫಾ ಪಂಕ್ಷನ್ ಹಾಲ್‍ನಲ್ಲಿ ಆಯ್ಕೆಯಾದ ರಾಜ್ಯ ಪದಾಧಿಕಾರಿಗಳಿಗೆ ಹಾಗೂ ಕಾರ್ಯಕಾರಣಿ ಸಮಿತಿ ಸದಸ್ಯರಿಗೆ ಅಭಿನಂದನಾ ಸಮಾರಂಭ ಹಮ್ಮಿಕೊಳ್ಳಲಾಗಿದೆ. ಜೊತೆಗೆ ಪಕ್ಷವು 10ನೇ ವರ್ಷಕ್ಕೆ ಕಾಲಿಟ್ಟಿದ್ದು, ಇದರ ಅಂಗವಾಗಿ ವರ್ಷಪೂರ್ತಿ ಕಾರ್ಯಕ್ರಮ ರೂಪಿಸಲಾಗುತ್ತಿದೆ ಎಂದರು.

ಪಾಲಿಕೆ ವಾರ್ಡ್ ಮೀಸಲು ಅವೈಜ್ಞಾನಿಕ: ಮಾಧ್ಯಮದವರ ಪ್ರಶ್ನೆಗಳಿಗೆ ಪ್ರತಿಕ್ರಿಯೆ ನೀಡಿದ ಅಬ್ದುಲ್ ಮಜೀದ್, ಪಾಲಿಕೆಯ ವಾರ್ಡ್ ಪುನರ್‍ವಿಂಗಡಣೆ ಪ್ರಕ್ರಿಯೆಯಲ್ಲಿ ನಿರ್ದಿಷ್ಟ ಜನಸಂಖ್ಯೆಗೆ ಅನುಗುಣವಾಗಿ ವಾರ್ಡ್‍ಗಳ ವಿಂಗಡಣೆ ಮಾಡಿರುವುದು ಸೂಕ್ತವಾಗಿದೆ. ಆದರೆ ವಾರ್ಡ್‍ಗಳ ಮೀಸಲಾತಿ ಅವೈಜ್ಞಾನಿಕವಾಗಿದ್ದು, ಸದ್ಯ ಇದಿನ್ನೂ ಅಂತಿಮವಾಗಿಲ್ಲ. ಮೀಸಲು ಪಟ್ಟಿ ಅಂತಿಮಗೊಂಡ ಬಳಿಕ ಪಕ್ಷವು ಪಾಲಿಕೆ ಚುನಾವಣೆಯ ಪ್ರಕ್ರಿಯೆಯ ರೂಪುರೇಷೆ ಸಿದ್ಧಪಡಿಸಲಿದೆ ಎಂದು ತಿಳಿಸಿದರು. ಪಾಲಿಕೆ ಸದಸ್ಯ ಎಸ್.ಸ್ವಾಮಿ, ಎಸ್‍ಡಿಪಿಐ ರಾಜ್ಯ ಉಪಾಧ್ಯಕ್ಷ ದೇವನೂರು ಪುಟ್ಟನಂಜಯ್ಯ, ನಗರಾಧ್ಯಕ್ಷ ಆಝಾಂಪಾಷ ಗೋಷ್ಠಿಯಲ್ಲಿದ್ದರು.

Translate »