ಸಿಎಂ ನಾಟಿಯ ಕೃಷಿ ಪ್ರದೇಶ ಪರಿಶೀಲಿಸಿದ ಸಚಿವರು ಅಗತ್ಯ ಸಿದ್ಧತೆಗೆ ಅಧಿಕಾರಿಗಳಿಗೆ ಸೂಚನೆ
ಮಂಡ್ಯ

ಸಿಎಂ ನಾಟಿಯ ಕೃಷಿ ಪ್ರದೇಶ ಪರಿಶೀಲಿಸಿದ ಸಚಿವರು ಅಗತ್ಯ ಸಿದ್ಧತೆಗೆ ಅಧಿಕಾರಿಗಳಿಗೆ ಸೂಚನೆ

August 8, 2018

ಪಾಂಡವಪುರ:  ಭತ್ತದ ನಾಟಿ ಹಾಕುವ ಕಾರ್ಯಕ್ಕೆ ಚಾಲನೆ ನೀಡಲು ಆ.11ರಂದು ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಸಿ.ಎಸ್.ಪುಟ್ಟರಾಜು ತಾಲೂಕಿನ ಸೀತಾಪುರ ಗ್ರಾಮದ ಹೊರವಲಯದ ಜಮೀನಿಗೆ ತೆರಳಿ ಪರಿಶೀಲಿಸಿದರು.

ಮಂಗಳವಾರ ಮಧ್ಯಾಹ್ನ ಜಿಲ್ಲಾಧಿಕಾರಿ ಮಂಜುಶ್ರೀ, ಎಸಿ ಆರ್.ಯಶೋಧ, ತಹಶೀಲ್ದಾರ್ ಡಿ.ಹನುಮಂತ ರಾಯಪ್ಪ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳೊಂದಿಗೆ ಸಚಿವರು ಭೇಟಿ ನೀಡಿ ಪರಿಶೀಲಿಸಿದರು. ನಂತರ ಮಾತನಾಡಿದ ಸಚಿವ ಪುಟ್ಟರಾಜು, ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಈ ಹಿಂದೆ ನಾಗಮಂಗಲಕ್ಕೆ ಭೇಟಿ ನೀಡಿದ ಸಂದರ್ಭ ರೈತರೊಂದಿಗೆ ಭತ್ತ ನಾಟಿ ಮಾಡುವ ಇಚ್ಛೆ ವ್ಯಕ್ತಪಡಿಸಿದ್ದರು. ಅದರಂತೆ ಆ.11 ರಂದು ಸೀತಾಪುರ ಗ್ರಾಮದ ಹೊರವಲಯದ ಮಹದೇವಮ್ಮ ಅವರ 5 ಎಕರೆ ಜಮೀನಿನಲ್ಲಿ ಭತ್ತದ ನಾಟಿ ಹಾಕುವ ಮೂಲಕ ನಾಟಿಗೆ ಚಾಲನೆ ನೀಡಲಿದ್ದಾರೆ. ಭತ್ತ ನಾಟಿ ಹಾಕುವ ಕಾರ್ಯದಲ್ಲಿ ಸುಮಾರು 100 ಮಹಿಳೆಯರು, 50 ಪುರುಷರು ಹಾಗೂ 25 ಜೋಡಿ ಎತ್ತುಗಳು ಭಾಗವಹಿಸಲಿವೆ. ಎತ್ತುಗಳು ಉಳುಮೆ ಮಾಡಿ ಗದ್ದೆಯನ್ನು ಸಿದ್ದಪಡಿಸುತ್ತಿದ್ದಂತೆಯೇ ಹಿಂದೆ ಗಂಡಾಳುಗಳು ಭತ್ತದ ಪೈರುಗಳನ್ನು ಹಾಕಲಿದ್ದಾರೆ. ಬಳಿಕ ಹೆಣ್ಣಾಳು ನಾಟಿ ಆರಂಭಿಸಲಿದ್ದಾರೆ. 5 ಎಕರೆ ಪ್ರದೇಶದ ನಾಟಿ ಸಂಪೂರ್ಣವಾಗಿ ಮುಕ್ತಾಯವಾಗುವವರೆಗೂ ಸಿಎಂ ಕುಮಾರಸ್ವಾಮಿ ಅವರು ಸ್ಥಳದಲ್ಲಿಯೇ ಇರಲಿದ್ದಾರೆ ಎಂದರು.

ಮುಖ್ಯಮಂತ್ರಿಗಳು ಆಗಮಿಸುವ ದಿನ ಅಧಿಕಾರಿಗಳು ಸಿಡಿಎಸ್ ನಾಲೆ ಸುತ್ತಲು ಬೆಳೆದಿರುವ ಗಿಡಗಳನ್ನು ತೆಗೆದು, ಸ್ವಚ್ಛಗೊಳಿಸಬೇಕು. ಸಿಡಿಎಸ್ ನಾಲೆ ಕಡೆಗೆ ತಡೆಗೋಡೆ ನಿರ್ಮಿಸಬೇಕು. ಗದ್ದೆಯ ಮಧ್ಯಭಾಗದಲ್ಲಿ ಸಿಎಂ ಕುಮಾರಸ್ವಾಮಿ ಸೇರಿದಂತೆ ಮೂವರು ಮಾತ್ರ ನಿಲ್ಲುವ ಪುಟ್ಟ ವೇದಿಕೆ ನಿರ್ಮಿಸಬೇಕು. ಭತ್ತದ ನಾಟಿ ಕಾರ್ಯಕ್ಕೆ ಚಾಲನೆ ನೀಡಿದ ಬಳಿಕ ಸಿಎಂ ಕುಮಾರಸ್ವಾಮಿ ಅವರು ಆ ವೇದಿಕೆಯಲ್ಲೇ ಭಾಷಣ ಮಾಡಲಿದ್ದಾರೆ. ಅದನ್ನು ವೀಕ್ಷಿಸಲು ಸಿಡಿಎಸ್ ನಾಲೆ ಏರಿ ಸಮೀಪ ಎರಡು ಎಲ್‍ಇಡಿ ಸ್ಕ್ರೀನ್‍ಗಳ ವ್ಯವಸ್ಥೆ ಮಾಡಲಾಗುವುದು. ಭತ್ತದ ನಾಟಿ ವೀಕ್ಷಣೆ ಮಾಡುವುದ ಕ್ಕಾಗಿ ಆಗಮಿಸುವ ಸಾರ್ವಜನಿಕರಿಗೆ ಸಿಡಿಎಸ್ ನಾಲೆ ಏರಿ ಮೇಲೆ ಸೂಕ್ತ ವ್ಯವಸ್ಥೆ ಮಾಡಬೇಕು. ಹೀಗಾಗಿ ಅಧಿಕಾರಿ ಗಳು ಅಗತ್ಯ ಸಿದ್ಧತೆ ಕೈಗೊಳ್ಳುವಂತೆ ಸೂಚಿಸಿದರು.

ಈ ವೇಳೆ ಜಿಪಂ ಸದಸ್ಯರಾದ ಸಿ.ಅಶೋಕ್, ತಿಮ್ಮೇಗೌಡ, ಎಸಿ ಆರ್.ಯಶೋಧ, ಕೃಷಿ ಇಲಾಖೆ ಜಂಟಿ ಉಪನಿರ್ದೇ ಶಕಿ ರಾಜಾ ಸುಲೋಚನ, ಕಾವೇರಿ ನೀರಾವರಿ ನಿಗಮ ಇಇ ಬಸವರಾಜೇಗೌಡ, ಕೃಷಿ ಅಧಿಕಾರಿ ಜಗದೀಶ್, ತಾಪಂ ಸದಸ್ಯ ಗೋಪಾಲೇಗೌಡ, ಅಲ್ಪಳ್ಳಿಗೋವಿಂದಯ್ಯ, ಸೇರಿದಂತೆ ಹಲವರಿದ್ದರು.

Translate »