ಕೆ.ಆರ್.ಪೇಟೆ: ಮುಖ್ಯಮಂತ್ರಿ ಕುಮಾರಸ್ವಾಮಿ ರೈತರ 48 ಸಾವಿರ ಕೋಟಿ ರೂ. ಸಾಲಮನ್ನಾ ಮಾಡಿದ್ದಾರೆ. ಮುಂದೆ ಹಂತ ಹಂತವಾಗಿ ರೈತರ ಎಲ್ಲಾ ಬಗೆಯ ಸಾಲಮನ್ನಾ ಮಾಡಲಿದ್ದಾರೆ ಎಂದು ಶಾಸಕ ಡಾ.ಕೆ.ಸಿ.ನಾರಾಯಣಗೌಡ ತಿಳಿಸಿದರು.
ತಾಲೂಕು ಆಡಳಿತದ ವತಿಯಿಂದ ತಾಲೂಕಿನ ಬೂಕನಕೆರೆ ಹೋಬಳಿಯ ಮೋದೂರು, ಬೊಮ್ಮೇಗೌಡನಕೊಪ್ಪಲು, ಕೀಳನಕೊಪ್ಪಲು, ರಂಗನಾಥಪುರ, ಬೂಕನ ಕೆರೆ, ಹೊಸೂರು, ಬಣ್ಣನಕೆರೆ, ಐಚನಹಳ್ಳಿ ಗ್ರಾಮಗಳಲ್ಲಿ ಆಯೋಜಿಸಿದ್ದ ಜನಸ್ಪಂದನಾ ಸಭೆಗಳಲ್ಲಿ ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿ, ಫಲಾನುಭವಿಗಳಿಗೆ ಸ್ಥಳದಲ್ಲೇ ಸವಲತ್ತುಗಳನ್ನು ವಿತರಿಸಿ ಅವರು ಮಾತನಾಡಿದರು. ಅಧಿಕಾರಿಗಳು ತಮ್ಮ ಇಲಾಖೆಯ ಸೌಲಭ್ಯಗಳನ್ನು ಅರ್ಹ ಫಲಾನು ಭವಿಗಳಿಗೆ ತಲುಪಿಸಲು ಪ್ರಾಮಾಣಿಕವಾಗಿ ಪ್ರಯತ್ನಿಸಬೇಕು. ಪಕ್ಷಬೇಧ, ಲಂಚ ಪಡೆಯದೇ ಬಡವರಿಗೆ ಆಶ್ರಯ ಮನೆಗಳನ್ನು ನೀಡಲು ಪಿಡಿಓಗಳು ಮುಂದಾಗಬೇಕು. ಗ್ರಾಪಂ ಸದಸ್ಯರ ಸಹಕಾರದಿಂದ ತಮ್ಮ ಗ್ರಾಮಗಳ ಅಭಿವೃದ್ಧಿಗೆ ನರೇಗಾ ಯೋಜನೆ ಸದ್ಬಳಕೆ ಮಾಡಿಕೊಂಡು ಗ್ರಾಮ ಗಳಲ್ಲಿ ಚರಂಡಿ, ರಸ್ತೆಗಳ ನಿರ್ಮಾಣ, ಅಂತರ್ಜಲ ವೃದ್ಧಿಗೆ ಚೆಕ್ ಡ್ಯಾಂಗಳ ನಿರ್ಮಾಣ, ಜಾನುವಾರುಗಳಿಗೆ ನೀರಿನ ತೊಟ್ಟಿಗಳನ್ನು ನಿರ್ಮಿಸಿ ಕೊಡಲು ಪಿಡಿಓಗಳು ಮುಂದಾಗಬೇಕು.
ನಮ್ಮ ಶಾಸಕರ ಅನುದಾನದಿಂದ ಉನ್ನತ ಮಟ್ಟದ ನೀರಿನ ಯೋಜನೆ, ಡಾಂಬರು ರಸ್ತೆಗಳು, ಸಿಮೆಂಟ್ ರಸ್ತೆಗಳ ನಿರ್ಮಾಣ, ಸೇತುವೆಗಳ ನಿರ್ಮಾಣ, ವಿದ್ಯುತ್ ಅಭಿವೃದ್ಧಿ ಕಾಮಗಾರಿ ಹೀಗೆ ಹತ್ತು ಹಲವು ಕೆಲಸಗಳನ್ನು ತಾಲೂಕಿನ ಎಲ್ಲಾ ಗ್ರಾಮ ಗಳಲ್ಲಿ ಹಂತ ಹಂತವಾಗಿ ಮಾಡಿಕೊಡಲು ಶ್ರಮಿಸುತ್ತೇನೆ. ಜೊತೆಗೆ ನಮ್ಮವರೇ ಜಿಪಂ, ತಾಪಂ ಸದಸ್ಯರಾಗಿದ್ದು, ಅಭಿವೃದ್ಧಿ ಕಾಮ ಗಾರಿಗಳಿಗೆ ಎಲ್ಲರ ಅನುದಾನ ನೀಡಲಾಗು ವುದು. ಇದನ್ನು ಗ್ರಾಮಸ್ಥರು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಶಾಸಕರು ಮನವಿ ಮಾಡಿದರು.
ಸಭೆಯಲ್ಲಿ ಸ್ಮಶಾನ ನಿರ್ಮಾಣ, ಅಂಗನವಾಡಿ ಕೇಂದ್ರಕ್ಕೆ ನಿವೇಶನ, ಜಮೀನಿಗೆ ಹೋಗಲು ರಸ್ತೆ ಅಭಿವೃದ್ಧಿ, ಶಾಲೆಗಳಿಗೆ ಹಾಗೂ ದೇವಾಲಯ ಅಭಿವೃದ್ಧಿಗೆ ಅನು ದಾನ, ಆಶ್ರಯ ಮನೆ, ಹೇಮಾವತಿ ನಾಲೆ ದುರಸ್ತಿ, ಹೊಸಹೊಳಲು ಮೇಲ್ಗಾಲುವೆ ಕಾಮಗಾರಿಯನ್ನು ಬೇಗ ಪೂರ್ಣ ಗೊಳಿಸಿ ಕೊಡಿ, 1000 ಅಡಿ ಕೊರೆದರೂ ನೀರು ಬರುತ್ತಿಲ್ಲ. ಹಾಗಾಗಿ ಅಂತರ್ಜಲ ವೃದ್ಧಿಗೆ ಕ್ರಮ ವಹಿಸಿ, ವೃದ್ಧಾಪ್ಯ ವೇತನ ಮಾಡಿಸಿಕೊಡಿ, ವಿದ್ಯುತ್ ಕಂಬಗಳು ಶಿಥಿಲ ಗೊಂಡಿವೆ ಬದಲಾಯಿಸಿ ಕೊಡಿ ಹೀಗೆ ಹತ್ತು ಹಲವು ಮನವಿಗಳ ಮಹಾಪೂರವೇ ಗ್ರಾಮ ಗಳಲ್ಲಿ ಜನರಿಂದ ಹರಿದು ಬಂದಿತು.
ಈ ಸಂದರ್ಭ ಮೋದೂರಿನಲ್ಲಿ ಶುದ್ಧ ಕುಡಿಯುವ ನೀರಿನ ಘಟಕವನ್ನು ಶಾಸಕ ನಾರಾಯಣಗೌಡ ಉದ್ಘಾಟಿಸಿದರು. ಕಾರ್ಯ ಕ್ರಮದಲ್ಲಿ ಜಿಪಂ ಉಪಾಧ್ಯಕ್ಷೆ ಗಾಯತ್ರಿ, ಜಿಪಂ ಸದಸ್ಯ ಹೆಚ್.ಟಿ.ಮಂಜು, ತಾಪಂ ಸ್ಥಾಯಿ ಸಮಿತಿ ಅಧ್ಯಕ್ಷ ಎಂ.ಎನ್.ವಿಜಯ ಕುಮಾರ್, ತಾಪಂ ಉಪಾಧ್ಯಕ್ಷ ಜಾನಕೀರಾಂ, ಸದಸ್ಯ ರಾಜು, ಬೂಕನಕೆರೆ ಗ್ರಾಪಂ ಅಧ್ಯಕ್ಷೆ ಪುಟ್ಟಮ್ಮ, ರಾಜ್ಯ ಯುವ ಜೆಡಿಎಸ್ ಪ್ರಧಾನ ಕಾರ್ಯದರ್ಶಿ ಕೆ.ಬಿ.ನಾಗೇಶ್, ಬೂಕನಕೆರೆ ಹೋಬಳಿ ಜೆಡಿಎಸ್ ಅಧ್ಯಕ್ಷ ನಂದೀಶ್, ಪಿಎಲ್‍ಡಿ ಬ್ಯಾಂಕ್ ನಿರ್ದೇಶಕ ಧನಂಜಯ, ತಹಶೀಲ್ದಾರ್ ಶಿವಮೂರ್ತಿ, ತಾಪಂ ಇಓ ಚಂದ್ರಮೌಳಿ, ಮುಖಂಡ ರಾದ ಹೆಳವೇಗೌಡ, ಮಲ್ಲೇಶ್, ವೆಂಕಟೇಶ್, ನಾಗೇಶ್, ಸ್ವಾಮಣ್ಣ, ಗ್ರಾಪಂ ಸದಸ್ಯ ಪರ ಮೇಶ್, ಸೋಮಶೇಖರ್, ಶಿವಣ್ಣ, ಸಿಪಿಐ ಹೆಚ್.ಬಿ.ವೆಂಕಟೇಶಯ್ಯ, ಗ್ರಾಮಾಂತರ ಠಾಣೆ ಎಸ್‍ಐ ಕೆ.ಎನ್.ಗಿರೀಶ್ ಸೇರಿದಂತೆ ತಾಲೂಕು ಮಟ್ಟದ ಅಧಿಕಾರಿಗಳು ಸಭೆಯಲ್ಲಿದ್ದರು.