ಮೈಸೂರು, ಮಾ.6(ಆರ್‍ಕೆ)-ಹುಟ್ಟು ಹಬ್ಬದ ಸಂಭ್ರಮದಲ್ಲಿ ತನ್ನ ಬೆಂಬಲಿಗರು, ಅಭಿಮಾನಿಗಳು, ಹಿತೈಷಿಗಳಿಗೆ ಅದ್ಧೂರಿ ಪಾರ್ಟಿ ನೀಡಿ ಹಿಂದಿರುಗಿದ ಬಿಜೆಪಿ ಮುಖಂಡ ರೊಬ್ಬರನ್ನು ಜೊತೆಯಲ್ಲಿದ್ದವರೇ ಒಡೆದ ಬಿಯರ್ ಬಾಟಲಿಯಿಂದ ಮನಸೋ ಇಚ್ಛೆ ಇರಿದು ಬರ್ಬರವಾಗಿ ಇರಿದು ಕೊಲೆಗೈದಿ ದ್ದಾರೆ. ಈ ಆಘಾತಕಾರಿ ಘಟನೆ ಶುಕ್ರವಾರ ಮುಂಜಾನೆ ಮೈಸೂರಿನ ಕುವೆಂಪುನಗರದ ಲಲಿತಾದ್ರಿ ರಸ್ತೆಯ ಲವ-ಕುಶ ಪಾರ್ಕ್ ಬಳಿ ಯಲ್ಲಿರುವ ಸರ್ವೀಸ್ ಅಪಾರ್ಟ್‍ಮೆಂಟ್ ವೊಂದರಲ್ಲಿ ಸಂಭವಿಸಿದೆ.
ಮೈಸೂರಿನ ಜನತಾನಗರ ನಿವಾಸಿಯೂ ಆದ ಕೆ.ಆರ್.ಕ್ಷೇತ್ರದ ಬಿಜೆಪಿ ಸ್ಲಂ ಮೋರ್ಚಾ ಉಪಾಧ್ಯಕ್ಷ ಎಸ್.ಆನಂದ ಅಲಿಯಾಸ್ ವಡ್ಡಾ ಆನಂದ್(40) ಹತ್ಯೆಗೀಡಾದವರು. ಗುರುವಾರ 40ನೇ ಹುಟ್ಟುಹಬ್ಬ ಆಚರಿಸಿಕೊಂಡ ಆನಂದ್, ರಾತ್ರಿ ಮೈಸೂರಿನ ಚಾಮುಂಡಿ ಬೆಟ್ಟದ ತಪ್ಪಲಿನ ಉತ್ತನಹಳ್ಳಿಯ ಶ್ರೀ ತ್ರಿಪುರಸುಂದರಿ ಅಮ್ಮನವರ ಪೂಜಾ ಸಮಿತಿ ಸಭಾಂಗಣದಲ್ಲಿ ಅಭಿಮಾನಿಗಳು, ಸ್ನೇಹಿತರು ಹಾಗೂ ಹಿತೈಷಿಗಳಿಗಾಗಿ ಅದ್ಧೂರಿ ಪಾರ್ಟಿ ಏರ್ಪಡಿಸಿದ್ದರು. ರಾತ್ರಿ 7 ಗಂಟೆಯಿಂದ ಆರಂಭವಾದ ಪಾರ್ಟಿಯಲ್ಲಿ ಭಾರೀ ಗಾತ್ರದ ಎಂಹೆಚ್‍ಬಿ (ಮ್ಯಾನ್‍ಸನ್ ಹೌಸ್ ಬ್ರಾಂದಿ) ಬಾಟೆಲ್ ಮಾದರಿಯ ಕೇಕ್ ಅನ್ನು ಕತ್ತರಿಸಿ ಹುಟ್ಟು ಹಬ್ಬವನ್ನು ಸಂಭ್ರಮದಿಂದ ಆಚರಿಸಿಕೊಂಡಿದ್ದರು. ಆ ಪಾರ್ಟಿಗೆ ಬಿಜೆಪಿ ಹಲವು ಮುಖಂಡರು, ಸ್ನೇಹಿತರು, ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.
ಪಾರ್ಟಿಯಲ್ಲಿ ಸಸ್ಯಾಹಾರ ಮತ್ತು ಮಾಂಸಾಹಾರಿ ಖಾದ್ಯ, ತಂಪು ಪಾನೀಯ ಮತ್ತು ಮದ್ಯವನ್ನೂ ಒದಗಿಸಲಾಗಿತ್ತು. ಬಂದವರೆಲ್ಲರೂ ಕುಡಿದು, ಊಟ ಮಾಡಿ ರಾತ್ರಿ 11 ಗಂಟೆ ವೇಳೆಗೆ ಹಿಂದಿರುಗಿದರು. ಬರ್ತ್‍ಡೇ ಆಚರಣೆ ನಂತರ ಆನಂದ, ಸ್ನೇಹಿತರಾದ ಸುರೇಶ(ಡಿಂಕಿ ಪಲ್ಲಿ), ಮಂಜು(ಪತ್ತು), ಗಿರಿ(ಪೆಂಡಾಲ್), ಬಸವರಾಜು (ಮಂಡಿ), ಪರಮೇಶ, ಕೆಂಪ, ನಂಜಯ್ಯ, ಕೃಷ್ಣ, ಪಿಯಾ ಇತರರು ಪಾರ್ಟಿ ಮುಂದುವರಿ ಸಿದ್ದರು ಎಂದು ಪಾರ್ಟಿಯಲ್ಲಿ ಭಾಗವಹಿಸಿದ್ದ ಕೆಲವರು ಸುದ್ದಿಗಾರರಿಗೆ ತಿಳಿಸಿದ್ದಾರೆ.
ರಾತ್ರಿ ಸುಮಾರು 12.45 ಗಂಟೆ ವೇಳೆಗೆ ಪರಮೇಶ, ಕೆಂಪ, ನಂಜಯ್ಯ, ಕೃಷ್ಣ ಹಾಗೂ ಪಿಯಾ ಸಹ ಪಾರ್ಟಿ ಸ್ಥಳದಿಂದ ನಿರ್ಗಮಿಸಿದ್ದರು. ಉಳಿದಿದ್ದ ಆನಂದ, ಬಸವರಾಜು, ಗಿರಿ, ಮಂಜು, ಸುರೇಶ ಹಾಗೂ ಇತರರು ಮಾತ್ರ ಇದ್ದರು ಎಂದು ಕೆಲವರು ತಿಳಿಸಿದ್ದಾರೆ. ಮುಂಜಾನೆ ಸುಮಾರು 2 ಗಂಟೆ ವೇಳೆಗೆ ಪಾರ್ಟಿ ಮುಗಿಸಿದ ಅವರು, ಆನಂದ ಅವರ ಸಿಮೆಂಟ್ ಬಣ್ಣದ ಸ್ಯಾಂಟ್ರೋ ಕಾರಿನಲ್ಲಿ ಬುಕ್ ಮಾಡಿದ್ದ ಮೈಸೂರಿನ ಕುವೆಂಪುನಗರದ ಲಲಿತಾದ್ರಿ ರಸ್ತೆಯ 4ನೇ ಕ್ರಾಸ್, ಲವ-ಕುಶ ಪಾರ್ಕ್ ಬಳಿ ಇರುವ ಉನ್ನತಿ ಸೂಟ್ಸ್ (ಚಂದನ ಮ್ಯಾನ್‍ಸನ್) ಸರ್ವೀಸ್ ಅಪಾರ್ಟ್‍ಮೆಂಟಿನ ಎರಡನೇ ಮಹಡಿಯ ಪ್ಲಾಟ್‍ಗೆ ತೆರಳಿದರು ಎಂದು ಹೇಳಲಾಗಿದೆ. ಅಲ್ಲಿಯೂ ಮದ್ಯ ಸೇವನೆ ಮುಂದುವರಿಸಿದ್ದು, ಮುಂಜಾನೆ ಸುಮಾರು 3.30 ಗಂಟೆ ವೇಳೆಗೆ ಜೋರಾಗಿ ಮಾತನಾಡಿದ ಶಬ್ದ ಕೇಳಿಸುತ್ತಿತ್ತು. ಮುಂಜಾನೆ 4.30 ಗಂಟೆ ವೇಳೆಗೆ ಆಂಬುಲೆನ್ಸ್ ಬಂದಾಗಲೇ ಹತ್ಯೆ ನಡೆದಿರುವ ವಿಷಯ ತಿಳಿಯಿತು ಎಂದು ನೆರೆಹೊರೆಯವರು ತಿಳಿಸಿದ್ದಾರೆ.
ಅವರು ತಂಗಿದ್ದ ಅಪಾರ್ಟ್‍ಮೆಂಟ್ ಪ್ಲಾಟ್‍ನಲ್ಲಿ ರಕ್ತದ ಮಡುವಿನಲ್ಲಿ ಆನಂದ ಅವರ ಮೃತ ದೇಹ ಬಿದ್ದಿತ್ತು. ಅವರ ಹೊಟ್ಟೆ, ಭುಜ, ಬೆನ್ನಿನ ಭಾಗಕ್ಕೆ ಹೊಡೆದ ಬಿಯರ್ ಬಾಟಲಿಯಿಂದ ಮನಸ್ಸೋ ಇಚ್ಛೆ ಹಲವು ಬಾರಿ ಇರಿದು ಬರ್ಬರವಾಗಿ ಹತ್ಯೆ ಮಾಡ ಲಾಗಿತ್ತು. ವಿಷಯ ತಿಳಿದ ತಕ್ಷಣ ನಗರ ಪೊಲೀಸ್ ಆಯುಕ್ತ ಡಾ. ಚಂದ್ರಗುಪ್ತ, ಡಿಸಿಪಿ ಡಾ. ಎ.ಎನ್. ಪ್ರಕಾಶ್‍ಗೌಡ, ದೇವರಾಜ ಉಪ ವಿಭಾಗದ ಎಸಿಪಿ ಶಶಿಧರ, ಕುವೆಂಪು ನಗರ ಠಾಣೆ ಇನ್ಸ್‍ಪೆಕ್ಟರ್ ರಾಜು ಅವರು ಘಟನಾ ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದರು. ನಗರ ಬೆರಳಚ್ಚು ಮುದ್ರೆ ಘಟಕದ ಎಸಿಪಿ ರಾಜಶೇಖರ್, ಶ್ವಾನ ದಳದ ಸಿಬ್ಬಂದಿ ಘಟನಾ ಸ್ಥಳಕ್ಕೆ ತೆರಳಿ ಮಹಜರು ನಡೆಸಿದಾಗ ರಕ್ತ, ನೆಲದ ಟೈಲ್ಸ್ ಮತ್ತು ಗೋಡೆಗಳ ಮೇಲೆ ಮೆತ್ತಿದ್ದುದು ಕಂಡಿತು. ಸ್ಥಳದಲ್ಲಿ ಬಿಯರ್ ಬಾಟಲಿ, ಸಿಗರೇಟ್ ಪ್ಯಾಕ್‍ಗಳು ಬಿದ್ದಿದ್ದವು. ಒಡೆದ ಬಿಯರ್ ಬಾಟೆಲ್‍ನ ಚೂರುಗಳು ಚೆಲ್ಲಾಡಿ ಇಡೀ ಹಾಲ್‍ನಲ್ಲಿ ರಕ್ತದ ಓಕುಳಿಯೇ ಕಂಡು ಬಂದಿತು. ಪ್ರಕರಣ ದಾಖಲಿಸಿಕೊಂಡಿರುವ ಕುವೆಂಪುನಗರ ಠಾಣೆ ಇನ್ಸ್‍ಪೆಕ್ಟರ್ ರಾಜು, ಆನಂದ ಮೃತ ದೇಹವನ್ನು ಮೈಸೂರು ಮೆಡಿಕಲ್ ಕಾಲೇಜು ಮತ್ತು ಸಂಶೋಧನಾ ಸಂಸ್ಥೆ ಶವಾಗಾರದಲ್ಲಿ ಮರಣೋತ್ತರ ಪರೀಕ್ಷೆ ನಡೆಸಿದ ನಂತರ ಸಂಜೆ ವಾರಸುದಾರರಿಗೆ ಒಪ್ಪಿಸಿದರು.
‘ಟಗರು’ ಹಾಡಿಗೆ ಸ್ಟೆಪ್ ಹಾಕಿದ ಹಂತಕರು!
ಮೈಸೂರು,ಮಾ.6(ಆರ್‍ಕೆ)- ಆನಂದ್‍ನನ್ನು ಇರಿದು ಬರ್ಬರವಾಗಿ ಹತ್ಯೆಗೈದ ಹಂತಕರ ಪೈಕಿ ಓರ್ವ ‘ಟಗರು’ ಚಿತ್ರದ ಟೈಟಲ್ ಹಾಡಿಗೆ ಸ್ಟೆಪ್ ಹಾಕಿದನಂತೆ. ಮನಸೋ ಇಚ್ಛೆ ಕುಡಿದ ಬಿಯರ್ ಬಾಟಲಿಯಿಂದ 11 ಬಾರಿ ಇರಿದು ಬರ್ಬರ ವಾಗಿ ಹತ್ಯೆ ಮಾಡಿ, ರಕ್ತಸಿಕ್ತವಾಗಿ ಬಿದ್ದಿದ್ದ ಆನಂದ್ ಮೃತದೇಹದ ಬಳಿ ಮತ್ತಷ್ಟು ಬಿಯರ್ ಕುಡಿದು ‘ಟಗರು ಬಂತು ಟಗರು… ಈ ಊರ ಟಗರು… ಜೋರಾಗಿ ಇದರ ಹೆಸರು… ಅದೇ ಇದರ ಪೊಗರು…’ ಹಾಡನ್ನು ಮೊಬೈಲ್‍ನಲ್ಲಿ ಹಾಕಿಕೊಂಡು ಡ್ಯಾನ್ಸ್ ಮಾಡಿ ವಿಕೃತಿ ಮೆರೆದಿದ್ದಾನೆ. ಸುಮಾರು 5 ನಿಮಿಷ ಮೃತದೇಹದ ಬಳಿಯೇ ಇದ್ದು ಕುಡಿದು, ಕುಣಿದು ಕುಪ್ಪಳಿಸಿದ ಆತ, ಉಳಿದವರನ್ನೂ ಎಬ್ಬಿಸಿ ಕರೆದುಕೊಂಡು ಹೋದನಂತೆ. 6 ಮಂದಿ ಪೈಕಿ ನಾಲ್ವರು ಕಂಠಪೂರ್ತಿ ಕುಡಿದು ಅಷ್ಟರಲ್ಲೇ ಮಲಗಿದ್ದ ರಂತೆ. ಹತ್ಯೆ ನಂತರ ಎಚ್ಚರವಾಗಿ ಸ್ಥಳದಿಂದ ಕಾಲ್ಕಿತ್ತರು ಎಂದು ತಿಳಿದು ಬಂದಿದೆ.