ಶ್ರೀರಂಗಪಟ್ಟಣ, ಮಾ.7(ವಿನಯ್ ಕಾರೇಕುರ)-ಭತ್ತ ಖರೀದಿ ಮಾಡಿದ ದಲ್ಲಾಳಿ ಹಣ ನೀಡದೆ ವಂಚಿಸಿದ್ದರಿಂದ ಮನನೊಂದ ಮತ್ತೋರ್ವ ಭತ್ತದ ದಲ್ಲಾಳಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ತಾಲೂಕಿನ ಚೆನ್ನಳ್ಳಿ ಗ್ರಾಮದಲ್ಲಿ ನಡೆದಿದೆ.
ಈ ಗ್ರಾಮದ ಭತ್ತದ ದಲ್ಲಾಳಿ ದೇವರಾಜು(40) ಆತ್ಮಹತ್ಯೆಗೆ ಶರಣಾಗಿದ್ದು, ಇವರು ರೈತರಿಂದ ಖರೀದಿಸಿ ನೀಡಿದ್ದ ಭತ್ತದ ಹಣವನ್ನು ಕೊಡದೆ ವಂಚಿಸುವ ಮೂಲಕ ಇವರ ಆತ್ಮಹತ್ಯೆಗೆ ಕಾರಣರಾಗಿದ್ದಾರೆ ಎಂದು ಅರಕೆರೆ ಗ್ರಾಮದ ಗಿರೀಶ್ ಎಂಬ ಮತ್ತೋರ್ವ ದಲ್ಲಾಳಿ ವಿರುದ್ಧ ಪ್ರಕರಣ ದಾಖಲಾಗಿದೆ.
ವಿವರ: ಭತ್ತದ ದಲ್ಲಾಳಿಯಾಗಿರುವ ದೇವರಾಜು, ಹಲವಾರು ರೈತರಿಂದ ಭತ್ತವನ್ನು ಪಡೆದು ಅದನ್ನು ಗಿರೀಶ್ ಅವರಿಗೆ ನೀಡಿದ್ದರು ಎಂದು ಹೇಳಲಾಗಿದೆ. ಆದರೆ ತಾನು ಪಡೆದ ಭತ್ತದ ಹಣವನ್ನು ಕೊಡದೆ ದೇವರಾಜುವಿಗೆ ಗಿರೀಶ್ ಸತಾಯಿಸುತ್ತಿದ್ದರು ಎನ್ನಲಾಗಿದ್ದು, ದೇವರಾಜ್‍ಗೆ ಭತ್ತ ನೀಡಿದ್ದ ರೈತರು ಹಣಕ್ಕಾಗಿ ಅವರ ಬೆನ್ನತ್ತಿದ್ದರು. ಆದರೆ ಗಿರೀಶ್ ಹಣ ನೀಡದ ಕಾರಣ ದೇವರಾಜು ರೈತರಿಗೆ ಹಣ ಪಾವತಿಸಲು ನಿಸ್ಸಹಾಯಕರಾಗಿದ್ದರು ಎಂದು ಹೇಳಲಾಗಿದೆ.
ಇಂದು ಬೆಳಿಗ್ಗೆ ಗಿರೀಶ್ ಬಳಿ ಭತ್ತದ ಹಣ ತರುವುದಾಗಿ ಮನೆಯಲ್ಲಿ ಹೇಳಿ ಅರಕೆರೆಗೆ ದೇವರಾಜ್ ತೆರಳಿದ್ದಾರೆ. ತನ್ನ ಸಂಕಷ್ಟವನ್ನೆಲ್ಲಾ ಹೇಳಿಕೊಂಡು ಹಣ ಕೇಳಿದಾಗಲೂ ಗಿರೀಶ್ ಹಣ ನೀಡದಿದ್ದಾಗ ಮನ ನೊಂದ ದೇವರಾಜ್ ಚೆನ್ನಳ್ಳಿಯ ತನ್ನ ಮನೆಯ ಬಳಿ ಇರುವ ಶೆಡ್‍ನಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿ ದ್ದಾರೆ. ಮೃತ ದೇವರಾಜ್ ಮನೆಯವರು ನೀಡಿದ ದೂರಿನ ಮೇರೆಗೆ ಗಿರೀಶ್ ವಿರುದ್ಧ ಪ್ರಕರಣ ದಾಖಲಿಸಿಕೊಂಡಿರುವ ಅರಕೆರೆ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.