ಮೈಸೂರು ದಸರಾ ಉತ್ಸವಕ್ಕೆ ಇನ್ನು ಕೇವಲ 8 ದಿನ ಬಾಕಿಆರಂಭವಾಗಿದೆ ವಿಶೇಷ ಸ್ವಚ್ಛತಾ ಅಭಿಯಾನ
ಮೈಸೂರು

ಮೈಸೂರು ದಸರಾ ಉತ್ಸವಕ್ಕೆ ಇನ್ನು ಕೇವಲ 8 ದಿನ ಬಾಕಿಆರಂಭವಾಗಿದೆ ವಿಶೇಷ ಸ್ವಚ್ಛತಾ ಅಭಿಯಾನ

September 21, 2019

ಮೈಸೂರು, ಸೆ.20(ಎಂಟಿವೈ)- ನಾಡಹಬ್ಬ ದಸರಾ ಮಹೋತ್ಸವದ ಹಿನ್ನೆಲೆಯಲ್ಲಿ ಸಾಂಸ್ಕøತಿಕ ನಗರಿ ಮೈಸೂರಿನಲ್ಲಿ ಸ್ವಚ್ಛತಾ ವಿಶೇಷ ಅಭಿಯಾನ ಆರಂಭಿಸಿರುವ ನಗರ ಪಾಲಿಕೆ, ಗುತ್ತಿಗೆದಾರರ ಸಹಕಾರ ಪಡೆದು ನೂರಾರು ವಾಹನಗಳೊಂದಿಗೆ ಸೆ.25ವರೆಗೆ ಎಲ್ಲಾ ವಲಯ ಗಳಲ್ಲೂ ಸ್ವಚ್ಛತಾ ಕಾರ್ಯ ನಡೆಸಲಿದೆ.

ಪ್ರತಿ ವರ್ಷದಂತೆ ದಸರಾ ಮಹೋತ್ಸವದ ಹಿನ್ನೆಲೆಯಲ್ಲಿ ನಗರ ಪಾಲಿಕೆ, ಮುಡಾ, ನೀರಾವರಿ, ಒಳಚರಂಡಿ, ಲೋಕೋಪಯೋಗಿ ಸೇರಿದಂತೆ ವಿವಿಧ ಇಲಾಖೆ ಗಳ ಗುತ್ತಿಗೆದಾರರ ಸಂಘ ಈ ಬಾರಿಯೂ ತಮ್ಮಲ್ಲಿರುವ 33 ಜೆಸಿಬಿ, 34 ಟ್ರಾಕ್ಟರ್, 2 ಹಿಟಾಚಿ, 5 ಡೋಜóರ್, 27 ಟಿಪ್ಪರ್, 108 ಕೂಲಿ ಕಾರ್ಮಿಕರನ್ನು ಪಾಲಿಕೆ ಆರಂಭಿಸಿರುವ ವಿಶೇಷ ಸ್ವಚ್ಛತಾ ಅಭಿಯಾನಕ್ಕೆ ನೀಡಿದೆ. ಶುಕ್ರವಾರ ಬೆಳಿಗ್ಗೆ ಮೈಸೂರಿನ ದೊಡ್ಡಕೆರೆ ಮೈದಾನದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ವಿಶೇಷ ಅಭಿಯಾನಕ್ಕೆ ಹಸಿರು ನಿಶಾನೆ ಪ್ರದರ್ಶಿಸುವ ಮೂಲಕ ಚಾಲನೆ ನೀಡಿದರು. ಬಳಿಕ ಸಚಿವ ವಿ.ಸೋಮಣ್ಣ ಮಾತನಾಡಿ, ದಸರಾ ಮಹೋತ್ಸವ ಸಮೀಪಿಸುತ್ತಿದೆ.

ತನ್ನದೇ ಅದೇ ಪರಂಪರೆ ಇರುವ ನಾಡಹಬ್ಬದ ಯಶಸ್ಸಿಗೆ ಎಲ್ಲರೂ ಕೈಜೋಡಿಸ ಬೇಕು. ನವರಾತ್ರಿ ಹಿನ್ನೆಲೆಯಲ್ಲಿ ಮೈಸೂರಿನಲ್ಲಿ ನಡೆಯುವ ಕಾರ್ಯಕ್ರಮದ ಸೊಬಗನ್ನು ಕಣ್ತುಂಬಿಕೊಳ್ಳಲು ದೇಶ-ವಿದೇಶದಿಂದಲೂ ಪ್ರವಾಸಿಗರು ಮೈಸೂರಿಗೆ ಆಗಮಿಸುತ್ತಾರೆ. ನಗರಕ್ಕೆ ಬರುವ ಪ್ರವಾಸಿಗರನ್ನು ಕಸ ಸ್ವಾಗತಿಸದಂತೆ ನೋಡಿಕೊಳ್ಳುವ ನಿಟ್ಟಿನಲ್ಲಿ ಇಂದಿನಿಂದ ಐದು ದಿನಗಳ ವಿಶೇಷ ಸ್ವಚ್ಛತಾ ಅಭಿಯಾನ ಹಮ್ಮಿಕೊಳ್ಳಲಾಗಿದೆ. ಗುತ್ತಿಗೆದಾರರ ಸಂಘ ಪಾಲಿಕೆಗೆ ಸಹಕಾರ ನೀಡಿ, ತಮ್ಮಲ್ಲಿರುವ ವಾಹನಗಳನ್ನು ಕಳಿಸಿಕೊಟ್ಟಿದ್ದಾರೆ. ನಗರದ ಸ್ವಚ್ಛತೆ ಕಾಪಾಡುವುದು ಪ್ರತಿಯೊಬ್ಬರ ಕರ್ತವ್ಯವೂ ಆಗಿದೆ. ನಮ್ಮ ಸುತ್ತಲಿನ ಪರಿಸರವನ್ನು ಪ್ರೀತಿಸುವ ಮನೋಭಾವ ಬೆಳೆಸಿಕೊಂಡಾಗ ಸ್ವಚ್ಛತೆ ಕಾಪಾಡಬಹುದಾಗಿದೆ. 65 ವಾರ್ಡುಗಳಲ್ಲಿ ಸಮರೋಪಾದಿಯಲ್ಲಿ ಸ್ವಚ್ಛತಾ ಕಾರ್ಯ ಕೈಗೊಳ್ಳಲಾಗುವುದು. ಇದರೊಂದಿಗೆ ನಾಗರಿಕರಲ್ಲಿ ಸ್ವಚ್ಛತೆಯ ಬಗ್ಗೆ ಅರಿವನ್ನೂ ಮೂಡಿಸುವ ಗುರಿ ಹೊಂದಲಾಗಿದೆ ಎಂದರು.

ಪಾಲಿಕೆ ಆಯುಕ್ತ ಗುರುದತ್ತ ಹೆಗಡೆ ಮಾತನಾಡಿ, ಗುತ್ತಿಗೆದಾರರ ಸಂಘದ ವತಿಯಿಂದ ನೀಡಲಾಗಿರುವ ನೂರಾರು ವಾಹನಗಳನ್ನು 9 ವಲಯಗಳಿಗೂ ಹಂಚಿಕೆ ಮಾಡಿ, ಸ್ವಚ್ಛತಾ ಕಾರ್ಯ ಆರಂಭಿಸಲಾಗಿದೆ. ಎಲ್ಲಾ ರಸ್ತೆ ಬದಿಯಲ್ಲಿರುವ ಕಟ್ಟಡಗಳ ತ್ಯಾಜ್ಯ, ಚರಂಡಿಯಲ್ಲಿ ತುಂಬಿರುವ ಹೂಳು, ರಸ್ತೆ ಬದಿಯಲ್ಲಿ ಬೆಳೆದಿರುವ ಗಿಡ-ಗಂಟಿ, ರಿಂಗ್‍ರಸ್ತೆ ಬದಿಯಲ್ಲಿ ಸುರಿದಿರುವ ತ್ಯಾಜ್ಯವನ್ನು ಸ್ವಚ್ಛತೆ ಮಾಡಲಾಗುತ್ತದೆ. ಈ ವಿಶೇಷ ಅಭಿಯಾನದಲ್ಲಿ ಸಂಗ್ರಹವಾಗುವ ತ್ಯಾಜ್ಯವನ್ನು ಕೆಸರೆ ಬಳಿ ಗುರುತಿಸಲ್ಪಟ್ಟಿರುವ 8 ಎಕರೆ ಜಾಗದಲ್ಲಿ ಸುರಿಯುತ್ತೇವೆ. ದಸರಾ ಮುಗಿದ ನಂತರ ವೈಜ್ಞಾನಿಕವಾಗಿ ವಿಲೇವಾರಿ ಮಾಡಲಾಗುತ್ತದೆ. ಇದರೊಂದಿಗೆ ಪಾಲಿಕೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಪೌರಕಾರ್ಮಿಕರೊಂದಿಗೆ ಹೆಚ್ಚುವರಿಯಾಗಿ 380 ಪೌರಕಾರ್ಮಿಕರನ್ನು ಸ್ವಚ್ಛತೆಗೆ ಬಳಸಿಕೊಳ್ಳುತ್ತಿದ್ದೇವೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಶಾಸಕ ಎಲ್. ನಾಗೇಂದ್ರ, ಮೇಯರ್ ಪುಷ್ಪಲತಾ ಜಗನ್ನಾಥ್, ಮಾಜಿ ಮೇಯರ್ ಸಂದೇಶ್ ಸ್ವಾಮಿ, ಪಾಲಿಕೆ ಸದಸ್ಯ ಗೋಪಿ,ಮಾ.ವಿ. ರಾಮಪ್ರಸಾದ್, ಮಂಜುನಾಥ್ ಹಾಗೂ ಇನ್ನಿತರರು ಉಪಸ್ಥಿತರಿದ್ದರು.

Translate »