ಭಾರವಾದ ಮನಸ್ಸಿಂದಲೇ ಮನೆಗೆ ಮರಳಿದ ‘ವರಲಕ್ಷ್ಮಿ’
ಮೈಸೂರು

ಭಾರವಾದ ಮನಸ್ಸಿಂದಲೇ ಮನೆಗೆ ಮರಳಿದ ‘ವರಲಕ್ಷ್ಮಿ’

September 21, 2019

ಮೈಸೂರು,ಸೆ.20(ಎಂಟಿವೈ)- ದಸರಾ ಜಂಬೂ ಸವಾರಿಯಲ್ಲಿ ಭಾಗಿಯಾಗಲು ಸಂತಸದಿಂದ ಬಂದಿದ್ದ `ವರಲಕ್ಷ್ಮೀ’ ಭಾರವಾದ ಮನಸ್ಸಿನಲ್ಲೇ ಶಿಬಿರಕ್ಕೆ ವಾಪಸ್ಸಾದಳು.

ದಸರಾ ಗಜಪಡೆಯ ಮೊದಲ ತಂಡ ದಲ್ಲೇ ಮೈಸೂರಿಗೆ ಬಂದು, ಅರಮನೆ ಅಂಗಳದಲ್ಲಿ ಬೀಡುಬಿಟ್ಟಿದ್ದ `ವರಲಕ್ಷ್ಮಿ’ ಗರ್ಭಿಣಿ ಆಗಿರುವ ಕಾರಣ ಜಂಬೂ ಸವಾರಿಯಲ್ಲಿ ಪಾಲ್ಗೊಳ್ಳಲು ಸಾಧ್ಯವಾಗದೇ ಅನಿವಾರ್ಯವಾಗಿ ಶಿಬಿರಕ್ಕೆ ವಾಪಸ್ಸಾಗ ಬೇಕಾಯಿತು. `ವರಲಕ್ಷ್ಮಿ’ಗೆ ಶುಕ್ರವಾರ ಸಾಂಪ್ರದಾಯಿಕವಾಗಿ ಪೂಜೆ ಸಲ್ಲಿಸಿ, ಮತ್ತಿ ಗೋಡು ಶಿಬಿರಕ್ಕೆ ಬೀಳ್ಕೊಡಲಾಯಿತು.

ಕರೆದೊಯ್ಯಲು ಲಾರಿ ಹತ್ತಿರ ಬಂದಾಗ ಅದು `ನನ್ನನ್ನೇ ಕರೆದೊಯ್ಯಲು ಬಂದಿದೆ’ ಎಂಬುದನ್ನು ಅರಿತಂತೆ ವರ್ತಿಸಿದ ವರ ಲಕ್ಷ್ಮಿ, ಅಲ್ಲಿಂದ ಕಾಲ್ಕಿತ್ತು, ಅರಮನೆ ಅಂಗಳ ದಲ್ಲಿ ತನ್ನ ಸಹಪಾಠಿಗಳಿದ್ದ ಸ್ಥಳಕ್ಕೆ ದೌಡಾಯಿಸಿತು. `ನಾನು ಶಿಬಿರಕ್ಕೆ ಹೋಗು ವುದಿಲ್ಲ, ಇಲ್ಲೇ ಇರುತ್ತೇನೆ’ ಎಂಬಂತೆ ಲಾರಿ ಏರಲು ನಿರಾಕರಿಸುತ್ತಿತ್ತು. ಅದರ ಹಾವಭಾವದಿಂದಲೇ ತನ್ನ ವೇದನೆ ವ್ಯಕ್ತಪಡಿಸಿದಳು. ತಿಂಗಳಿಂದ ಅರಮನೆ ಅಂಗಳದಲ್ಲಿ ಸಹಪಾಠಿಗಳ ನಡುವಿದ್ದು, ಸಾಂಸ್ಕøತಿಕ ನಗರಿಯ ರಾಜಬೀದಿಯಲ್ಲಿ ಒಟ್ಟಿಗೆ ಮೆರವಣಿಗೆ ತಾಲೀಮು ನಡೆಸಿದ್ದ `ವರಲಕ್ಷ್ಮಿ’ ಒಲ್ಲದ ಮನಸ್ಸಿನಿಂದಲೇ ಶಿಬಿರಕ್ಕೆ ಮರಳಿದಳು. ಈ ಭಾವನಾತ್ಮಕ ದೃಶ್ಯ ನೆರೆದಿದ್ದವರ ಕಣ್ಣಾಲಿಗಳ ತುಂಬಿತ್ತು.

ಆ.23ರಂದು ಮೈಸೂರಿಗೆ ಆಗಮಿಸಿದ್ದ ವರಲಕ್ಷ್ಮಿ, ಆ.26ರಿಂದ ಸಹಪಾಠಿಗ ಳೊಂದಿಗೆ ಅರಮನೆ ಅಂಗಳದಲ್ಲಿ ಬೀಡು ಬಿಟ್ಟಿದ್ದಳು. ಆ.28ರಿಂದ ತಾಲೀಮಿನಲ್ಲೂ ಪಾಲ್ಗೊಂಡಿದ್ದಳು. ಈ ನಡುವೆ ವರಲಕ್ಷ್ಮಿ ದೇಹದಲ್ಲಾದ ಬದಲಾವಣೆ ಗಮನಿಸಿದ ಪಶು ವೈದ್ಯರು, ಗರ್ಭಿಣಿಯಾಗಿರಬಹು ದೆಂದು ತಪಾಸಣೆ ನಡೆಸಿದ್ದರು. ವೈದ್ಯ ಕೀಯ ಪರೀಕ್ಷೆಯಲ್ಲಿ ವರಲಕ್ಷ್ಮಿ ಗರ್ಭಿಣಿ ಎಂಬುದು ದೃಢಪಟ್ಟಿತ್ತು. ಈ ಹಿನ್ನೆಲೆಯಲ್ಲಿ ಆಕೆಗೆ ಪೌಷ್ಟಿಕ ಆಹಾರ ನೀಡಿ, ಆರೈಕೆ ಮಾಡಲಾಗುತ್ತಿತ್ತು. ಈ ಕಾರಣದಿಂದಲೇ ಸಿಡಿಮದ್ದು ತಾಲೀಮಿಗೂ ಕರೆತಂದಿರ ಲಿಲ್ಲ. ಮತ್ತೊಂದೆಡೆ ಗರ್ಭಿಣಿ ಆನೆಯನ್ನು ದಸರಾ ಉತ್ಸವಕ್ಕೆ ಕರೆತರಲಾಗಿದೆ ಎಂದು ಕೆಲವರು ಆಕ್ಷೇಪ ವ್ಯಕ್ತಪಡಿಸಿದ್ದರು.

ಭಾವುಕರಾದ ಸಿಬ್ಬಂದಿ: ಗರ್ಭಿಣಿ ವರಲಕ್ಷ್ಮಿ (63)ಯನ್ನು ವಾಪಸ್ಸು ಶಿಬಿರಕ್ಕೆ ಕಳುಹಿ ಸಲು ನಿರ್ಧರಿಸಿ, ಇಂದು ಬೆಳಿಗ್ಗೆ ಅರಣ್ಯ ಇಲಾಖೆ ಲಾರಿಯನ್ನು ಕರೆಸಲಾಗಿತ್ತು. ಮಾವುತ ಜೆ.ಕೆ.ರವಿ ಹಾಗೂ ಕಾವಾಡಿ ಮಾದೇಶ ಕುಟುಂಬ ಸದಸ್ಯರೊಂದಿಗೆ ತಮ್ಮ ಸಾಮಾನು ಸರಂಜಾಮುಗಳನ್ನು ಲಾರಿಗೆ ತುಂಬುತ್ತಿದ್ದರು. ಇದನ್ನು ತಾನಿರುವ ಸ್ಥಳದಲ್ಲೇ ಸೂಕ್ಷ್ಮವಾಗಿ ಗಮನಿಸಿದ ವರಲಕ್ಷ್ಮಿ, ಲಾರಿಯನ್ನು ತನ್ನ ಬಳಿ ಕರೆತಂದಾಗ ತಿರಸ್ಕಾರ ಭಾವ ತೋರಿತು. ಲಾರಿಯನ್ನು ಏರದೆ, ಇತರೆ ಆನೆಗಳ ನಡುವೆ ನಿಂತು ಬಿಟ್ಟಿತು. ಇದನ್ನು ಗಮನಿಸಿದ ಇತರೆ ಆನೆಗಳ ಮಾವುತರು, ಕಾವಾಡಿಗಳ ಕುಟುಂಬ ಸದಸ್ಯರು, ವರಲಕ್ಷ್ಮಿಯ ತೊಳಲಾಟವನ್ನು ಕಂಡು ಕಣ್ಣೀರಿಟ್ಟರು. ಕಡೆಗೆ ವರಲಕ್ಷ್ಮಿ ಮನವೊಲಿಸಿ, ಲಾರಿ ಹತ್ತಿಸಿ, ಭಾರದ ಮನಸ್ಸಿನಲ್ಲೇ ಶಿಬಿರಕ್ಕೆ ಬೀಳ್ಕೊಟ್ಟರು.

ಆನೆಗಳು ಭಾವುಕ ಜೀವಿಯಾಗಿದ್ದು, ಸುತ್ತಮುತ್ತಲಿನ ಬೆಳವಣಿಗೆಯನ್ನು ಸೂಕ್ಷ್ಮವಾಗಿ ಗಮನಿಸುತ್ತವೆ. ಅವುಗಳ ಗರ್ಭ 18 ತಿಂಗಳ ಅವಧಿಯಾಗಿದ್ದು, ಇನ್ನು 20 ದಿನ ಅರಮನೆಯ ಆವರಣದಲ್ಲೇ ಇಟ್ಟುಕೊಂಡು ಆರೈಕೆ ಮಾಡಬಹುದಾಗಿತ್ತು. ಆದರೆ ಕೆಲವರು ಗರ್ಭಿಣಿ ಆನೆ ತಂದಿರುವ ಬಗ್ಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದರಿಂದ ಅನಿ ವಾರ್ಯವಾಗಿ ಶಿಬಿರಕ್ಕೆ ಕಳುಹಿಸಲಾಯಿತು. ಸಾಧು ಸ್ವಭಾವದ ವರಲಕ್ಷ್ಮಿ 1977ರಲ್ಲಿ ಕಾಕನಕೋಟೆಯಲ್ಲಿ ಸೆರೆಸಿಕ್ಕಿದ್ದಳು. 10 ವರ್ಷಗಳಿಂದ ದಸರಾ ಮಹೋತ್ಸವದಲ್ಲಿ ಪಾಲ್ಗೊಂಡಿದ್ದ ಅನುಭವ ಹೊಂದಿದ್ದಳು. ಈ ದಸರಾ ವರಲಕ್ಷ್ಮೀಗೆ 11ನೇ ವರ್ಷದ್ದಾಗಿತ್ತು. 2.46 ಮೀಟರ್ ಎತ್ತರ, 3.34 ಮೀಟರ್ ಉದ್ದ, 3510 ಕೆ.ಜಿ. ತೂಕವಿತ್ತು. ಆದರೆ ದಸರೆಯಲ್ಲಿ ಪಾಲ್ಗೊಳ್ಳದೆ ವಾಪಸ್ಸಾಗಿದ್ದು, ಅತೀವ ಬೇಸರದ ಸಂಗತಿ.

ವರಲಕ್ಷ್ಮಿ ನಿರ್ಗಮನ: ಗೋಪಾಲಸ್ವಾಮಿ ಆಗಮನ
ದಸರಾ ಮಹೋತ್ಸವದಲ್ಲಿ 12 ಆನೆ ಪಾಲ್ಗೊಳ್ಳುವ ಸಂಪ್ರದಾಯವಿರುವು ದರಿಂದ ವರಲಕ್ಷ್ಮಿ ಬದಲಿಗೆ ಗೋಪಾಲ ಸ್ವಾಮಿ ಕರೆತರಲಾಗಿದೆ. ಹೆಚ್ಚುವರಿ ಆನೆ ಪಟ್ಟಿಯಲ್ಲಿದ್ದ ಲಕ್ಷ್ಮಿ ಆನೆಯನ್ನು ವರ ಲಕ್ಷ್ಮಿ ಬದಲಿಗೆ ಜಂಬೂಸವಾರಿಯಲ್ಲಿ ಬಳಸಿಕೊಳ್ಳಲಾಗುತ್ತದೆ. ಮುಂಬರುವ ವರ್ಷಗಳಲ್ಲಿ ಅಂಬಾರಿ ಹೊರುವ ಸಾಮಥ್ರ್ಯವಿರುವ ಗೋಪಾಲಸ್ವಾಮಿ ಯನ್ನು ಈ ಬಾರಿ ಕರೆತಂದಿರಲಿಲ್ಲ. ಸಣ್ಣ ಆರೋಗ್ಯ ಸಮಸ್ಯೆಯಿಂದಾಗಿ ಎರಡೂ ತಂಡಗಳಲ್ಲಿಯೂ ಸ್ಥಾನ ಕಳೆದುಕೊಂಡಿದ್ದ ಗೋಪಾಲಸ್ವಾಮಿ ಇದೀಗ ಆರೋಗ್ಯವಾಗಿದ್ದಾನೆ. ಈ ಹಿನ್ನೆಲೆ ಯಲ್ಲಿ ಮತ್ತಿಗೋಡು ಶಿಬಿರದಿಂದ ಗೋಪಾಲಸ್ವಾಮಿಯನ್ನು ಇಂದು ಸಂಜೆ 4.45ಕ್ಕೆ ಅರಮನೆಗೆ ಕರೆತರಲಾಯಿತು. ಇದರಿಂದ ಗಜಪಡೆಯಲ್ಲಿ ಒಟ್ಟು 13 ಸದಸ್ಯರಿದ್ದಾರೆ. 2009ರಲ್ಲಿ ಹಾಸನ ಜಿಲ್ಲೆಯ ಸಕಲೇಶಪುರದ ಹೆತ್ತೂರಿನಲ್ಲಿ ಸೆರೆ ಹಿಡಿಯಲಾಗಿತ್ತು. ಶಾಂತ ಸ್ವಭಾವ ಹೊಂದಿರುವ ಗೋಪಾಲಸ್ವಾಮಿ ಆರನೇ ಬಾರಿಗೆ ದಸರಾ ಮಹೋತ್ಸವದಲ್ಲಿ ಪಾಲ್ಗೊಳ್ಳುತ್ತಿದೆ. 37 ವರ್ಷದ ಈ ಆನೆ 2.62 ಮೀಟರ್ ಎತ್ತರ, 3.42 ಮೀಟರ್ ಉದ್ದವಿದ್ದು, 3,242 ಕೆಜಿ ತೂಕವಿದೆ. ಮಾವುತ ಸೃಜನ್, ಕಾವಾಡಿ ಶಿವರಾಜು ಈ ಆನೆಯನ್ನು ಪೋಷಿಸುತ್ತಿದ್ದಾರೆ. ಜಂಬೂಸವಾರಿಯಲ್ಲಿ ಸಾಲಾನೆಯಾಗಿ ಹೆಜ್ಜೆ ಹಾಕಲಿದೆ.

Translate »