ವಿಜಯಪುರ ಕಾಂಗ್ರೆಸ್ ನಾಯಕಿ ನಿಗೂಢ ಸಾವು
ಮೈಸೂರು

ವಿಜಯಪುರ ಕಾಂಗ್ರೆಸ್ ನಾಯಕಿ ನಿಗೂಢ ಸಾವು

May 18, 2019

ವಿಜಯಪುರ: ವಿಜಯಪುರದ ಕಾಂಗ್ರೆಸ್ ನಾಯಕಿ, ಜೆಡಿಎಸ್ ಮಾಜಿ ಜಿಲ್ಲಾಧ್ಯಕ್ಷೆ ರೇಷ್ಮಾ ಪಡೇಕನೂರ ನಿಗೂಢವಾಗಿ ಸಾವನ್ನಪ್ಪಿದ್ದಾರೆ. ಕೊಲ್ಹಾರದ ಕೃಷ್ಣಾ ನದಿ ಸೇತುವೆಯ ಕೆಳಗೆ ಶುಕ್ರವಾರ ಬೆಳಿಗ್ಗೆ ಅವರ ಶವ ಪತ್ತೆಯಾಗಿದೆ.

ಗುರುವಾರ ರಾತ್ರಿ ರೇಷ್ಮಾ ಅವರನ್ನು ಹತ್ಯೆ ಗೈದು ದುಷ್ಕರ್ಮಿಗಳು ಶವವನ್ನು ಸೇತುವೆಯ ಕೆಳಗೆ ಎಸೆದಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ರೇಷ್ಮಾ ಗುರು ವಾರ ರಾತ್ರಿ ಮಹಾರಾಷ್ಟ್ರದ ಕೊಲ್ಹಾಪುರ ಎಂಐಎಂ ಮುಖಂಡರೊಬ್ಬರೊಂದಿಗೆ ಕಾರಿನಲ್ಲಿ ತೆರಳಿದ್ದರೆನ್ನಲಾಗಿದೆ.

ಈಕೆ ಎಂಐಎಂ ಮುಖಂಡರೊಡನೆ ಒಡನಾಟ ಹೊಂದಿದ್ದು, ಈ ಮುಖಂಡನ ಪತ್ನಿ ರೇಷ್ಮಾ ಮನೆ ಮುಂದೆ ಬಂದು ರಂಪಾಟವನ್ನೂ ನಡೆಸಿದ್ದರು ಎಂದು ಮೂಲಗಳು ಹೇಳಿವೆ.

ಜೆಡಿಎಸ್ ಜಿಲ್ಲಾಧ್ಯಕ್ಷೆ ಆಗಿದ್ದ ರೇಷ್ಮಾ ಪಡೇಕನೂರ, 2013ರಲ್ಲಿ ದೇವರಹಿಪ್ಪರಗಿ ಕ್ಷೇತ್ರದಿಂದ ಜೆಡಿಎಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿ ಸೋಲು ಕಂಡಿದ್ದರು. ಕಳೆದ ವಿಧಾನ ಸಭೆ ಚುನಾವಣೆಯಲ್ಲಿ ವಿಜಯಪುರ ಕ್ಷೇತ್ರದಿಂದ ಜೆಡಿಎಸ್ ಟಿಕೆಟ್ ಆಕಾಂಕ್ಷಿಯಾಗಿದ್ದ ರೇಷ್ಮಾ ಅವರಿಗೆ ಪಕ್ಷ ಟಿಕೆಟ್ ಕೊಟ್ಟಿರಲಿಲ್ಲ. ಇದರಿಂದ ಬೇಸರಗೊಂಡು ಜೆಡಿಎಸ್ ತೊರೆದು ಕಾಂಗ್ರೆಸ್ ಸೇರ್ಪಡೆಯಾಗಿದ್ದರು. ಘಟನೆ ಕುರಿತಂತೆ ಕೊಲ್ಹಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Translate »