ನೈಸರ್ಗಿಕ ಸಂಪತ್ತು ರಕ್ಷಣೆ ಮೂಲಭೂತ ಕರ್ತವ್ಯ  ಜಿಲ್ಲಾ ನ್ಯಾಯಾಧೀಶರಾದ ಜಿ.ಬಸವರಾಜ
ಚಾಮರಾಜನಗರ

ನೈಸರ್ಗಿಕ ಸಂಪತ್ತು ರಕ್ಷಣೆ ಮೂಲಭೂತ ಕರ್ತವ್ಯ  ಜಿಲ್ಲಾ ನ್ಯಾಯಾಧೀಶರಾದ ಜಿ.ಬಸವರಾಜ

July 20, 2018

ಚಾಮರಾಜನಗರ:  ಅಮೂಲ್ಯವಾದ ನೈಸರ್ಗಿಕ ಸಂಪತ್ತಿನ ಬಗ್ಗೆ ಕಾಳಜಿ ವಹಿಸಿ ಪರಿಸರ ಸಂರಕ್ಷಿಸುವುದು ಪ್ರತಿ ಯೊಬ್ಬರ ಮೂಲಭೂತ ಕರ್ತವ್ಯವೂ ಆಗಿದೆ ಎಂದು ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರಾದ ಜಿ. ಬಸವರಾಜ ಅವರು ತಿಳಿಸಿದರು.

ನಗರದ ಹೊರವಲಯದಲ್ಲಿರುವ ಕರಿವರದರಾಜನ ಬೆಟ್ಟದಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ವಕೀಲರ ಸಂಘ ಹಾಗೂ ಓಡಿಪಿ ಸಂಸ್ಥೆ ಆಶ್ರಯದಲ್ಲಿ ಹಮ್ಮಿಕೊಳ್ಳಲಾಗಿದ್ದ ವೃಕ್ಷ ಕ್ರಾಂತಿ ಕಾರ್ಯಕ್ರಮದಲ್ಲಿ ಸಸಿ ನೆಟ್ಟು ಅವರು ಮಾತನಾಡಿದರು.
ಉತ್ತಮ ಪರಿಸರವಿದ್ದರೆ ಮಾನವ ಪ್ರಾಣಿಸಂಕುಲಗಳ ಜೀವಕ್ಕೂ ಸುರಕ್ಷತೆ ಇರುತ್ತದೆ. ಪರಿಸರ ನಾಶವಾದರೆ ಆರೋಗ್ಯಕರ ವಾತಾವರಣ ಇಲ್ಲವಾಗುತ್ತದೆ. ವೃಕ್ಷಗಳಿದ್ದಷ್ಟೂ ಆರೋಗ್ಯಪೂರಕ ಜೀವನ ನಡೆಸಲು ಸಹಕಾರಿಯಾಗಲಿದೆ. ಈ ಹಿನ್ನೆಲೆಯಲ್ಲಿ ಪರಿಸರ ಕುರಿತು ಗಮನ ಹರಿಸುವುದು ಒಳಿತು ಎಂದು ನ್ಯಾಯಾಧೀಶರು ಸಲಹೆ ಮಾಡಿದರು.

ಪ್ರಾಕೃತಿಕ ಸಂಪತ್ತು ಕಾಪಾಡುವುದು ಎಲ್ಲರ ಹೊಣೆಗಾರಿಕೆ ಯಾಗಿದೆ. ಪರಿಸರ ಸಮತೋಲನಕ್ಕೆ ಅರಣ್ಯ ಸೇರಿದಂತೆ ಎಲ್ಲ ನಿಸರ್ಗ ಸಂಪತ್ತು ನೆರವಾಗಲಿದೆ. ಹೀಗಾಗಿ ಪ್ರಕೃತಿ ಸಂಪತ್ತಿನ ರಕ್ಷಣೆ ಬಗ್ಗೆ ವಿಶೇಷ ಆಸಕ್ತಿ ವಹಿಸಬೇಕು. ಯಾವುದೇ ಭಾಗದಲ್ಲಿ ನೈಸರ್ಗಿಕ ಸಂಪತ್ತನ್ನು ದೋಚುವವರು ಕಂಡುಬಂದಲ್ಲಿ ನಿರ್ದಾಕ್ಷಿಣ್ಯವಾಗಿ ಗಮನಕ್ಕೆ ತರಬೇಕು. ಈ ನಿಟ್ಟಿನಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಯವರಿಗೂ ದೂರು ನೀಡ ಬಹುದು ಎಂದು ನ್ಯಾಯಾಧೀಶರು ತಿಳಿಸಿದರು.
ಪರಿಸರ ಸಂರಕ್ಷಣೆ ಬಗ್ಗೆ ವಿಶೇಷವಾಗಿ ಕಾಳಜಿ ಇಟ್ಟು ಸ್ವಯಂ ಸೇವಾ ಸಂಸ್ಥೆಗಳು, ವಕೀಲರ ಸಂಘ ಗಿಡ ನೆಟ್ಟು ಪೋಷಿಸುವ ಕೆಲಸಕ್ಕೆ ಮುಂದಾಗಿರುವುದು ಅಭಿನಂದನೀಯ ಕಾರ್ಯವಾಗಿದೆ. ಈ ಉತ್ತಮ ಕೆಲಸಕ್ಕೆ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ಕೈಜೋಡಿಸಲಿದೆ ಎಂದು ಅವರು ಹೇಳಿದರು.

ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಸಿ.ಜಿ.ವಿಶಾಲಾಕ್ಷಿ ಮಾತನಾಡಿ, ಹಸಿರೇ ಉಸಿರು ಎಂಬುದನ್ನು ಎಲ್ಲರೂ ಅರಿಯಬೇಕು. ಕಾಡಿದ್ದರೆ ನಾಡು ಅರಣ್ಯ ಸಂಪತ್ತಿನಿಂದ ವಾಯು ಮಾಲಿನ್ಯ ಕಡಿಮೆಯಾಗಲಿದೆ. ವೃಕ್ಷ ಸಂಪತ್ತು ವೃದ್ಧಿಸುವ ದಿಸೆಯಲ್ಲಿ ಪ್ರತಿಯೊಬ್ಬರಲ್ಲಿ ಕರ್ತವ್ಯ ಪ್ರಜ್ಞೆ ಉಂಟಾಗಬೇಕೆಂದು ತಿಳಿಸಿದರು.

ಓಡಿಪಿ ಸಂಸ್ಥೆಯ ನಿರ್ದೇಶಕರಾದ ವಂ. ಸ್ವಾಮಿ. ಸ್ಟ್ಯಾನಿ ಡಿ ಆಲ್ಮೆಡಾ ಅವರು ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ವಕೀಲರ ಸಂಘದ ಅಧ್ಯಕ್ಷರಾದ ಉಮ್ಮತ್ತೂರು ಇಂದುಶೇಖರ್, ಪ್ರಧಾನ ಕಾರ್ಯದರ್ಶಿ ಅರುಣ್ ಕುಮಾರ್, ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಪ್ರಾಂಶುಪಾಲ ರಾದ ಪ್ರೇಮಲತಾ, ಪ್ರಾದೇಶಿಕ ವಲಯ ಅರಣ್ಯಾಧಿಕಾಶರಿ ರಖನ್ ಕುಮಾರ್, ಸಾಮಾಜಿಕ ವಲಯ ಅರಣ್ಯಾಧಿಕಾರಿ ಎಂ.ರವಿ, ಓಡಿಪಿ ಸಂಸ್ಥೆಯ ಸಂಯೋಜಕರಾದ ಸುನಿತ, ಸಿದ್ದ ರಾಜು ಇತರರು ಕಾರ್ಯಕ್ರಮದಲ್ಲಿ ಇದ್ದರು.

Translate »