ಆಡಳಿತ ನಡೆಸಿದ ಎಲ್ಲಾ ಪಕ್ಷಗಳಿಂದಲೂ ಅಸಂಘಟಿತ ಕಾರ್ಮಿಕರ ನಿರ್ಲಕ್ಷ್ಯ
ಮೈಸೂರು

ಆಡಳಿತ ನಡೆಸಿದ ಎಲ್ಲಾ ಪಕ್ಷಗಳಿಂದಲೂ ಅಸಂಘಟಿತ ಕಾರ್ಮಿಕರ ನಿರ್ಲಕ್ಷ್ಯ

October 21, 2019

ಮೈಸೂರು,ಅ.20(ಪಿಎಂ)-ದೇಶದಲ್ಲಿರುವ ಶೇ.90 ರಷ್ಟು ಅಸಂಘಟಿತ ಕಾರ್ಮಿಕರ ಕಲ್ಯಾಣಕ್ಕೆ ಆಡಳಿತ ನಡೆಸಿದ ಯಾವುದೇ ಪಕ್ಷಗಳು ಕೊಡುಗೆ ನೀಡಿಲ್ಲ ಎಂದು ಪ್ರಗತಿಪರ ಚಿಂತಕ ಪ್ರೊ.ಬಿ.ಪಿ.ಮಹೇಶ್ ಚಂದ್ರಗುರು ಬೇಸರ ವ್ಯಕ್ತಪಡಿಸಿದರು.
ಮೈಸೂರಿನ ಜಲದರ್ಶಿನಿ ಅತಿಥಿ ಗೃಹದಲ್ಲಿ ಜಿಲ್ಲಾ ಕಾಯಕ ಸಮಾಜಗಳ ಒಕ್ಕೂಟದ ವತಿಯಿಂದ `ದೇಶದ ಆರ್ಥಿಕ ಹಿಂಜರಿತ: ಕೇಂದ್ರ ಸರ್ಕಾರದ ಕಾರ್ಯ ವೈಖರಿ’ ಕುರಿತಂತೆ ಭಾನುವಾರ ಹಮ್ಮಿಕೊಂಡಿದ್ದ ವಿಚಾರ ಸಂಕಿರಣ ಉದ್ಘಾಟಿಸಿ ಅವರು ಮಾತನಾಡಿದರು.

ಕೃಷಿ ಕ್ಷೇತ್ರ, ಗುಡಿ ಕೈಗಾರಿಕೆ ಸೇರಿದಂತೆ ಇನ್ನಿತರ ಕ್ಷೇತ್ರ ಗಳಲ್ಲಿ ಶೇ.90ರಷ್ಟು ಅಸಂಘಟಿತ ಕಾರ್ಮಿಕರಿದ್ದು, ಇವರ ಕಲ್ಯಾಣಕ್ಕೆ ಆಡಳಿತ ನಡೆಸಿದ ಕಾಂಗ್ರೆಸ್, ಕಮ್ಯೂನಿಸ್ಟ್ ಹಾಗೂ ಬಿಜೆಪಿ ಸೇರಿದಂತೆ ಯಾವುದೇ ಪಕ್ಷಗಳು ಕೊಡುಗೆ ನೀಡಿಲ್ಲ. ಇಷ್ಟು ದೊಡ್ಡ ಪ್ರಮಾಣದಲ್ಲಿರುವ ಅಸಂಘಟಿತ ಕಾರ್ಮಿಕ ವಲಯವನ್ನು ನಿರ್ಲಕ್ಷ್ಯ ಮಾಡಲಾಗಿದೆ ಎಂದು ವಿಷಾದಿಸಿದರು.

ವೈದಿಕಶಾಹಿಯ ವ್ಯವಸ್ಥೆ ಜಾತಿ-ಜನಾಂಗದ ಹೆಸರಿ ನಲ್ಲಿ ಸಮಾಜವನ್ನು ವಿಭಜಿಸಿದ್ದೇ ಸಾವಿರ ವರ್ಷಗಳು ದೇಶ ಪರಕೀಯರ ಆಕ್ರಮಣಕ್ಕೆ ತುತ್ತಾಗಲು ಕಾರಣ. ಇಂದು ಅಬ್ಬರ ದೇಶಭಕ್ತಿ ವಿಜೃಂಭಿಸುತ್ತಿದ್ದು, ಇಲ್ಲಿ ಅಸಲಿ ದೇಶಪ್ರೇಮವಿಲ್ಲ. ಇವರಲ್ಲಿ ನಿಜವಾದ ದೇಶಪ್ರೇಮ ವಿದ್ದಿದ್ದರೆ ಸಾವಿರ ವರ್ಷಗಳು ದೇಶ ದಾಸ್ಯದಲ್ಲಿ ಇರು ತ್ತಿರಲಿಲ್ಲ. ಇಂದು ಪ್ರಧಾನಿ ಮೋದಿಯವರ ಆಡಳಿತ ದಲ್ಲಿ ನಾಗರಿಕ ಸಮಾಜ, ದೀನ-ದಲಿತರು ಹಾಗೂ ದುರ್ಬಲರು ಅತ್ಯಂತ ಅಪಾಯಕಾರಿ ಸನ್ನಿವೇಶದಲ್ಲಿ ಬದುಕುವಂತಾಗಿದೆ ಎಂದು ಆತಂಕ ವ್ಯಕ್ತಪಡಿಸಿದರು.

ಯುವ ಜನರು ಹಾಗೂ ಹಿಂದುಳಿದ ವರ್ಗಗಳಿಗೆ ಮಾತಿನ ಮೋಡಿ ಮಾಡಿ ಮೋದಿ ಸರ್ಕಾರ ಅಧಿಕಾರಕ್ಕೆ ಬಂದಿತು. ಯುವ ಜನತೆ ಸಬಲೀಕರಣಕ್ಕೆ ಇವರ ಕೊಡುಗೆ ಮಾತ್ರ ಶೂನ್ಯ. ಹಿಂದುಳಿದ ವರ್ಗದ ಸಬಲೀಕರಣಕ್ಕೂ ಯಾವುದೇ ಕಾರ್ಯಕ್ರಮ ನೀಡಿಲ್ಲ ಎಂದು ದೂರಿದರು.

ದೇಶದಲ್ಲಿ ದಲಿತರು, ಆದಿವಾಸಿಗಳು, ಅಲ್ಪಸಂಖ್ಯಾ ತರ ಕಗ್ಗೊಲೆ ನಡೆಯುತ್ತಿವೆ. ಸಂವಿಧಾನಿಕ ಸಂಸ್ಥೆಗಳನ್ನು ದುರ್ಬಲಗೊಳಿಸಲಾಗಿದೆ. ಆರ್‍ಬಿಐ, ಐಟಿ, ಇಡಿ ಎಲ್ಲ ವನ್ನೂ ದುರ್ಬಳಕೆ ಮಾಡಿಕೊಳ್ಳಲಾಗುತ್ತಿದೆ. ಆರ್‍ಬಿಐ ಅಂತೂ ಹೀನಾಯ ಸ್ಥಿತಿಗೆ ತಲುಪಿದ್ದು, ನಿಯಮ ಉಲ್ಲಂ ಘಿಸಿ ಆರ್‍ಬಿಐನಿಂದ 1,070 ಕೋಟಿ ರೂ.ಗಳನ್ನು ಸರ್ಕಾರಿ ಯೋಜನೆಗಳಿಗೆ ಬಳಸಿಕೊಳ್ಳಲಾಗಿದೆ. ಮತ ಯಂತ್ರಗಳನ್ನೂ ದುರ್ಬಳಕೆ ಮಾಡಲಾಗಿದ್ದು, 2019ರ ಲೋಕಸಭಾ ಚುನಾವಣೆಯಲ್ಲಿ ರಾಜ್ಯದ 28 ಕ್ಷೇತ್ರಗಳ ಪೈಕಿ 25 ಸ್ಥಾನ ಗಳಿಸುವ ಬಿಜೆಪಿ ಕೆಲವೇ ದಿನಗಳಲ್ಲಿ ಎದುರಾಗುವ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಕೇವಲ 3ನೇ ಒಂದು ಭಾಗ ಮತ ಪಡೆದಿದೆ. ಆದರೆ 3ನೇ 2 ಭಾಗದಷ್ಟು ಮತವನ್ನು ಕಾಂಗ್ರೆಸ್-ಜೆಡಿಎಸ್ ಪಡೆ ದಿವೆ. ಇದು ಹೇಗೆ ಸಾಧ್ಯ ಎಂದು ಪ್ರಶ್ನಿಸಿದರು.

ದೇಶದ ಆರ್ಥಿಕತೆ ದುಸ್ಥಿತಿಗೆ ತಲುಪಿದ್ದು, ಅರ್ಥ ಸಚಿ ವರು ಯೋಗ್ಯರಲ್ಲ ಎಂದು ಅವರ ಪಕ್ಷದ ಸುಬ್ರಹ್ಮಣಿ ಯನ್ ಸ್ವಾಮಿಯವರೇ ಟೀಕಿಸಿದ್ದಾರೆ. ಸೂಕ್ತವಾದ ವರಿಗೆ ಅರ್ಥ ಖಾತೆ ನೀಡಿಲ್ಲ. ಜಿಎಸ್‍ಟಿ ತೆರಿಗೆ ನೀತಿ ಶ್ರೀಮಂತರ ಪರವಾಗಿದ್ದು, ಇದು ಜಾರಿಯಾದ ಬಳಿಕ ಹಲವು ಸಣ್ಣ ವ್ಯಾಪಾರಿಗಳು ಆತ್ಮಹತ್ಯೆ ಮಾಡಿಕೊಂಡರು. ಇನ್ನು ನೋಟು ಅಮಾನ್ಯದ ವಿಚಾರ ಜಾರಿಗೊಳಿಸುವ 3 ತಿಂಗಳ ಮುನ್ನವೇ ಬಿಜೆಪಿ ಹಾಗೂ ಬೆಂಬಲಿತ ಪಕ್ಷದವ ರಿಗೆ ಮಾಹಿತಿ ಇದ್ದಿತು. ಆದರೆ ಇದರಿಂದ ಪರಿತಪಿಸಿ ದವರು ಮಾತ್ರ ಶ್ರೀಸಾಮಾನ್ಯರು ಎಂದು ವಿಷಾದಿಸಿದರು.

ಕ್ವಿಟ್ ಎನ್‍ಡಿಎ ಆರಂಭವಾಗಲಿ: ಸಂವಿಧಾನ ಸಮಸ್ತ ಪ್ರಜೆಗಳಿಗೆ ಕಲ್ಪಿಸಿರುವ ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯ ವನ್ನು ಹರಣ ಮಾಡಲಾಗುತ್ತಿದೆ. ಜಮ್ಮು ಮತ್ತು ಕಾಶ್ಮೀರ ದಲ್ಲಿ ಎಲ್ಲಾ ರೀತಿ ಸಂಪರ್ಕ ಕಡಿತಗೊಳಿಸಲಾಗಿದ್ದು, ಇದರಿಂದ ಅಪ್ಪ-ಅಮ್ಮ ಸಾವನ್ನಪ್ಪಿದ್ದರೂ ದೂರದಲ್ಲಿರುವ ಅವರ ಮಕ್ಕಳಿಗೆ ವಿಷಯವೇ ಗೊತ್ತಾಗದ ಪರಿಸ್ಥಿತಿ ಯಿದೆ. ಮುಕ್ತವಾಗಿ ವರದಿ ಮಾಡುವ ಪರಿಸ್ಥಿತಿ ಮಾಧ್ಯ ಮಕ್ಕೂ ಇಲ್ಲವಾಗಿದೆ. ಈ ಎಲ್ಲಾ ಹಿನ್ನೆಲೆಯಲ್ಲಿ 2019ರಲ್ಲಿ `ಕ್ವಿಟ್ ಎನ್‍ಡಿಎ’ ಎಂಬ ಪ್ರಬಲ ಅಹಿಂಸಾತ್ಮಕ ಚಳವಳಿ ಆರಂಭಗೊಳ್ಳಬೇಕಿದೆ ಎಂದರು. ವಿಚಾರವಾದಿ ಶಬೀರ್ ಮುಸ್ತಾಫ, ನಿವೃತ್ತ ಪ್ರಾಧ್ಯಾಪಕ ಪ್ರೊ.ನಂಜರಾಜ ಅರಸು, ಕಾಯಕ ಸಮಾಜಗಳ ಒಕ್ಕೂಟದ ಅಧ್ಯಕ್ಷ ಕೆ.ಸಿ.ಪುಟ್ಟಸಿದ್ಧ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ಬೋರಪ್ಪಶೆಟ್ಟಿ, ಮುಖಂಡ ರಾದ ಬಿ.ಧನಪಾಲ್, ಅರವಿಂದಶರ್ಮ ಇತರರಿದ್ದರು.

Translate »