‘ದ ಪೇಯಿಂಗ್ ಗೆಸ್ಟ್’ ನಾಟಕ ಪ್ರದರ್ಶನ
ಮೈಸೂರು

‘ದ ಪೇಯಿಂಗ್ ಗೆಸ್ಟ್’ ನಾಟಕ ಪ್ರದರ್ಶನ

December 13, 2019

ಮೈಸೂರು,ಡಿ.12- ಸಾಂಸ್ಕøತಿಕ ನಗರಿ ಮೈಸೂರಿನಲ್ಲಿ ರಂಗ ಚಟುವಟಿಕೆಗಳಿಗೆ ಸದಾ ಪ್ರೋತ್ಸಾಹಿಸುವ ಪರಸ್ಪರ ಆರ್ಟ್ ಫೌಂಡೇಷನ್ ವತಿಯಿಂದ ಜಿ.ಎಲ್.ತ್ರಿಪುರಾಂತಕರವರು ರಚಿಸಿರುವ ‘ದ ಪೇಯಿಂಗ್ ಗೆಸ್ಟ್’ ನಾಟಕ ಡಿಸೆಂಬರ್ 14ರ ಶನಿವಾರ ಸಂಜೆ 7.00 ಗಂಟೆಗೆ ಕಲಾಮಂದಿರದ ಆವರಣದ ಕಿರುರಂಗಮಂದಿರದಲ್ಲಿ ಪ್ರದರ್ಶನಗೊಳ್ಳುತ್ತಿದೆ.

ರಂಗಾಯಣದ ಹಿರಿಯ ರಂಗಕರ್ಮಿಯಾಗಿದ್ದ ದಿವಂಗತ ಮಂಜುನಾಥ ಬೆಳೆಕೆರೆಯವರು ಸಂಸ್ಥಾಪಿಸಿರುವ ಪರಸ್ಪರ ಆರ್ಟ್ ಫೌಂಡೇಷನ್‍ನನ್ನು ಅವರ ಪತ್ನಿ ಶ್ರೀಮತಿ ಪ್ರಶಾಂತಿ ಬೆಳೆಕೆರೆ ಮುನ್ನಡೆಸುತ್ತಿದ್ದು, ಹೊಸ ನಾಟಕಕಾರರ ನಾಟಕಗಳಿಗೆ ರಂಗರೂಪ ನೀಡಿ, ಪ್ರಸ್ತುತಪಡಿಸುವ ಮೂಲಕ ಮಂಜುನಾಥ ಬೆಳೆಕೆರೆಯವರ ಆಶಯವನ್ನು ಸಾಕಾರಗೊಳಿಸುತ್ತಿದ್ದಾರೆ. ಯುವ ನಿರ್ದೇಶಕ ಕಿರಣ್ ಗಿರ್ಗಿ, ‘ದ ಪೇಯಿಂಗ್ ಗೆಸ್ಟ್’ ನಾಟಕದ ವಿನ್ಯಾಸ ಹಾಗೂ ನಿರ್ದೇಶನವನ್ನು ಮಾಡುತ್ತಿದ್ದಾರೆ. ನಗರ ಪ್ರದೇಶದ ಕೌಟುಂಬಿಕ ವಸ್ತುಗಳನ್ನೊಳಗೊಂಡಿರುವ ಈ ನಾಟಕದಲ್ಲಿ ಪಿ.ಕೃಷ್ಣನ್, ಶ್ರೀಮತಿ ಸುಧಾ ಗುಡುಗುಂಟಿ, ಸುಪ್ರೀತ್.ಪಿ ಹಾಗೂ ಜಗದೀಶ್ ರಾಜಶೇಖರ್ ಅಭಿನಯಿಸುತ್ತಿದ್ದಾರೆ.

ಇದೇ ನಾಟಕವನ್ನು ಮೈಸೂರು ಆಕಾಶವಾಣಿ ನಿರ್ಮಿಸಿ ಡಿ. 6ರಂದು ಪ್ರಸಾರ ಮಾಡಿತು. ಡಿಸೆಂಬರ್ 21ರ ಶನಿವಾರ ಸಂಜೆ 7.00ಕ್ಕೆ ಕಲಾಮಂದಿರ ಆವರಣದ ಕಿರುರಂಗಮಂದಿರದಲ್ಲಿ ನಾಟಕದ ಮರುಪ್ರದರ್ಶನವಿದೆ. ನಾಟಕ ಪ್ರದರ್ಶನಕ್ಕೂ ಮುನ್ನ, ಸಂಜೆ 6ಕ್ಕೆ ಖ್ಯಾತ ಅಂಕಣಕಾರರಾದ ಜಿ.ಎಲ್.ತ್ರಿಪುರಾಂತಕರವರು ರಚಿಸಿ, ಅನನ್ಯ ಪುಸ್ತಕಗಳು ಪ್ರಕಾಶನದವರು ಪ್ರಕಟಿಸಿರುವ 3 ನಾಟಕಗಳ ಸಂಕಲನ ‘ರಂಗೋತ್ರಿ’ ಬಿಡುಗಡೆ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಕುಂದೂರು ಮಠಾಧ್ಯಕ್ಷರು ಹಾಗೂ ಕರ್ನಾಟಕ ಸಂಸ್ಕøತ ವಿಶ್ವವಿದ್ಯಾನಿಲಯದ ಶೈವ ಸಂಶೋಧನಾ ಮತ್ತು ಅಧ್ಯಯನ ಕೇಂದ್ರದ ನಿರ್ದೇಶಕ ಡಾ. ಶರತ್‍ಚಂದ್ರ ಸ್ವಾಮಿಗಳು ಕಾರ್ಯಕ್ರಮದ ಸಾನ್ನಿಧ್ಯವನ್ನು ವಹಿಸಲಿದ್ದಾರೆ. ಪರಸ್ಪರ ಆರ್ಟ್ ಫೌಂಡೇಷನ್‍ನ ಶ್ರೀಮತಿ ಪ್ರಶಾಂತಿ ಬೆಳೆಕೆರೆಯವರು ಕಾರ್ಯಕ್ರಮ ಉದ್ಘಾಟನೆ ಮಾಡಲಿದ್ದಾರೆ. ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷರಾದ ಡಾ.ನಂದೀಶ್ ಹಂಚೆ ಕೃತಿ ಬಿಡುಗಡೆ ಮಾಡಲಿದ್ದಾರೆ. ಪುಸ್ತಕ ಕುರಿತು ರಂಗಕರ್ಮಿಗಳು ಹಾಗೂ ನಿವೃತ್ತ ಪ್ರಾಂಶುಪಾಲರು ಆದ ಪ್ರೊ.ಎಚ್.ಎಸ್.ಉಮೇಶ್‍ರವರು ಮಾತನಾ ಡಲಿದ್ದಾರೆ. ಕಾರ್ಯಕ್ರಮದಲ್ಲಿ ಪ್ರಕಾಶಕರಾದ ಡಿ.ಎನ್.ಲೋಕಪ್ಪ ಹಾಗೂ ಲೇಖಕರಾದ ಜಿ.ಎಲ್.ಟಿ.ಯವರು ಉಪಸ್ಥಿತರಿರುತ್ತಾರೆ. ಪುಸ್ತಕ ಬಿಡುಗಡೆ ಕಾರ್ಯಕ್ರಮ ಹಾಗೂ ನಾಟಕ ಪ್ರದರ್ಶನಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ರಂಗಾಸಕ್ತರು ಆಗಮಿಸಿ ಪ್ರೋತ್ಸಾಹಿಸಬೇಕಾಗಿ ಕೋರಿದೆ. ಹೆಚ್ಚಿನ ಮಾಹಿತಿಗೆ ಮೊ: 9686677284(ತ್ರಿಪುರಾಂತಕ) ಸಂಪರ್ಕಿಸಬಹುದು.

Translate »