`ಅಂತರ ಕಾಯ್ದುಕೊಳ್ಳಿ’ ಎಂದು ಧ್ವನಿವರ್ಧಕದಲ್ಲಿ ಪೊಲೀಸರು ಎಚ್ಚರಿಸಿದರೂ ಜಗ್ಗದ ಜನ
ಮೈಸೂರು,ಏ.1(ಎಂಟಿವೈ)- ದಿನಸಿ ಸೇರಿದಂತೆ ಅಗತ್ಯ ವಸ್ತುಗಳನ್ನು ಖರೀದಿಸಲು ಸಂತೆಪೇಟೆ ಹಾಗೂ ಚಿಕ್ಕ ಗಡಿಯಾರ ವೃತ್ತದ ಸುತ್ತ್ತಲಿನ ಅಂಗಡಿಗಳ ಮುಂದೆ ಬುಧವಾರ ಬೆಳಿಗ್ಗೆ ನೂರಾರು ಗ್ರಾಹಕರು ಸೇರಿದ್ದ ಪರಿಣಾಮ ಸಣ್ಣ ಪ್ರಮಾಣದಲ್ಲಿ ಜನದಟ್ಟಣೆ ಉಂಟಾಗಿತ್ತು. ಗ್ರಾಹಕರು ಒತ್ತಟ್ಟಿನಲ್ಲಿ ನಿಂತಿದ್ದ ಪರಿಣಾಮ, `ಸಾಮಾಜಿಕ ಅಂತರ ಕಾಯ್ದುಕೊಳ್ಳಿ’ ಎಂದು ದೇವರಾಜ ಸಂಚಾರ ಠಾಣೆ ಪೊಲೀಸರು ಧ್ವನಿವರ್ಧಕದಲ್ಲಿ ಹೇಳುತ್ತಲೇ ಹೈರಾಣಾದರು.
ನಿತ್ಯ ಬಳಕೆ ಮತ್ತು ಅಗತ್ಯ ವಸ್ತುಗಳ ಖರೀದಿಗಾಗಿ ನಿತ್ಯವೂ ಬೆಳಿಗ್ಗೆ 10 ಗಂಟೆವರೆಗೆ ಮೈಸೂರಿನಲ್ಲಿ `ಲಾಕ್‍ಡೌನ್’ ನಿಯಮ ಸಡಿಲಿಸಲಾಗಿರುವುದರಿಂದ ವಿವಿಧೆಡೆಯಿಂದ ಜನರು ಸಂತೆಪೇಟೆ ಹಾಗೂ ಚಿಕ್ಕಗಡಿಯಾರ ಸುತ್ತಲಿರುವ ದಿನಸಿ ಅಂಗಡಿಗಳಿಗೆ ಬರುತ್ತಲೇ ಇದ್ದಾರೆ. ಇದರಿಂದ ಇಲ್ಲಿ ಜನದಟ್ಟಣೆ ಉಂಟಾಗುತ್ತಿದೆ. ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಕನಸಿನ ಮಾತಾಗಿದೆ.
ಈ ವಿಚಾರ ತಿಳಿದ ದೇವರಾಜ ಸಂಚಾರ ಠಾಣೆ ಪೊಲೀಸರು ಬುಧವಾರ ಬೆಳಿಗ್ಗೆ ಇಂಟರ್‍ಸೆಪ್ಟರ್ ವಾಹನದಲ್ಲಿ ಚಿಕ್ಕ ಗಡಿಯಾರ ವೃತ್ತದ ಬಳಿ ಬಂದರು. ಜನದಟ್ಟಣೆ ಸೃಷ್ಟಿಸಿದ್ದವರಿಗೆ ಬುದ್ಧಿಮಾತು ಹೇಳಿದರು. ಆದರೆ, ಜನ ಪೊಲೀಸರ ಮಾತು ಕೇಳುತ್ತಿರಲಿಲ್ಲ. ಮನವಿ ಮಾಡುತ್ತಲೇ ಪೊಲೀಸರೂ ಸುಸ್ತಾದರು. ಅಗತ್ಯ ಸಾಮಗ್ರಿಗಳನ್ನು ಬೇಗ ಬೇಗ ಖರೀದಿಸಿ ಮನೆ ಸೇರಿಕೊಳ್ಳುವ ತವಕದಲ್ಲಿದ್ದ ಜನರು ಅಂಗಡಿಗಳಿಗೆ ಮುಗಿಬೀಳುತ್ತಿದ್ದರು. ಅಂಗಡಿಗಳ ಮಾಲೀಕರು ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ಸೂಚನೆ ನೀಡುತ್ತಿದರೂ ಗ್ರಾಹಕರು ಲೆಕ್ಕಕ್ಕೇ ಇಡುತ್ತಿರಲಿಲ್ಲ.
ಧ್ವನಿವರ್ಧಕದ ಮೊರೆ ಹೋದ ಪೊಲೀಸರು, ಪದೇ ಪದೆ ಮನವಿ ಮಾಡುತ್ತಲೇ ಕೊನೆಗೂ ಜನರ ಗುಂಪಿನಲ್ಲಿ ಅರಿವು ಮೂಡಿಸುವಲ್ಲಿ ಯಶಸ್ವಿಯಾದರು. ಕೆಲ ಗ್ರಾಹಕರು ತಾವೇ ಅಂತರ ಕಾಯ್ದುಕೊಂಡು ಸಾಲಾಗಿ ನಿಂತರು.