ಮೈಸೂರಲ್ಲಿ ವಿಭಾಗೀಯ ಮಟ್ಟದ ಆರ್‍ಎಂಎಸ್, ಎಸ್ಸಿ, ಎಸ್ಟಿ ನೌಕರರ ಸಮ್ಮೇಳನದಲ್ಲಿ ನಿರ್ಣಯ
ಮೈಸೂರು: ಮೊದಲಿದ್ದಂತೆ ಅಂಚೆ ಇಲಾಖೆಗೆ ಕರ್ನಾಟಕ ವಲಯ ಮಟ್ಟದಲ್ಲೇ ಸ್ಥಳೀಯ ನಿರುದ್ಯೋಗಿ ಯುವಕರನ್ನು ನೇಮಕ ಮಾಡಬೇಕೆಂದು ಅಖಿಲ ಭಾರತ ಅಂಚೆ ಇಲಾಖೆ ನೌಕರರ ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಕಲ್ಯಾಣ ಸಂಘ ಆಗ್ರಹಿಸಿದೆ. ಮೈಸೂರಿನ ಜೆ.ಕೆ.ಗ್ರೌಂಡ್‍ನಲ್ಲಿರುವ ಮೈಸೂರು ಮೆಡಿಕಲ್ ಕಾಲೇಜಿನ ಪ್ಲಾಟಿನಂ ಜುಬಿಲಿ ಮಿನಿ ಸಭಾಂಗಣದಲ್ಲಿ ಏರ್ಪಡಿಸಿದ್ದ 2ನೇ ವಿಭಾಗೀಯ ಮಟ್ಟದ ಆರ್‍ಎಂಎಸ್, ಎಸ್ಸಿ, ಎಸ್ಟಿ ನೌಕರರ ಸಮ್ಮೇಳನ ಹಾಗೂ ವಲಯ ಕಾರ್ಯಕಾರಿಣಿ ಸಭೆಯಲ್ಲಿ ಈ ನಿರ್ಣಯ ಕೈಗೊಳ್ಳಲಾಯಿತು. ಕಾರ್ಮಿಕ ಸಂಘಟನೆಗಳಿಗೆ ನೀಡುತ್ತಿರುವಂತೆ ತಮಗೂ ಸಂಬಳದಲ್ಲಿ ವಂತಿಗೆ ಹಿಡಿಯಬೇಕು, ಸಮಸ್ಯೆ ಆಲಿಸಲು ಸಂಬಂಧಪಟ್ಟ ಅಧಿಕಾರಿಗಳು ಪ್ರತೀ ತಿಂಗಳು ಸಭೆ ಕರೆಯಬೇಕು, ಸಂಘದ ಶಾಖಾ, ವಿಭಾಗೀಯ, ವಲಯ ಹಾಗೂ ಅಖಿಲ ಭಾರತ ಮಟ್ಟದ ಸಮ್ಮೇಳನಗಳಿಗೆ ಪ್ರತೀ ತಿಂಗಳು ವಿಶೇಷ ರಜೆ ನೀಡಬೇಕು ಎಂದೂ ನೌಕರರು ಸಮ್ಮೇಳನದಲ್ಲಿ ಒತ್ತಾಯಿಸಿದರು.
ಅಂಚೆ ಇಲಾಖೆಗೆ ಯುಪಿಎಸ್‍ಸಿ ಮೂಲಕ ನೇಮಕಾತಿಯಾಗುತ್ತಿರುವುದರಿಂದ ಕರ್ನಾಟಕದ ನಿರುದ್ಯೋಗಿಗಳಿಗೆ ಅನ್ಯಾಯವಾಗುತ್ತಿದೆ. ಭಾಷೆ ಜ್ಞಾನವಿಲ್ಲದವರು ನೇಮಕವಾದರೆ ಸಾರ್ವಜನಿಕರಿಗೆ ಪರಿಣಾಮಕಾರಿ ಅಂಚೆ ಸೇವೆ ಲಭ್ಯವಾಗುವುದಿಲ್ಲ ಎಂಬ ಅಭಿಪ್ರಾಯವೂ ಸಭೆಯಲ್ಲಿ ಕೇಳಿ ಬಂದಿತು. ಆರ್‍ಎಂಎಸ್‍ಯು ವಿಭಾಗ ಕಚೇರಿಯನ್ನು ಬೆಂಗಳೂರಿನಿಂದ ಮಂಗಳೂರಿಗೆ ಸ್ಥಳಾಂತರ ಮಾಡಿರುವುದರಿಂದ ಸುತ್ತಲಿನ ಜಿಲ್ಲೆಗಳ ನೌಕರರಿಗೆ ತೊಂದರೆಯಾಗಿದೆ. ಅದನ್ನು ಮೈಸೂರಿಗೆ ಸ್ಥಳಾಂ ತರಿಸಬೇಕೆಂಬ ನಿರ್ಣಯವನ್ನು ಇದೇ ಸಂದರ್ಭ ಕೈಗೊಳ್ಳಲಾಯಿತು.
ಉರಿಲಿಂಗ ಪೆದ್ದಿಮಠದ ಶ್ರೀ ಜ್ಞಾನಪ್ರಕಾಶ್ ಸ್ವಾಮೀಜಿ ಹಾಗೂ ಬುದ್ಧಪ್ರಕಾಶ್ ಬಂತೇಜಿ, ಹಾಸನ ನಗರ ಸಭೆ ರೆವಿನ್ಯೂ ಅಧಿಕಾರಿ ಸಿಎಸ್.ಪ್ರಕಾಶ್, ಸಂಘದ ಮಾಜಿ ವಲಯ ಅಧ್ಯಕ್ಷ ಕೆ.ಆರ್.ಕೆಂಬಯ್ಯ, ಡಾ.ಹೆಚ್.ಆರ್.ಸ್ವಾಮಿ, ಎನ್.ಪ್ರಕಾಶ್, ಬಿ.ಎಸ್.ರಾಜಶೇಖರ ಮೂರ್ತಿ, ಬಾಬುರಾವ್, ರವೀಂದ್ರ ಸೇರಿದಂತೆ ಸಂಘದ ಪದಾಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು.