ಜಿಲ್ಲಾಡಳಿತದಿಂದ ಶಾಶ್ವತ ಪರಿಹಾರದ ಭರವಸೆ:  ಗಂಜಿ ಕೇಂದ್ರ ಬಿಟ್ಟು ತೆರಳಲು ಮುಂದಾದ ಸಂತ್ರಸ್ತರು
ಕೊಡಗು

ಜಿಲ್ಲಾಡಳಿತದಿಂದ ಶಾಶ್ವತ ಪರಿಹಾರದ ಭರವಸೆ: ಗಂಜಿ ಕೇಂದ್ರ ಬಿಟ್ಟು ತೆರಳಲು ಮುಂದಾದ ಸಂತ್ರಸ್ತರು

December 10, 2019

ಸಿದ್ದಾಪುರ, ಡಿ.9- ಜಿಲ್ಲಾಡಳಿತದಿಂದ ಶಾಶ್ವತ ಪರಿಹಾರ ಕೊಡಿಸುವ ಭರವಸೆ ನೀಡಿದ ಹಿನ್ನೆಲೆಯಲ್ಲಿ ನೆಲ್ಯಹುದಿಕೆರಿ ಸರ್ಕಾರಿ ಶಾಲೆಯ ಗಂಜಿ ಕೇಂದ್ರದಲ್ಲಿ ಆಶ್ರಯ ಪಡೆದಿದ್ದ ಸಂತ್ರಸ್ತರು ಕೇಂದ್ರ ಬಿಟ್ಟು ತೆರಳಲು ಮುಂದಾ ಗಿದ್ದಾರೆ ಎಂದು ಸಂತ್ರಸ್ತರ ಹೋರಾಟ ಸಮಿತಿ ಅಧ್ಯಕ್ಷ ಪಿ.ಆರ್ ಭರತ್ ತಿಳಿಸಿದರು.

ಸಂತ್ರಸ್ತರ ಕೇಂದ್ರದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಳೆದ ಹಲವು ವರ್ಷಗಳಿಂದಲೂ ಕಾವೇರಿ ನದಿಯ ದಡದಲ್ಲಿ ಮನೆಗಳನ್ನು ಕಟ್ಟಿಕೊಂಡು ಜೀವನ ನಡೆಸುತ್ತಿದ್ದೇವು. ಆದರೆ, ಕಳೆದ ಆಗಸ್ಟ್ ತಿಂಗಳಿನಲ್ಲಿ ಸುರಿದ ಮಹಾ ಮಳೆಯಿಂದ ಪ್ರವಾಹಕ್ಕೆ ಸಿಲುಕಿ ಮನೆ, ಆಸ್ತಿ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿ 4 ತಿಂಗಳಿನಿಂದ ನೆಲ್ಯಹುದಿಕೆರಿ ಸರ್ಕಾರಿ ಶಾಲೆಯಲ್ಲಿ ಜಿಲ್ಲಾಡಳಿತ ತೆರೆದಿದ್ದ ಗಂಜಿ ಕೇಂದ್ರದಲ್ಲಿ ಆಶ್ರಯ ಪಡೆದಿದ್ದೇವೆ. ನಮಗೆ ಶಾಶ್ವತ ಪರಿಹಾರ ಕಲ್ಪಿಸಬೇಕು ಎನ್ನುವ ಹೋರಾಟಕ್ಕೆ ಕೊನೆಗೂ ಸರ್ಕಾರ ಹಾಗೂ ಜಿಲ್ಲಾಡಳಿತ ಸ್ಪಂದಿಸಿದೆ ಎಂದರು.

ಈಗಾಗಲೇ ಅರೆಕಾಡು ಭಾಗದಲ್ಲಿ ಸಂತ್ರಸ್ತರಿ ಗಾಗಿ ಒತ್ತುವರಿ ಜಾಗವನ್ನು ತೆರವುಗೊಳಿಸಿ, ಸಮತಟ್ಟು ಮಾಡುವ ಕಾರ್ಯಕ್ಕೆ ಮುಂದಾಗಿದೆ. ಜಿಲ್ಲಾಧಿಕಾರಿಗಳು ಶಾಶ್ವತ ಸೂರು ಕಲ್ಪಿಸುವ ಭರವಸೆಯನ್ನು ನೀಡಿದ್ದಾರೆ. ಇತ್ತೀಚೆಗೆ ಸಂತ್ರಸ್ತರ ಕೇಂದ್ರಕ್ಕೆ ಉಪವಿಭಾಧಿಕಾರಿ ಜವರೇಗೌಡ ಭೇಟಿ ನೀಡಿ ಸಂತ್ರಸ್ತರೊಂದಿಗೆ ಮಾತುಕತೆ ನಡೆಸಿ ಸರ್ಕಾರದಿಂದ ಸಿಗುವ ತಾತ್ಕಾಲಿಕ ಪರಿಹಾರ ಹಾಗೂ ಒತ್ತುವರಿ ತೆರವುಗೊಳಿಸಿದ ಜಾಗದಲ್ಲಿ ಶಾಶ್ವತ ಸೂರು ಕಲ್ಪಿಸಲಾಗುವುದು ಹಾಗೂ ಶಾಲೆ ಯಲ್ಲಿ ಪರೀಕ್ಷೆ ನಡೆಯುವ ಹಿನ್ನೆಲೆಯಲ್ಲಿ ಸಂತ್ರಸ್ತರು ಸಹಕರಿಸಬೇಕು ಎಂದು ಮನವಿ ಮಾಡಿದ ಹಿನ್ನೆಲೆಯಲ್ಲಿ ನಾವು ಕೇಂದ್ರವನ್ನು ಬಿಟ್ಟು ತೆರಳಲು ಮುಂದಾಗಿದ್ದೇವೆ ಎಂದು ತಿಳಿಸಿದರು. ಒತ್ತುವರಿ ತೆರವು ಜಾಗದಲ್ಲಿ ಅಧಿಕಾರಿಗಳು ವಿಳಂಬ ಮಾಡದೇ ಕೂಡಲೇ ನಿವೇಶನ ಹಂಚಿಕೆ ಕಾರ್ಯಕ್ಕೆ ಮುಂದಾಗಬೇಕು ಎಂದು ಮನವಿ ಮಾಡಿದರು. ಈ ವೇಳೆ ಸಂತ್ರಸರ ಹೋರಾಟ ಸಮಿತಿಯ ಪ್ರಮುಖ ಮಣಿ ಮಾಸ್ಟರ್, ಗ್ರಾಪಂ ಉಪಾಧ್ಯಕ್ಷೆ ಸಫಿಯಾ ಮೊಹಮ್ಮದ್, ಅನೀಫ್ ಮತ್ತಿತರರಿದ್ದರು.

 

 

Translate »