ಉಪಚುನಾವಣೆಯಲ್ಲಿ ಬಿಜೆಪಿ ಭರ್ಜರಿ ಗೆಲುವು: ಜಿಲ್ಲಾದ್ಯಂತ ಸಂಭ್ರಮಾಚರಣೆ
ಕೊಡಗು

ಉಪಚುನಾವಣೆಯಲ್ಲಿ ಬಿಜೆಪಿ ಭರ್ಜರಿ ಗೆಲುವು: ಜಿಲ್ಲಾದ್ಯಂತ ಸಂಭ್ರಮಾಚರಣೆ

December 10, 2019

ಪಟಾಕಿ ಸಿಡಿಸಿ, ಸಿಹಿ ಹಂಚಿ ಖುಷಿಪಟ್ಟ ಕಾರ್ಯಕರ್ತರು, ಮೋದಿ, ಯಡಿಯೂರಪ್ಪ ಪರ ಘೋಷಣೆ
ಮಡಿಕೇರಿ, ಡಿ.9- ರಾಜ್ಯದ 15 ವಿಧಾನ ಸಭಾ ಕ್ಷೇತ್ರಗಳ ಉಪಚುನಾವಣೆಯಲ್ಲಿ ಬಿಜೆಪಿ 12 ಸ್ಥಾನಗಳಲ್ಲಿ ಗೆಲುವನ್ನು ಸಾಧಿಸಿದ ಹಿನ್ನೆಲೆ ಮಡಿಕೇರಿ, ಕುಶಾಲನಗರ, ಸೋಮವಾರ ಪೇಟೆ, ಗೋಣಿಕೊಪ್ಪಲು ಸೇರಿದಂತೆ ಜಿಲ್ಲೆಯ ವಿವಿಧೆಡೆ ಸೋಮವಾರ ಬಿಜೆಪಿ ಕಾರ್ಯ ಕರ್ತರು, ಮುಖಂಡರು ಸಿಹಿ ಹಂಚಿ, ಪಟಾಕಿ ಸಿಡಿಸಿ ಸಂಭ್ರಮಾಚರಣೆ ಮಾಡಿದರು.

ಮಡಿಕೇರಿ ವರದಿ: ನಗರದ ಜನರಲ್ ತಿಮ್ಮಯ್ಯ ವೃತ್ತದಲ್ಲಿ ಪಕ್ಷದ ಕಾರ್ಯಕರ್ತರು ಪಟಾಕಿ ಸಿಡಿಸಿ, ಸಿಹಿ ಹಂಚಿ ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ, ಮುಖ್ಯ ಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಪರ ವಾಗಿ ಘೋಷಣೆಗಳನ್ನು ಕೂಗಿ ಸಂಭ್ರಮಿಸಿದರು.

ವಿಧಾನ ಪರಿಷತ್ ಸದಸ್ಯ ಎಂ.ಪಿ.ಸುನೀಲ್ ಸುಬ್ರಮಣಿ ಮಾತನಾಡಿ, ರಾಜ್ಯದಲ್ಲಿ ಬಿಜೆಪಿ ಸರ್ಕಾರ ಉಳಿದ ಮೂರೂವರೆ ವರ್ಷ ಸುಭದ್ರ ವಾಗಿ ಅಧಿಕಾರ ನಡೆಸಲಿದೆ. ರಾಜ್ಯದ ಜನತೆ ಅನರ್ಹ ಶಾಸಕರಿಗೆ ಸಂಪೂರ್ಣ ಬೆಂಬಲ ನೀಡುವ ಮೂಲಕ ಬಿಜೆಪಿ ಸರ್ಕಾರವನ್ನು ಬೆಂಬಲಿಸಿದ್ದಾರೆ. ಜನರ ನಿರೀಕ್ಷೆ ಹುಸಿಯಾಗ ದಂತೆ ರಾಜ್ಯದಲ್ಲಿ ಉತ್ತಮ ಸರ್ಕಾರ ನಡೆಯ ಲಿದೆ ಎಂದರು.

ಉಪಚುನಾವಣೆಯಲ್ಲಿ 12 ಸ್ಥಾನಗಳಲ್ಲಿ ಬಿಜೆಪಿ ಅಭ್ಯರ್ಥಿಗಳು ಗೆಲುವು ಸಾಧಿಸಿರುವುದ ರಿಂದ ಸರ್ಕಾರದ ಶಕ್ತಿ ಹೆಚ್ಚಾಗಿದ್ದು, ಅಭಿವೃದ್ಧಿ ಕಾರ್ಯಗಳು ಸುಲಲಿತವಾಗಿ ಮುಂದುವರಿ ಯಲಿದೆ. ರಾಜ್ಯದ ಮತದಾರರು ಸ್ಥಿರ ಸರ್ಕಾರವನ್ನು ಬಯಸಿ ದೊಡ್ಡ ಗೆಲುವನ್ನು ನೀಡಿದ್ದಾರೆ ಎಂದು ಹೇಳಿದರು.

ಈ ವೇಳೆ ನಗರಾಧ್ಯಕ್ಷ ಮಹೇಶ್ ಜೈನಿ, ಪ್ರಧಾನ ಕಾಯದರ್ಶಿ ಜಗದೀಶ್, ಉಮೇಶ್ ಸುಬ್ರಮಣಿ, ತಾಲೂಕು ಅಧ್ಯಕ್ಷ ಕಾಂಗೀರ ಸತೀಶ್, ಮಹಿಳಾ ಮೋರ್ಚಾದ ನಗರಾಧ್ಯಕ್ಷೆ ಅನಿತಾ ಪೂವಯ್ಯ, ಉಪಾಧ್ಯಕ್ಷೆ ಕನ್ನಿಕೆ ಸೇರಿ ದಂತೆ ನಗರಸಭಾ ಮಾಜಿ ಸದಸ್ಯರು, ಪಕ್ಷದ ಪದಾಧಿಕಾರಿಗಳು ಹಾಗೂ ಸದಸ್ಯರು ಹಾಜರಿದ್ದರು.

ಕುಶಾಲನಗರ ವರದಿ: ಪಟ್ಟಣದ ಗಣಪತಿ ದೇವಾಲಯ ಮುಂಭಾಗ ಬಿಜೆಪಿ ನಗರ ಘಟಕದ ವತಿಯಿಂದ ವಿಜಯೋತ್ಸವ ಆಚರಿಸಲಾಯಿತು. ಈ ವೇಳೆ ಪಕ್ಷದ ಪ್ರಮುಖರು, ಕಾರ್ಯಕರ್ತರು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಪರವಾಗಿ ಘೋಷಣೆ ಕೂಗಿ ಹರ್ಷ ವ್ಯಕ್ತಪಡಿಸಿದರು.

ಬಿಜೆಪಿ ನಗರ ಘಟಕದ ಅಧ್ಯಕ್ಷ ಕೆ.ಜಿ.ಮನು ಮಾತನಾಡಿ, ಈ ಹಿಂದಿನ ಸಮ್ಮಿಶ್ರ ಸರ್ಕಾರದ ದುರಾಡಳಿತದಿಂದ ಬೇಸತ್ತಿದ್ದ ರಾಜ್ಯದ ಜನತೆ ಮುಂದಿನ ಅವಧಿಗಳ ಕಾಲ ಉತ್ತಮ ಆಡಳಿತ ಬಯಸಿ ಬಿಜೆಪಿಗೆ ಬೆಂಬ ವ್ಯಕ್ತಪಡಿಸಿದ್ದಾರೆ ಎಂದರು.

ಬಿಜೆಪಿ ಹಿರಿಯ ಮುಖಂಡ ಜಿ.ಎಲ್.ನಾಗ ರಾಜು ಮಾತನಾಡಿ, ವಿಧಾನಸಭಾ ಚುನಾವಣೆ ಯಲ್ಲಿ ರಾಜ್ಯದಲ್ಲಿ ಉಂಟಾದ ಅಸ್ತಿರತೆಯನ್ನು ದುರ್ಬಳಕೆ ಮಾಡಿಕೊಂಡ ಕಾಂಗ್ರೆಸ್ ಜೆಡಿಎಸ್ ಸರ್ಕಾರ ರಚಿಸಿತ್ತು. ಈ ಸರ್ಕಾರಕ್ಕೆ ರಾಜೀನಾಮೆ ನೀಡಿ ಹೊರಬಂದ 15 ಶಾಸಕರ ರಾಜೀನಾಮೆ ಅಂಗೀಕರಿಸದೆ ಸತಾಯಿಸಿ ಅನರ್ಹಗೊಳಿಸಿದ ಸ್ಪೀಕರ್ ರಮೇಶ್‍ಕುಮಾರ್ ಮತ್ತು ಅವರ ಸಂಗಡಿಗರಿಗೆ ಇಂದು ಸರಿಯಾದ ಉತ್ತರ ನೀಡ ಲಾಗಿದೆ. ಇಂದಿನ ಉಪಸಮರ ಸಿದ್ದರಾಮಯ್ಯ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡು ವಂತೆ ಮಾಡಿದೆ ಎಂದರು.

ಇದೇ ಸಂದರ್ಭ ಕಾರ್ಯಕರ್ತರು ಪಟಾಕಿ ಸಿಡಿಸಿ ಸಂಭ್ರಮಿಸಿದರು. ವಿಜಯೋತ್ಸವದಲ್ಲಿ ಬಿಜೆಪಿ ಮುಖಂಡರಾದ ಚಿಲ್ಲನ ಗಣಿಪ್ರಸಾದ್, ಮಂಡೇಪಂಡ ಬೋಸ್ ಮೊಣ್ಣಪ್ಪ, ಶಿವಾಜಿ, ವೈಶಾಖ್, ಚರಣ್, ಹೆಚ್.ಎನ್.ರಾಮಚಂದ್ರ, ವರದ, ವೇದಾವತಿ ಮತ್ತಿತರರು ಇದ್ದರು.

ಗೋಣಿಕೊಪ್ಪಲು ವರದಿ: ಗೋಣಿಕೊಪ್ಪ ಲಿನ ಬಸ್ ನಿಲ್ದಾಣದಲ್ಲಿ ಬಿಜೆಪಿ ಕಾರ್ಯಕರ್ತರು ಪಟಾಕಿ ಸಿಡಿಸಿ, ಸಿಹಿ ಹಂಚಿ ವಿಜಯೋತ್ಸವ ಆಚರಿಸಿದರು. ಜಿಪಂ ಸದಸ್ಯ ಸಿ.ಕೆ.ಬೋಪಣ್ಣ ಮಾತನಾಡಿ, ರಾಜ್ಯದಲ್ಲಿ ಬಿಜೆಪಿ ಸರ್ಕಾರ ಮುಂದಿನ ದಿನಗಳಲ್ಲಿ ಮತ್ತುಷ್ಟು ಅಭಿವೃದ್ಧಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ಬಡ ಜನತೆಯ ಪರವಾಗಿ ಕೆಲಸ ಮಾಡಲಿದೆ ಎಂದರು. ಈ ವೇಳೆ ಮುಖಂಡರಾದ ಜಪ್ಪು ಸುಬ್ಬಯ್ಯ, ಮಹಮ್ಮದ್ ಚರ್ದು, ನವೀನ್ ಪೂಜಾರಿ, ತಾಪಂ ಸದಸ್ಯ ಜಯಪೂವಯ್ಯ, ವೀರಾಜಪೇಟೆಯ ಜೋಕೀಂ ಮುಂತಾ ದವರು ಹಾಜರಿದ್ದರು.

ಸೋಮವಾರಪೇಟೆ ವರದಿ: ಉಪ ಚುನಾವಣೆ ಯಲ್ಲಿ ಬಿಜೆಪಿ ಅಧಿಕ ಸ್ಥಾನ ಗಳಿಸಿದ ಹಿನ್ನೆಲೆ ಯಲ್ಲಿ ಪಟ್ಟಣದಲ್ಲಿ ಬಿಜೆಪಿ ಕಾರ್ಯಕರ್ತರು ಶಾಸಕ ಅಪ್ಪಚ್ಚು ರಂಜನ್ ನೇತೃತ್ವದಲ್ಲಿ ವಿಜಯೋತ್ಸವ ಆಚರಿಸಿದರು. ರಾಜ್ಯ ಸರ್ಕಾರ ಸುಭದ್ರವಾಗಿರುವ ಬಗ್ಗೆ ಸಂತಸ ವ್ಯಕ್ತಪಡಿಸಿದ ಶಾಸಕ ಅಪ್ಪಚ್ಚು ರಂಜನ್, ಮುಂದಿನ ದಿನಗಳಲ್ಲಿ ಕೊಡಗಿನ ಸಮಗ್ರ ಅಭಿವೃದ್ಧಿಗೆ ಶ್ರಮಿಸಲಾಗುವುದು ಎಂದು ತಿಳಿಸಿದರು.

ಈ ಫಲಿತಾಂಶ ರಾಜ್ಯದ ಮುಖ್ಯಮಂತ್ರಿ ಯಡಿಯೂರಪ್ಪನವರ ಅಭಿವೃದ್ಥಿ ಪರವಾದ ಆಡಳಿತ ಮುಂದುವರೆಯಲು ಜನತೆ ಮಾಡಿ ರುವ ಆಶೀರ್ವಾದ. ಮುಂದಿನ ಮೂರುವರೆ ವರ್ಷಗಳು ರಾಜ್ಯ ಅಭಿವೃದ್ಧಿ ಪಥದಲ್ಲಿ ಸಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಈ ವೇಳೆ ತಾಪಂ ಸದಸ್ಯ ಧರ್ಮಪ್ಪ , ವಿಧಾನ ಪರಿಷತ್ ಮಾಜಿ ಸದಸ್ಯ ಎಸ್.ಜಿ. ಮೇದಪ್ಪ ತಾಲೂಕು ಬಿಜೆಪಿ ಅಧ್ಯಕ್ಷ ಮನು ಕುಮಾರ್ ರೈ, ನಗರಾಧ್ಯಕ್ಷ ಎಸ್.ಆರ್. ಸೋಮೇಶ ಮತ್ತಿತರರು ಇದ್ದರು. ಪುಟ್ಟಪ್ಪ ವೃತ್ತದಲ್ಲಿ ಪಟಾಕಿ ಸಿಡಿಸಲಾಯಿತು.

Translate »