ಮೈಸೂರು, ಜು.25(ಪಿಎಂ)- ಮೈಸೂರಿನ ಹಳೇ ಸಂತೇಪೇಟೆಯಲ್ಲಿ ವಾಹನ ನಿಲುಗಡೆಗೆ ಸೂಕ್ತ ವ್ಯವಸ್ಥೆ ಕಲ್ಪಿಸುವಂತೆ ಆಗ್ರಹಿಸಿ ಇಲ್ಲಿನ ನೂರಾರು ವರ್ತಕರು ಶಿವರಾಂಪೇಟೆಯಲ್ಲಿರುವ ಸಂಚಾರ ವಿಭಾಗದ ಎಸಿಪಿ ಕಚೇರಿಗೆ ಗುರುವಾರ ತೆರಳಿ, ಎಸಿಪಿ ಜಿ.ಎನ್. ಮೋಹನ್ ಅವರಿಗೆ ಮನವಿ ಸಲ್ಲಿಸಿದರು.
ಇಂದು ಬೆಳಿಗ್ಗೆ ಅಂಗಡಿ-ಮುಂಗಟ್ಟುಗಳನ್ನು ಬಂದ್ ಮಾಡಿ ವಹಿವಾಟು ಸ್ಥಗಿತಗೊಳಿಸಿದ ವರ್ತಕರು, ನೂರಾರು ಸಂಖ್ಯೆಯಲ್ಲಿ ಎಸಿಪಿ ಜಿ.ಎನ್.ಮೋಹನ್ ಅವರನ್ನು ಭೇಟಿ ಮಾಡಿದರು. ಹಳೇ ಸಂತೇಪೇಟೆಯಲ್ಲಿ ಸೂಕ್ತ ಪಾರ್ಕಿಂಗ್ ವ್ಯವಸ್ಥೆ ಇಲ್ಲ. ಸ್ಥಳ ಪರಿಶೀಲಿಸಿ ಪಾರ್ಕಿಂಗ್ ಸೌಲಭ್ಯ ಕಲ್ಪಿಸಿ ಕೊಡಬೇಕೆಂದು ಕೋರಿದರು.
ದ್ವಿಚಕ್ರ ವಾಹನ ಮತ್ತು ಇನ್ನಿತರೆ ವಾಹನಗಳಿಗೆ ಪ್ರತ್ಯೇಕ ಪಾರ್ಕಿಂಗ್ ವ್ಯವಸ್ಥೆಗೆ ಕ್ರಮ ಕೈಗೊಳ್ಳಬೇಕು. ಜೊತೆಗೆ ಅನ್‍ಲೋಡ್ ಮಾಡಲು ಸಮಯ ನಿಗದಿ ಮಾಡಬೇಕು. ಪಾರ್ಕಿಂಗ್ ಹಾಗೂ ಸಂಚಾರ ನಿಯಮ ಗಳಿಗೆ ಸಂಬಂಧಿಸಿದಂತೆ ಸೂಚಕ ಫಲಕಗಳನ್ನು ಅಳವಡಿಸಲು ಕ್ರಮ ವಹಿಸಬೇಕು ಎಂದು ವರ್ತಕರು ಮನವಿ ಮಾಡಿದರು.
`ಮೈಸೂರು ಮಿತ್ರ’ನೊಂದಿಗೆ ವರ್ತಕ ಪುಟ್ಟರಾಜು ಮಾತನಾಡಿ, ಸಂತೇಪೇಟೆಯಲ್ಲಿ ಪಾರ್ಕಿಂಗ್‍ಗೆ ಸ್ಥಳಾ ವಕಾಶವನ್ನು ಸಮರ್ಪಕವಾಗಿ ನಿಗದಿ ಮಾಡಿಲ್ಲ. ಇದರಿಂದ ವಾಹನ ನಿಲುಗಡೆ ಮಾಡಲು ಗ್ರಾಹಕರಿಗೆ ಸಮಸ್ಯೆಯಾಗುತ್ತಿದೆ. ಇದಕ್ಕೆ ಪರಿಹಾರ ಕಂಡು ಕೊಳ್ಳುವ ಸಲುವಾಗಿ ಅಂಗಡಿ ಮುಂಗಟ್ಟು ಬಂದ್ ಮಾಡಿ ಮನವಿ ಸಲ್ಲಿಸಿದ್ದೇವೆ ಎಂದು ತಿಳಿಸಿದರು.
ಹಿಂದಿನಿಂದಲೂ ಇಲ್ಲಿ ಪಾರ್ಕಿಂಗ್ ಸಂಬಂಧ ಸಮಸ್ಯೆ ಇದೆ. ಆದರೆ ಅಂತಹ ದೊಡ್ಡ ಸಮಸ್ಯೆಯೇನೂ ಆಗಿರಲಿಲ್ಲ. ಈಗ ಹೊಸ ಸಂಚಾರ ನಿಯಮಗಳ ಹಿನ್ನೆಲೆಯಲ್ಲಿ ಪಾರ್ಕಿಂಗ್ ವ್ಯವಸ್ಥೆ ಇಲ್ಲವಾದರೆ ದಂಡ ಕಟ್ಟುವುದು ಅನಿವಾರ್ಯವಾಗುತ್ತದೆ. ಹೀಗಾಗಿ ಪಾರ್ಕಿಂಗ್‍ಗೆ ಸ್ಥಳ ನಿಗದಿ ಮಾಡುವಂತೆ ಮನವಿ ಸಲ್ಲಿಸಿದ್ದೇವೆ. ಸಂತೇಪೇಟೆಯಲ್ಲಿ ದಿನಸಿ ಮಳಿಗೆಗಳು ಸೇರಿದಂತೆ ಅನೇಕ ವಿಧದ ಮಳಿಗೆಗಳು 600ಕ್ಕೂ ಹೆಚ್ಚಿವೆ ಎಂದರು.
ಮನವಿ ಸ್ವೀಕರಿಸಿದ ಎಸಿಪಿ ಜಿ.ಎನ್.ಮೋಹನ್, ಶನಿವಾರ (ಜು.27) ಸ್ಥಳಕ್ಕೆ ಖುದ್ದು ಭೇಟಿ ನೀಡಿ ಪರಿ ಶೀಲಿಸಿ ಸೂಕ್ತ ಕ್ರಮ ಕೈಗೊಳ್ಳುವ ಮೂಲಕ ಸಮಸ್ಯೆ ಬಗೆಹರಿಸುವುದಾಗಿ ಭರವಸೆ ನೀಡಿದರು. ನಗರಪಾಲಿಕೆ ಸದಸ್ಯೆ ಪ್ರಮೀಳಾ ಭರತ್ ನೇತೃತ್ವದಲ್ಲಿ ವರ್ತಕರು ಮನವಿ ಸಲ್ಲಿಸಿ, ಬಳಿಕ ಎಂದಿನಂತೆ ತಮ್ಮ ಮಳಿಗೆ ಗಳನ್ನು ತೆರೆದು ವ್ಯಾಪಾರ ವಹಿವಾಟು ನಡೆಸಿದರು.