ವಿರಾಜಪೇಟೆ: ರಸ್ತೆ ಅಭಿವೃದ್ಧಿ ಕಾರ್ಯ ಗಳನ್ನು ಮಾಡುವ ಸಂದರ್ಭ ತೋಟದ ಮಾಲಿಕರು ರಸ್ತೆಗೆ ಸಂಬಾಂದಿಸಿದ ಜಾಗವನ್ನು ಬಿಟ್ಟು ಕೊಡುವ ಮೂಲಕ ಸಹಕಾರ ನೀಡುವಂತಾಗಬೇಕು ಎಂದು ವಿರಾಜಪೇಟೆ ಶಾಸಕ ಕೆ.ಜಿ.ಬೋಪಯ್ಯ ಹೇಳಿದರು.
ವಿರಾಜಪೇಟೆ ಸಮೀಪದ ಕೆದಮುಳ್ಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚೂರಿಯಾಲು ಪೊನ್ನಂಗಾಲ ತಮ್ಮೆ ದೇವಸ್ಥಾನಕ್ಕೆ ಹೋಗುವ ರಸ್ತೆಗೆ ಲೋಕೊಪ ಯೋಗಿ ಇಲಾಖೆಯ ವಿಶೇಷ ಘಟಕದಿಂದ ರೂ,10 ಲಕ್ಷದ ಕಾಂಕ್ರೀಟ್ ರಸ್ತೆ ಕಾಮಗಾರಿ ಹಾಗೂ ಶಾಸಕರ ವಿಶೇಷ ಅನುದಾನದಲ್ಲಿ ರೂ,5 ಲಕ್ಷದ ಕಾಮಗಾರಿ ಡಾಂಬರೀಕರಣಗೊಂಡ ರಸ್ತೆಯನ್ನು ಉದ್ಘಾಟಿಸಿದ ಶಾಸಕ ಬೋಪಯ್ಯ ಅವರು ಮಾತನಾಡಿ, ಪ್ರಕೃತಿ ವಿಕೋಪ ಯೋಜನೆಯಡಿಯಲ್ಲಿ ಗ್ರಾಮೀಣ ಪ್ರದೇಶದ ರಸ್ತೆ ಕಾಮಗಾರಿಗಳು ನಡೆಯುತ್ತಿದ್ದು ಕಾಮಗಾರಿ ಕಳಪೆಯಾಗದಂತೆ ಸ್ಥಳೀಯರು ಎಚ್ಚರ ವಹಿಸಬೇಕು ಎಂದರು. ಇದಕ್ಕೂ ಮೊದಲು ಕಡಂಗ ಮರೂರು ಗ್ರಾಮದಿಂದ ಕೆದಮುಳ್ಳೂರು ರಸ್ತೆಗೆ ರೂ,15 ಲಕ್ಷದ ಡಾಂಬರೀಕರಣ ಕಾಮಗಾರಿಗೆ ಶಾಸಕರು ಭೂಮಿ ಪೂಜೆ ನೆರವೇರಿಸಿದ್ದರು.
ಜಿಲ್ಲಾ ಪಂಚಾಯಿತಿ ಸದಸ್ಯ ಅಚ್ಚಪಂಡ ಮಹೇಶ್ ಗಣಪತಿ ಮಾತನಾಡಿ, ಈಗಾಗಲೇ ಕೆಲವು ರಸ್ತೆಗಳ ಕಾಮಗಾರಿ ಮುಗಿದಿದ್ದು ಇನ್ನು ಉಳಿದಿರುವ ರಸ್ತೆ ಕಾಮಗಾರಿಗಳನ್ನು ಕೆಲವು ದಿನಗಳಲ್ಲಿ ಪ್ರಾರಂಭಿಸಲಾ ಗುವುದು ಎಂದರು.
ಈ ಸಂದರ್ಭ ಗ್ರಾಮಸ್ಥರಾದ ರವಿ ಅಯ್ಯಣ್ಣ, ಸ್ಥಾನೀಯ ಸಮಿತಿಯ ಕೆ.ಕೆ.ಸುರೇಶ್, ವಧು ದೇವಯ್ಯ, ಗ್ರಾಮ ಪಂಚಾಯಿತಿ ಸದಸ್ಯರಾದ ಪರಮೇಶ್ವರ, ಕಿರಣ್ ಕುಮಾರ್, ಮಾಜಿ ಸದಸ್ಯ ಚೋಟು ಬಿದ್ದಪ್ಪ, ಹಾಗೂ ಗ್ರಾಮಸ್ಥರು ಭಾಗವಹಿಸಿದ್ದರು.