ಹಸು ಸಾಕಾಣಿಕೆಯಿಂದ ಆರ್ಥಿಕ ಅಭಿವೃದ್ಧಿ ಸಾಧ್ಯ ಜಿಲ್ಲಾ ಪಂಚಾಯತ್ ಸದಸ್ಯ ಸಿ.ಕೆ. ಬೋಪಣ್ಣ ಅಭಿಮತ
ಕೊಡಗು

ಹಸು ಸಾಕಾಣಿಕೆಯಿಂದ ಆರ್ಥಿಕ ಅಭಿವೃದ್ಧಿ ಸಾಧ್ಯ ಜಿಲ್ಲಾ ಪಂಚಾಯತ್ ಸದಸ್ಯ ಸಿ.ಕೆ. ಬೋಪಣ್ಣ ಅಭಿಮತ

February 5, 2019

ಗೋಣಿಕೊಪ್ಪಲು: ಹಸು ಸಾಕಾಣೆಯಿಂದ ಆರ್ಥಿಕ ಅಭಿವೃದ್ದಿಯನ್ನು ಉತ್ತಮ ಪಡಿಸಿಕೊಳ್ಳಬಹುದೆಂದು ಜಿಲ್ಲಾ ಪಂಚಾಯ್ತಿಯ ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿಯ ಅಧ್ಯಕ್ಷ ಸಿ.ಕೆ.ಬೋಪಣ್ಣ ಅಭಿಪ್ರಾಯಪಟ್ಟರು.

ಜಿಲ್ಲಾ ಪಂಚಾಯ್ತಿ, ಪಶುಪಾಲನೆ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆ, ಪಶು ವೈದ್ಯಕೀಯ ಪರೀಕ್ಷಕರ ತರಬೇತಿ ಕೇಂದ್ರ ಹಾಗೂ ಕೃಷಿ ವಿಜ್ಞಾನ ಕೇಂದ್ರ ಸಂಯುಕ್ತ ಆಶ್ರಯದಲ್ಲಿ ಇಲ್ಲಿನ ಕೃಷಿ ವಿಜ್ಞಾನ ಕೇಂದ್ರ ಸಭಾಂಗಣದಲ್ಲಿ ಆಯೋಜಿಸಿದ್ದ ರೈತರಿಗೆ ಆಧುನಿಕ ಹೈನುಗಾರಿಕೆ ತರಬೇತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ರೈತರ ಜೀವನ ಮಟ್ಟ ಸುಧಾರಿಸಲು ಹೈನುಗಾರಿಕೆ ಉತ್ತಮ ವಾಗಲಿದೆ. ಆಧುನಿಕ ರೀತಿಯಲ್ಲಿ ಹೈನುಗಾರಿಕೆಯನ್ನು ರೈತರು ಅಳವಡಿಸಿಕೊಂಡಲ್ಲಿ ಇನ್ನಷ್ಟು ಅಭಿವೃದ್ದಿ ಕಾಣಲು ಸಹಕಾರಿ ಯಾಗಲಿದೆ ಎಂದರು. ಮಡಿಕೇರಿಯ ಪಶು ವೈದ್ಯಕೀಯ ಸೇವಾ ಇಲಾಖೆಯ ಉಪನಿರ್ದೇಶಕ ಡಾ. ಎ.ಬಿ.ತಮ್ಮಯ್ಯ ಮಾತನಾಡಿ, ಸರ್ಕಾರದ ಯೋಜನೆಗಳನ್ನು ಹಾಗೂ ಸವಲತ್ತು ಹಾಗೂ ಇಲಾಖೆ ನೀಡುವ ತರಬೇತಿಯ ಮಾಹಿತಿಗಳನ್ನು ತಿಳಿದುಕೊ ಳ್ಳುವ ಮೂಲಕ ಆರ್ಥಿಕವಾಗಿ ಸಬಲರಾಗುವಂತೆ ತಿಳಿಸಿದರು.

ತೋಟಗಾರಿಕೆ ವಿಷಯ ತಜ್ಞ ಕೆ.ಎ. ದೇವಯ್ಯ ಮಾತನಾಡಿ, ಅತೀ ಶೀಘ್ರವಾಗಿ ಹೈನುಗಾರಿಕೆಯಿಂದ ರೈತರು ಲಾಭ ಪಡೆಯ ಬಹುದು. ಪಶು ಸಂಗೋಪನೆಯಲ್ಲಿ ತೊಡಗಿಸಿಕೊಂಡವರು ಇಂದು ಆರ್ಥಿಕತೆಯಲ್ಲಿ ಮುಂದೆ ಇದ್ದಾರೆ ಎಂದರು.
ಹಾಸನ ಪಶು ವೈದ್ಯಕೀಯ ಪರೀಕ್ಷಕರ ತರಬೇತಿ ಕೇಂದ್ರದ ಮುಖ್ಯ ತರಬೇತುದಾರ ಡಾ.ಅಂಬುಜಾಕ್ಷಿ, ಗೋಣಿಕೊಪ್ಪ ಪಶು ವೈದ್ಯಕೀಯ ಸಹಾಯಕ ನಿರ್ದೇಶಕ ಡಾ.ರಮೇಶ್, ವಿರಾಜಪೇಟೆ ಪಶು ವೈದ್ಯಾಧಿಕಾರಿ ಡಾ.ಶಾಂತೇಶ್, ಶ್ರೀಮಂಗಲ ಪಶು ವೈದ್ಯಾಧಿಕಾರಿ ಡಾ.ಗಿರೀಶ್, ಬಾಳೆಲೆ ಪಶು ವೈದ್ಯಾಧಿಕಾರಿ ಡಾ.ಭವಿಷ್ಯ ಕುಮಾರ್, ಕೆವಿಕೆಯ ವಿಷಯ ತಜ್ಞ ಡಾ.ಸುರೇಶ್ ವಿಷಯ ಮಂಡನೆ ಮಾಡಿದರು.

Translate »